ಚೆನೈ : ದೆಹಲಿ ರೈತರ ಹೋರಾಟ ದೇಶವ್ಯಾಪಿ ಮುಂದಿನ ನಡೆ ಕುರಿತು ದಕ್ಷಿಣ ಭಾರತ ರಾಜ್ಯಗಳ ರೈತ ಮುಖಂಡರ ಸಭೆ ಚೆನ್ನೈನಲ್ಲಿ ನಡೆದಿದೆ. ಈ ವೇಳೆ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಷ್ಟ್ರೀಯ ಜಲತಜ್ಞ ಡಾ ರಾಜೇಂದ್ರಸಿಂಗ್ ʼಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ರದ್ದಾಗಬೇಕು, ಕನಿಷ್ಠ ಬೆಂಬಲ ಬೆಲೆ ಖಾತ್ರಿ ಶಾಸನ ವಾಗಬೇಕು, ಕಾಯ್ದೆ ಜಾರಿಯಿಂದ ರೈತರಿಗೆ ಆಗುವ ಮಾರಕ ಪರಿಣಾಮಗಳ ಬಗ್ಗೆ ದೇಶಾದ್ಯಂತ ರೈತರಲ್ಲಿ ಜಾಗೃತಿ ಮೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಸಂಯುಕ್ತ ಕಿಸಾನ್ ಮೋರ್ಚ ಅಡಿಯಲ್ಲಿ ಕಿಸಾನ್ ಯಾತ್ರಾ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಭಾರತವನ್ನ ಈಸ್ಟ್ ಇಂಡಿಯಾ ಕಂಪನಿ ರೀತಿ, ಸ್ವದೇಶಿ ಬಂಡವಾಳಶಾಹಿ ಕಂಪನಿಗಳ ರಾಷ್ಟ್ರವನ್ನಾಗಿ ಮಾಡಲು ಬಿಡುವುದಿಲ್ಲ. ಅದಕ್ಕಾಗಿ ರೈತರು ನಿರಂತರ ಹೋರಾಟ ನಡೆಸುತಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ರೈತ ಸಂಘಟನೆಗಳ ಮುಖಂಡ ಯದುವೀರ ಸಿಂಗ್ ಮಾತನಾಡಿ, ʼಕೇಂದ್ರದ ಮೂರು ಕಾಯ್ದೆಗಳನ್ನು ರದ್ದುಗೊಳಿಸಬೇಕು, ಎಂ ಎಸ್ ಪಿಗೆ ಶಾಸನಬದ್ಧ ಕಾತ್ರಿ ಕಾಯ್ದೆ ಜಾರಿ ಮಾಡಬೇಕು, ಎಂ ಎಸ್ ಪಿ ಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನಗಳ ಖರೀದಿ ಶಿಕ್ಷಾರ್ಹ ಅಪರಾಧ ಎಂದು ಅವರು ಹೇಳಿದ್ದಾರೆ
ಇದಕ್ಕಾಗಿ ವಿಶೇಷ ಕಾನೂನು ಜಾರಿಗೆ ತರಬೇಕು, ಕೃಷಿ ಉತ್ಪನ್ನಗಳ ಖರೀದಿ ಸಮಯದಲ್ಲಿ ಆಗುವ ಸಮಸ್ಯೆಗಳ ಪರಿಹಾರಕ್ಕೆ ರೈತರು ನ್ಯಾಯಾಲಯಕ್ಕೆ ಹೋಗುವ ಅಧಿಕಾರ ಸಿಗಬೇಕು, ಎನ್ನುವ ನಿರ್ಣಯಗಳನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಾಗಿದೆ.
ತಮಿಳುನಾಡಿನ ರೈತ ಸಂಘಟನೆಗಳ ಒಕ್ಕೂಟದ ಪರವಾಗಿ ಗುರುಸ್ವಾಮಿ ಮಾತನಾಡಿ, ʼರೈತರ ಹೋರಾಟವನ್ನು ಹತ್ತಿಕ್ಕಲು ಹಲವು ರೀತಿಯಲ್ಲಿ ಅಪಪ್ರಚಾರಗಳನ್ನು ಮಾಡಿತು. ಖಲಿಸ್ತಾನಿಗಳು, ಪಾಕಿಸ್ತಾನಿಗಳು, ದೇಶದ್ರೋಹಿಗಳು, ದಲಾಳಿಗಳು ಎಂದು ಕರೆದಿದ್ದಲ್ಲದೇ ಚಳುವಳಿ ಮಾಡುವ ರಸ್ತೆಗಳನ್ನು ಅಗೆದರು. ಇಷ್ಟೆಲ್ಲ ಕಿರುಕುಳ ನೀಡಿದರು ರೈತರ ಪ್ರಬಲ ಹೋರಾಟ ನಿಲ್ಲಲಿಲ್ಲ. ಇದು ರೈತರ ಅಳಿವು-ಉಳಿವಿನ ಪ್ರಶ್ನೆ ಚುನಾವಣೆ ಮೊದಲು ರೈತರೇ ದೇಶದ ಬೆನ್ನೆಲುಬು ಅನ್ನುತ್ತಾರೆ. ಅಧಿಕಾರಕ್ಕೆ ಬಂದ ನಂತರ ರೈತರೇ ನಮ್ಮ ಸೇವಕರು ಎಂದು ಕಾಣುತ್ತಾರೆ ಎಂದು ಅವರು ಹೇಳಿದ್ದಾರೆ.
ಈ ವೇಳೆ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರಾದ ರಾಕೇಶ್ ಟಿಕಾಯತ್ ಉಪಸ್ಥಿತರಿದ್ದರು.