ಚಿಕ್ಕಮಗಳೂರು, ಜ. 26, 2025: ಜಿಲ್ಲೆಯಾದ್ಯಂತ ಮಳೆಯಿಂದ ಹಾನಿಗೊಳಗಾಗಿರುವ ರಸ್ತೆಗಳಿಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿ ಶೀಘ್ರ ರಸ್ತೆ ದುರಸ್ತಿ ಹಾಗೂ ಹೊಸ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ನಗರಸಭೆ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ 15 ನೇ ಹಣಕಾಸು ಯೋಜನೆ ಮತ್ತು ನಗರೋತ್ಥಾನ ಹಂತ-4 ರ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, “ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿ ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ. ಜಿಲ್ಲೆಯ ಅಭಿವೃದ್ದಿಗೆ ವಿವಿಧ ಕಾಮಗಾರಿಗಳನ್ನು ಕೈಗೊಂಡು ಸ್ವಚ್ಚ ಹಾಗೂ ಸುಂದರ ನಗರ ನಿರ್ಮಿಸುವುದು ನಮ್ಮ ಗುರಿ”. ಎಂದರು.
“ಜಿಲ್ಲೆಯು ಪ್ರವಾಸಿ ಸ್ಥಳಗಳಿಗೆ ಪ್ರಸಿದ್ದವಾಗಿದ್ದು, ಪ್ರತಿ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಉತ್ತಮ ವ್ಯವಸ್ಥೆ ಕಲ್ಪಿಸಿ ಜಿಲ್ಲೆಯನ್ನು ಇನಷ್ಟು ಸುಂದರಗೊಳಿಸಲು ಕ್ರಮವಹಿಸಲಾಗಿದೆ. ಸಾರ್ವಜನಿಕರ ಪ್ರತಿ ಅಗತ್ಯತೆಗಳನ್ನು ಅರಿತು ಜಿಲ್ಲೆಯನ್ನು ಅಭಿವೃದ್ದಿಗೊಳಿಸುವುದು ನಮ್ಮ ಕರ್ತವ್ಯ”, ಎಂದು ಹೇಳಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್., ಭದ್ರಾ ಕಾಡಾ ಶಿವಮೊಗ್ಗ ಅಧ್ಯಕ್ಷರಾದ ಡಾ. ಅಂಶುಮತ್, ಕ.ರಾ. ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷರಾದ ಬಿ.ಹೆಚ್. ಹರೀಶ್, ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ನಗರಸಭೆ ಪೌರಾಯುಕ್ತರು ಬಿ.ಸಿ. ಬಸವರಾಜು ಮತ್ತಿತರು ಇದ್ದರು.