ರಾಷ್ಟ್ರೀಯ ಬಾಲಕಿಯರ ದಿನಾಚರಣೆ ಪ್ರಯುಕ್ತ ಉತ್ತರಾಖಂಡ ಸರ್ಕಾರ ವಿನೂತನ ಪ್ರಯೋಗ ನಡೆಸಿದ್ದು, ಒಂದು ದಿನದ ಮಟ್ಟಿಗೆ 20 ರ ಹರೆಯದ ಹುಡುಗಿಯೊಬ್ಬಳನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದೆ.
ಹರಿದ್ವಾರದ ಸೃಷ್ಟಿ ಗೋಸ್ವಾಮಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಯುವತಿ. ಒಂದು ದಿನ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಸಾಂಕೇತಿಕವಾಗಿ ಪಡೆದುಕೊಂಡ ಸೃಷ್ಟಿ, ಉತ್ತರಾಖಂಡದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಅದು ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿಯಾದರೂ ಸಹ.
ಸಿಎಂ ಹುದ್ದೆಗೆ ಸಾಂಕೇತಿಕವಾಗಿ ಆರೋಹಣವಾದ ಸೃಷ್ಟಿಯನ್ನು ಪ್ರಸಕ್ತ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಅನುಮೋದಿಸಿದ್ದಾರೆ.
ಜನವರಿ 24 ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಂದು ಉತ್ತರಾಖಂಡದ ಸಿಎಂ ಆಗಲು ನನಗೆ ಒಂದು ದಿನ ಅವಕಾಶ ನೀಡಿದ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ನಾನು ಪೂರ್ಣ ಹೃದಯದಿಂದ ಧನ್ಯವಾದ ಅರ್ಪಿಸುತ್ತೇನೆ., ವಿವಿಧ ಇಲಾಖೆಗಳ ಅಧಿಕಾರಿಗಳು ನನ್ನ ಮುಂದೆ ಐದು ನಿಮಿಷಗಳ ವಿವಿಧ ಯೋಜನೆಗಳ ಪ್ರಸ್ತುತಿ ಪಡಿಸಿದ್ದಾರೆ. ನಾನು ಅವರಿಗೆ ಸಲಹೆಗಳನ್ನು ನೀಡಿದ್ದೇನೆ ಎಂದು ಸೃಷ್ಟಿ ಹೇಳಿದ್ದಾರೆ.
ಮದರ್ ಥೆರೆಸಾ ಮತ್ತು ಹರಿದ್ವಾರ ಮೂಲದ ಭಾರತೀಯ ಹಾಕಿ ತಂಡದ ಆಟಗಾರ್ತಿ ವಂದನಾ ಕಟಾರಿಯಾರನ್ನು ಸ್ಪೂರ್ತಿಯಾಗಿರಿಸಿಕೊಂಡಿರುವ ಸೃಷ್ಟಿ, ಕೃಷಿ ವಿದ್ಯಾರ್ಥಿ. ರಾಜ್ಯದ ಜನಸಂಖ್ಯೆಯ 65% ಕ್ಕಿಂತ ಹೆಚ್ಚು ಜನರ ಜೀವನೋಪಾಯವಾಗಿರುವ ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಲು ಬಯಸುವುದಾಗಿ ಸೃಷ್ಟಿ ಹೇಳಿದ್ದಾರೆ.
“ಈ ಕ್ರಮವು ರಾಜ್ಯ ಮತ್ತು ದೇಶದ ಹುಡುಗಿಯರನ್ನು ದೊಡ್ಡ ಕನಸು ಕಾಣಲು ಪ್ರೇರೇಪಿಸುತ್ತದೆ ಮತ್ತು ಹುಡುಗರಿಗಿಂತ ಎಂದಿಗೂ ತಾವು ಕೀಳು ಎಂಬ ಕೀಳರಿಮೆ ಅನುಭವಿಸಲು ಬಿಡುವುದಿಲ್ಲ. ಹುಡುಗಿಯರು ಕೂಡಾ ಹುಡುಗರಿಗೆ ಸಮಾನರು ಮತ್ತು ಕಠಿಣ ಪರಿಶ್ರಮದಿಂದ ತಮ್ಮ ಕನಸುಗಳನ್ನು ಸಾಧಿಸಬಹುದು ಎಂಬುದನ್ನು ಸಾಬೀತು ಪಡಿಸಲು ಪ್ರೇರೇಪಿಸುತ್ತದೆ” ಎಂದು ಸಿಎಂ ರಾವತ್ ಅವರ ಮಾಧ್ಯಮ ಸಂಯೋಜಕರಾದ ದರ್ಶನ್ ಸಿಂಗ್ ರಾವತ್ ಹೇಳಿದ್ದಾರೆ