ಹಾಸನ : ರಾಜ್ಯ ವಿಧಾನಸಭಾ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆಯೇ ವಿವಿಧ ಕ್ಷೇತ್ರಗಳಲ್ಲಿ ಟಿಕೆಟ್ಗಾಗಿ ಫೈಟ್ ಜೋರಾಗಿದೆ. ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ಗೆ ಸ್ವರೂಪ್, ಭವಾನಿ ರೇವಣ್ಣ ಹಾಗೂ ಕೆ.ಎಂ ರಾಜೇಗೌಡ ಹೆಸರು ಬಲವಾಗಿ ಕೇಳಿ ಬರ್ತಿದೆ. ಅದರಲ್ಲೂ ಕೆ.ಎಂ ರಾಜೇಗೌಡರಿಗೆ ಈ ಬಾರಿಯ ಹಾಸನ ಜೆಡಿಎಸ್ ಟಿಕೆಟ್ ನೀಡಲು ವರಿಷ್ಠರು ಒಲವು ತೋರಿದ್ದಾರೆ. ಇತ್ತ ಕೆ.ಎಂ ರಾಜೇಗೌಡ ಜೆಡಿಎಸ್ ಅಭ್ಯರ್ಥಿಯಾಗಲು ನನ್ನ ಅಭ್ಯಂಥರವಿಲ್ಲ ಎಂದು ಭವಾನಿ ರೇವಣ್ಣ ಕೂಡ ಟಿಕೆಟ್ ರೇಸ್ನಿಂದ ಹಿಂದೆ ಸರಿದಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆಯೇ ಹಾಸನ ಕ್ಷೇತ್ರದಲ್ಲಿ ಸ್ವರೂಪ್ ಅಬ್ಬರ ಜೋರಾಗಿದೆ.
ಇಂದಿನಿಂದ ಹಾಸನದಲ್ಲಿ ಸ್ವರೂಪ್ ಪ್ರಕಾಶ್ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಒಂದು ಕಡೆ ಜೆಡಿಎಸ್ ಹಾಸನ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ನಡೆಸುತ್ತಿರುವ ನಡುವೆಯೇ ಸ್ವರೂಪ್ ಪ್ರಕಾಶ್ ಇಂದಿನಿಂದ ಹಾಸನ ಕ್ಷೇತ್ರದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ನಗರದ ಎಂಜಿ ರಸ್ತೆಯ ರಾಘವೇಂದ್ರ ಮಠದಲ್ಲಿ ಪೂಜೆ ಸಲ್ಲಿಸಿದ ಸ್ವರೂಪ್ ಪ್ರಕಾಶ್ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ರೇಸ್ನಿಂದ ಭವಾನಿ ರೇವಣ್ಣ ಹಿಂದೆ ಸರಿಯುತ್ತಲೇ ಸ್ವರೂಪ್ ಹಾಸನ ಕ್ಷೇತ್ರದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ. ಪಂಚರತ್ನ ಯಾತ್ರೆ ತಯಾರಿಗಾಗಿ ಸ್ವರೂಪ್ ಪಕ್ಷದಲ್ಲಿ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಎಂ ರಾಜೇಗೌಡ ಹೆಸರು ಕೇಳಿ ಬರುತ್ತಿದ್ದಂತೆಯೇ ಸ್ವರೂಪ್ ಪಕ್ಷದ ವರಿಷ್ಠರ ಎದುರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.