ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀನಿವಾಸ ಸಾಗರ ಕಾಲುವೆಗೆ ನಿತ್ಯ ಕಾರ್ಖಾನೆಗಳಿಂದ ವಿಷಯುಕ್ತ ತ್ಯಾಜ್ಯ ಹರಿದು ಬಂದ ಪರಿಣಾಮ ಸುತ್ತಲಿನ ವಾತಾವರಣ ಕಲುಷಿತಗೊಂಡಿದ್ದು, ಇದೀಗ ಸ್ಥಳೀಯ ಜನರು ಆತಂಕಕ್ಕೆ ಈಡಾಗಿದ್ದಾರೆ.
ಕಾಲುವೆಯ ಸುಮಾರು ಒಂದು ಕಿಲೋ ಮೀಟರ್ ದೂರದ ಸುತ್ತಲಿನ ಪ್ರದೇಶದ ಜನರು ಕೆಲವು ದಿನಗಳಿಂದ ಕಲುಷಿತ ಗಾಳಿಯನ್ನೇ ಉಸಿರಾಡುತ್ತಿದ್ದು, ಹೀಗೆಯೇ ಮುಂದುವರೆದರೆ ನಾವುಗಳು ಜೀವ ಕಳೆದುಕೊಳ್ಳುವ ಹಂತ ತಲುಪುತ್ತೇವೆ ಎನ್ನುವ ಆತಂಕದ ಜನರಲ್ಲಿ ಮನೆಮಾಡಿದೆ.
ಶ್ರೀನಿವಾಸ ಸಾಗರ ಕಾಲುವೆಯ ಸುತ್ತ ಮುತ್ತ ಅನೇಕ ಕುಟುಂಬಗಳು ಜೀವನ ನಡೆಸುತ್ತಿದ್ದು, ಬೆಳಗ್ಗೆ ಎದ್ದ ತಕ್ಷಣ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿತ್ಯ ನಿರ್ಮಾಣವಾಗಿದೆ. ಇದಕ್ಕೆಲ್ಲಾ ಕಾರಣ ಕಾರ್ಖಾನೆಯ ತ್ಯಾಜ್ಯ ನೀರಿನ ಜೊತೆಗೆ ಬೆರೆತು ಜೊತೆಗೆ ಗಾಳಿಯಲ್ಲ ವಿಷಪೂರಿತವಾಗಿದೆ.
ಮಧ್ಯರಾತ್ರಿ ಯಾರೂ ಇಲ್ಲದ ವೇಳೆ ಟ್ಯಾಂಕರ್ ಗಳಲ್ಲಿ ವಿಷ ರಾಸಾಯನಿಕಗಳನ್ನು ತಂದು ಬೇಕಾಬಿಟ್ಟಿಯಾಗಿ ಕಾಲುವೆಗೆ ಸುರಿಯುತ್ತಿದ್ದಾರೆ. ಇದರಿಂದ ಕಾಲುವೆ ನೀರು ಕಂದು ಬಣ್ಣಕ್ಕೆ ತಿರುಗಿದ್ದು, ಹುಲ್ಲು, ಗಿಡಗಳು ಸುಟ್ಟು ಹೋಗಿರುವ ಚಿತ್ರಣ ಎಲ್ಲಡೆ ಕಾಣುತ್ತಿದೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಜನತೆ ಬಳಕೆ ಮಾಡುತ್ತಿರುವ ಅಂತರ್ಜಲ ವಿಷಪೂರಿತ ಎಂದು ಈಗಾಗಲೇ ಸಂಶೋಧನಾ ವಿಜ್ಞಾನಿಗಳ ವರದಿ ಹೇಳಿದೆ. ಇದಕ್ಕೆ ಕಾರಣಗಳು ಕಾರ್ಖಾನೆಗಳಿಂದ ವಿಷಯುಕ್ತ ತ್ಯಾಜ್ಯ ನೀರಿನಲ್ಲಿ ಮಿಶ್ರಣವಾಗಿ ಅದು ಭೂಮಿಯಲ್ಲಿ ಇಂಗಿ ಅಲ್ಲಿಯ ಅಂತರ್ಜಲದಲ್ಲಿ ಯುರೇನಿಂಯಂ ಕಂಡುಬರುತ್ತಿದೆ ಎನ್ನುವ ಮಾತುಗಳು ಕೂಡ ಜಿಲ್ಲೆಯಲ್ಲಿ ಕೇಳಿಬರುತ್ತವೆ.

ಕುಡಿಯುವ ನೀರಿನಲ್ಲಿ ಯುರೇನಿಂಯಂ ಅಂಶ ಹೆಚ್ಚಾಗಿರುವುದರಿಂದ ಇದು ಕ್ಯಾನ್ಸರ್ ಕಾಯಿಲೆಗೆ ಕಾರಣವಾಗಬಹುದು ಎಂದು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿಗಳು ಜಿಲ್ಲೆಯ 27 ಗ್ರಾಮಗಳಲ್ಲಿ ನಡೆಸಿದ ಸಂಶೋಧನೆಯ ವರದಿಯಲ್ಲಿ ತಿಳಿಸಿದ್ದಾರೆ. ಒಟ್ಟು 73 ಗ್ರಾಮಗಳಲ್ಲಿ ಅಧ್ಯಯನ ನಡೆಸಲಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯುರೇನಿಯಂ ಸಾಂದ್ರತೆ ಪ್ರಮಾಣ ಅತೀ ಹೆಚ್ಚಾಗಿ ಕಂಡುಬಂದಿದೆ.
ಕುಡಿಯಲು ಬಳಕೆಯಾಗುತ್ತಿದೆ ಕಾಲುವೆ ನೀರು !
ಯುರೇನಿಯಂ ಅಂಶ ಹೊಂದಿರುವ ನೀರನ್ನೇ ಕುಡಿಯಲು ಬಳಕೆ ಮಾಡಲಾಗುತ್ತಿದೆ. ಹೈನುಗಾರಿಕೆ, ಕೃಷಿಗೂ ಈ ನೀರನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನಿಂದಲೂ ತ್ಯಾಜ್ಯ ನೀರನ್ನು ಟ್ಯಾಂಕ್ ಗಳಲ್ಲಿ ತುಂಬಿಕೊಂಡು ಬಂದು ಹರಿಯ ಬಿಡುತ್ತಿದ್ದು, ಶುದ್ಧೀಕರಣ ಮಾಡದೇ ಕೆರೆಗಳಿಗೆ ಹರಿದುಬಿಡಲಾಗುತ್ತಿದೆ. ಇದು ಜಿಲ್ಲೆಯ ಜನರನ್ನು ಸಾವೀಗೆ ದೂಡಿದಂತೆ ಎಂದು ಜಿಲ್ಲಾ ಶಾಶ್ವತ ನೀರಾವರಿ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವ್ಯವಸ್ಥೆ ಮತ್ತು ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯವರು ಚೆಕ್ ಪೋಸ್ಟ್ ಗಳನ್ನು ತೆರೆದು, ಇಂಥ ಅಪಾಯಯಕಾರಿ ದುಷ್ಕೃತ್ಯಗಳನ್ನು ತಡೆಯಲು ಕಾರ್ಖಾನೆಗಳಿಗೆ ಸೂಕ್ತ ನಿರ್ದೇಶನಗಳನ್ನು ಕೊಡುತ್ತಾರಾ ಎಂಬುದನ್ನು ಕಾದುನೋಡಬೇಕು.