ಜಾರ್ಖಂಡ್ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನನ್ನ ಹೇಳಿಕೆಯನ್ನು ಜನವರಿ 20ರಂದು ತಮ್ಮ ಸಚಿವಾಲಯಕ್ಕೆ ಬಂದು ದಾಖಲಿಸಿಕೊಳ್ಳಬಹುದು ಎಂದು ಜಾರಿ ನಿರ್ದೇಶನಾಲಯ (ED)ದ ಅಧಿಕಾರಿಗಳಿಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ (Hemant soren) ಅವರು ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ಸೊರೇನ್ ಅವರ ಉತ್ತರದ ಪತ್ರ ಸಲ್ಲಿಸಿದ್ದು, ಅವರು ಜನವರಿ 20 ರಂದು ರಾಂಚಿಯಲ್ಲಿರುವ ತಮ್ಮ ಕಚೇರಿಯಲ್ಲಿ ಪ್ರಕರಣದ ಕುರಿತು ತಮ್ಮ ಹೇಳಿಕೆಯನ್ನು ದಾಖಲಿಸಲು ಲಭ್ಯವಿರುತ್ತಾರೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.ಜನವರಿ 16 ರಿಂದ 20ರ ನಡುವೆ ಪ್ರಕರಣದ ವಿಚಾರಣೆಗೆ ಲಭ್ಯವಾಗುವಂತೆ ಇಡಿ (ED) ಶನಿವಾರ ಅವರಿಗೆ ಪತ್ರವನ್ನು ಕಳುಹಿಸಿದೆ ಎಂದು ಮೂಲಗಳು ಹೇಳಿದ್ದು, ಸೊರೇನ್ ತನಿಖಾ ಸಂಸ್ಥೆಯ ಏಳು ಸಮನ್ಸ್‌ಗಳನ್ನು ತಪ್ಪಿಸಿದ ನಂತರ ಇಡಿ ಈ ಪತ್ರವನ್ನು ಕಳುಹಿಸಿದೆ ಎನ್ನಲಾಗಿದೆ.

ಭೂ ಮಾಲೀಕತ್ವದ ಅಕ್ರಮ ಬದಲಾವಣೆಯ ಬೃಹತ್ ದಂಧೆಗೆ ಸಂಬಂಧಿಸಿದಂತೆ, ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿ ಮತ್ತು ರಾಂಚಿಯ ಡೆಪ್ಯುಟಿ ಕಮಿಷನರ್ ಆಗಿ ಸೇವೆ ಸಲ್ಲಿಸಿದ 2011ರ ಬ್ಯಾಚ್ ಐಎಎಸ್ ಅಧಿಕಾರಿ ಛಾವಿ ರಂಜನ್ ಸೇರಿದಂತೆ 14 ಮಂದಿಯನ್ನು ಈ ಪ್ರಕರಣದಲ್ಲಿ ಸಂಸ್ಥೆ ಇದುವರೆಗೆ ಬಂಧಿಸಿದೆ.ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬಂಧು ಟಿರ್ಕಿ ಮಾತನಾಡಿ, ‘ಬುಡಕಟ್ಟು ಸಿಎಂ ಒಬ್ಬರನ್ನು ಕೇಂದ್ರ ಸಂಸ್ಥೆ ಟಾರ್ಗೆಟ್ ಮಾಡುತ್ತಿರುವ ರೀತಿಗೆ ಬುಡಕಟ್ಟು ಸಮುದಾಯ ಸಿಟ್ಟಿಗೆದ್ದಿದೆ. ಪ್ರತಿ 12 ವರ್ಷಗಳಿಗೊಮ್ಮೆ ಸಮುದಾಯವು ಬೇಟೆಯಾಡುತ್ತದೆ. ಅವರು ಕೋಪಗೊಂಡರೆ ಇಡಿ ಅಥವಾ ಸಿಬಿಐ ಅನ್ನು ನೋಡುವುದಿಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.







