ಚಾಮರಾಜಪೇಟೆ ಮೈದಾನದಲ್ಲಿ ಈ ವರ್ಷದಿಂದಲೇ ಅದ್ದೂರಿ ಗಣೇಶೋತ್ಸವ ಆಚರಿಸಬೇಕು ಎಂಬ ಕೂಗು ದಟ್ಟವಾಗಿದೆ. ಇದರ ಬೆನ್ನಲ್ಲೇ ಗಣೇಶೋತ್ಸವವನ್ನು ನಮ್ಮ ನೇತೃತ್ವದಲ್ಲೇ ಆಚರಿಸಲು ಅನುಮತಿ ನೀಡಿ ಅಂತ ಒಂದಿಷ್ಟು ಸಂಘ ಸಂಸ್ಥೆಗಳು ಈಗಾಗಲೇ ಕಂದಾಯ ಇಲಾಖೆಗೂ ಮನವಿ ಸಲ್ಲಿಸಿವೆ. ಇದರ ಮಧ್ಯೆ, ಗಣೇಶೋತ್ಸವ ಆಚರಿಸಲಾಗುತ್ತಾ ಇಲ್ವಾ ಅನ್ನೋದೇ ಇನ್ನೂ ಯಾರಿಗೂ ಸರಿಯಾಗಿ ಗೊತಿಲ್ಲ. ಒಂದು ವೇಳೆ ಹಬ್ಬದಾಚರಣೆ ಮಾಡಿದ್ರೂ ಯಾರು ಮಾಡ್ತಾರೆ ಅಂತಲೂ ಗೊತ್ತಿಲ್ಲ. ಆದರೆ ಒಂದಿಷ್ಟು ಕಿಡಿಗೇಡಿಗಳು ಮಾತ್ರ ಈ ಪರಿಸ್ಥಿಯನ್ನು ಚಾಲಾಕಿಯಾಗಿ ಉಪಯೋಗಿಸಿಕೊಂಡಿದ್ದಾರೆ.
ಹಲವಾರು ದಶಕಗಳಿಂದ ಮುಸಲ್ಮಾನರ ಹಬ್ಬಗಳನ್ನು ಹೊರತುಪಡಿಸಿ ಬೇರೆ ಧರ್ಮಗಳ ಹಬ್ಬದಾರಣೆಯನ್ನೂ ಚಾಮರಾಜಪೇಟೆ ಮೈದಾನದಲ್ಲಿ ಮಾಡಿಲ್ಲ. ಆದರೆ ಈ ವರ್ಷ ಮೈದಾನವನ್ನು ಕಂದಾಯ ಇಲಾಖೆ ತನ್ನ ಸುಪರ್ದಿಗೆ ಪಡೆದ ನಂತರ, ಪ್ರಪ್ರಥಮ ಬಾರಿಗೆ ಸಾತಂತ್ರ್ಯ ದಿನಾಚರಣೆ ಆಚರಿಸಿತು. ಇದರ ಬೆನ್ನಲ್ಲೇ, ಅದ್ದೂರಿ ಗಣೇಶೋತ್ಸವ ಮಾಡಬೇಕು ಎಂಬ ಕೂಗು ಕೂಡ ದಟ್ಟವಾಯಿತು. ಅಸಲಿಗೆ, ಈ ಮೈದಾನದಲ್ಲಿ ಯಾರು ಗಣೇಶನನ್ನು ಕೂರಿಸಬೇಕು, ಯಾವಾಗ ಕೂರಿಸಬೇಕು, ಎಷ್ಟು ದಿನಗಳ ಕಾಲ ಅವಕಾಶ ಲಭಿಸಲಿದೆ ಎಂಬಿತ್ಯಾದಿ ವಿಚಾರಗಳೇ ಇನ್ನೂ ನಿರ್ಧಾರವಾಗಿಲ್ಲ. ಇದರ ಮಧ್ಯದಲ್ಲೇ, ನಾವೇ ಚಾಮರಾಜಪೇಟೆ ನಾಗರೀಕರ ಒಕ್ಕೂಟ ವೇದಿಕೆಯ ಪ್ರತಿನಿಧಿಗಳು ಅಂತ ಒಂದಿಷ್ಟು ಕಿಡಿಗೇಡಿಗಳು ಚಂದಾ ವಸೂಲಿ ಆರಂಭಿಸಿದ್ದಾರಂತೆ. ಇದೇ ವಸೂಲಿಕೋರರು ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲೂ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ರು ಅಂತ ತಡವಾಗಿದೆ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾತನಾಡಿದ ಚಾಮರಾಜಪೇಟೆ ನಾಗರೀಕರ ಒಕ್ಕೂಟ ವೇದಿಕೆ ಅಧ್ಯಕ್ಷ ರಾಮೇಗೌಡ, ಕಳೆದ ಹಲವಾರು ವರ್ಷಗಳಿಂದ ಮೈದಾನದ ವಿಚಾರವಾಗಿ ಚಾಮರಾಜಪೇಟೆ ನಾಗರೀಕರ ಒಕ್ಕೂಟದ ವೇದಿಕೆ ಹೋರಾಟವನ್ನು ಮಾಡುತ್ತಲೇ ಬಂದಿದೆ. ಅಂದಿನಿಂದ ಇಂದಿನವರೆಗೂ ಯಾರ ಬಳಿಯೂ ಕೈ ಚಾಚದಂತೆ ನೋಡಿಕೊಳ್ಳಲಾಗಿದ್ದು, ಒಕ್ಕೂಟದ ಸದಸ್ಯರು ತಮ್ಮ ಕೈಲಾದ ಧನಸಹಾಯ ಮಾಡಿಕೊಂಡು ಬಂದಿದ್ದಾರೆ. ಆದರೀಗ, ನಮ್ಮ ಹೆಸರನ್ನು ಹಾಳು ಮಾಡಬೇಕು ಅಂತ ನಿರ್ಧರಿಸಿರೋ ಕೆಲ ಕಿಡಿಗೇಡಿಗಳು ಒಕ್ಕೂಟದ ಹೆಸರು ಹೇಳಿಕೊಂಡು ಚಂದಾ ವಸೂಲಿ ಮಾಡುತ್ತಿದ್ದಾರೆ. ಕೆಲವರಂತೂ ಇದೇ ಮೊದಲ ಬಾರಿಗೆ ಹಿಂದೂ ಹಬ್ಬವನ್ನು ಆಚರಿಸಲಾಗ್ತಿದೆ. ಅದ್ರಿಂದ ಸಣ್ಣಪುಟ್ಟ ಮೊತ್ತ ನೀಡದೆ ಹೆಚ್ಚಿನ ಮೊತ್ತವನ್ನೇ ನೀಡಬೇಕು ಅಂತ ಡಿಮ್ಯಾಂಡ್ ಕೂಡ ಮಾಡಿರೋದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ, ಚಾಮರಾಜಪೇಟೆ ನಾಗರೀಕರ ಒಕ್ಕೂಟದ ವೇದಿಕೆ, ಈ ಹಿಂದೆಯೂ ವಸೂಲಿ ಮಾಡಿಲ್ಲ, ಮುಂದೆಯೂ ಚಂದಾ ವಸೂಲಿ ಮಾಡೋದಿಲ್ಲ. ಒಂದು ವೇಳೆ ನಮ್ಮ ಹೆಸರಿನಲ್ಲಿ ಯಾರೇ ಚಂದಾ ವಸೂಲಿಗೆ ಬಂದ್ರೂ ಅವರಿಗೆ ಸಹಕರಿಸಿ ಬೇಡಿ ಎಂದು ಕೋರಿದ್ದಾರೆ.

ಗಣೇಶೋತ್ಸವದ ಹೆಸರಿನಲ್ಲಿ ಕೆಲವರು ಲಾಭ ಪಡೆಯುತ್ತಿರೋದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅವರನ್ನು ಕರೆಸಿ ಮಾತನಾಡುವ ಪ್ರಯತ್ನ ಕೂಡ ಮಾಡಲಾಗುತ್ತೆ ಎನ್ನಲಾಗಿದೆ. ಅಷ್ಟೇ ಅಲ್ಲದೇ, ಒಕ್ಕೂಟದಲ್ಲಿ ತುಂಬಾ ಹಿಂದಿದ್ದ ಕೆಲ ಸದಸ್ಯರಿಂದಲೇ ಈ ರೀತಿ ವಸೂಲಿ ಮಾಡಲಾಗ್ತಿದೆ ಎನ್ನುವ ಗಂಭೀರ ಆರೋಪವೂ ಕೇಳಿಬಂದಿದೆ. ಇದೆಲ್ಲದರ ನಡುವೆ, ಮುಸಲ್ಮಾನರ ವಿರುದ್ಧ ನಾವು ಶಕ್ತಿಪ್ರದರ್ಶನ ಮಾಡಬೇಕಿದ್ದು, ಅದಕ್ಕಾಗಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಸಪೋರ್ಟ್ ನೀಡಬೇಕು ಎಂಬ ಮಾತುಗಳನ್ನೂ ಆಡಿದೆ ಚಾಮರಾಜಪೇಟೆ ನಾಗರೀಕ ಒಕ್ಕೂಟ ವೇದಿಕೆ. ಅದೇನೇ ಇರಲಿ, ಹಲವಾರು ತಿಂಗಳುಗಳಿಂದ ಪರಿಸ್ಥಿತಿ ಸೂಕ್ಷ್ಮವಾಗಿದೆ ಅನ್ನೋದನ್ನು ಅರಿತಿರೋ ಕೆಲವು ಕಿಡಿಗೇಡಿಗಳು ಹೀಗೆ ಮಾಡ್ತಿದ್ರ, ಪೊಲೀಸರು ತುಂಬಾ ದಿನಗಳ ಕಾಲ ಸುಮ್ಮನಿರೋದಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಇನ್ನು ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸರ್ಕಾರದಿಂದ ಅನುಮತಿ ಸಿಗುವುದಕ್ಕೂ ಮೊದಲೇ ಚಾಮರಾಜಪೇಟೆ ನಾಗರೀಕ ಒಕ್ಕೂಟ ವೇದಿಕೆ ಮೂರು ದಿನಗಳ ಕಾಲ ಅದ್ದೂರಿಯಾಗಿ ಗಣೇಶೋತ್ಸವ ಆಚರಣೆಯ ಆಮಂತ್ರಣ ಫ್ಲೆಕ್ಸ್ ಅನ್ನು ಹಾಕೋದಕ್ಕೆ ಶುರು ಮಾಡಿಕೊಂಡಿದೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 2ರ ವರೆಗೆ ಮೂರು ದಿನಗಳ ಕಾಲ ಗಣೇಶೋತ್ಸವ ಆಚರಣೆ ಎಂದು ಫ್ಲೆಕ್ಸ್ ನಲ್ಲಿ ಬರೆಯಲಾಗಿದೆ.