ರಾಜ್ಯ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಇನ್ನೇನು ಬರಲಿದೆ. ಹೀಗಿರುವಾಗಲೇ ಆಡಳಿತ ಪಕ್ಷ, ವಿರೋಧ ಪಕ್ಷದ ನಡುವೆ ರಾಜಕೀಯ ಕೆಸರೆರೆಚಾಟ ಶುರುವಾಗಿದೆ. ಅದರಂತೆಯೇ ಈಗ ಶಿವಮೊಗ್ಗದಲ್ಲಿ ಸೋಲಾರ್ ಪ್ಲಾಂಟ್ ಸ್ಥಾಪನೆಯ ಆರೋಪ-ಪ್ರತ್ಯಾರೋಪ ಮುಗಿಲುಮುಟ್ಟಿದೆ.
ಪರಿಷತ್ನಲ್ಲಿ ತಮ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪೈಪೋಟಿಗೆ ಬಿದ್ದಿವೆ. ಗ್ರಾಮ ಪಂಚಾಯಿತಿ ಸದಸ್ಯರ ಮತಗಳೇ ನಿರ್ಣಾಯಕವಾಗಿರುವ ಈ ಚುನಾವಣೆಯಲ್ಲಿ ಅವರ ಮನವೊಲಿಸಲು ಎಲ್ಲಾ ಪಕ್ಷಗಳು ಹರಸಾಹಸ ಮಾಡಿದ್ದವು. ಈ ನಡುವೆ ರಾಜ್ಯದ ಸುಮಾರು 6200 ಗ್ರಾಮ ಪಂಚಾಯಿತಿಗೆ ಸೋಲಾರ್ ಘಟಕ ಅಳವಡಿಕೆ ಸಂಬಂಧ ರಾಜ್ಯ ಸರ್ಕಾರ ಅದೊಂದು ನಿರ್ಧಾರ ತೆಗೆದುಕೊಂಡು ಯಡವಟ್ಟು ಮಾಡ್ಕೊಂಡಿದ್ಯಾ? ಇದು ಬಿಜೆಪಿ ಅಭ್ಯರ್ಥಿಗಳ ಮೇಲೆ ಪ್ರಭಾವ ಬೀರುತ್ತಾ ಅನ್ನೋ ಚರ್ಚೆಗೆ ಕಾರಣವಾಗಿದೆ.
ಸೋಲಾರ್ ಘಟಕಗಳ ಅಳವಡಿಕೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ರಾಜ್ಯದ ಸುಮಾರು 6,200 ಗ್ರಾಮ ಪಂಚಾಯ್ತಿಗೆ ಸೋಲಾರ್ ಘಟಕ ಅಳವಡಿಕೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ನೇರವಾಗಿ ಟೆಂಡರ್ ಕರೆದಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಟೆಂಡರ್ನ್ನ ನೇರವಾಗಿ ಇಲಾಖೆ ಕರೆದಿರೋದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇನ್ನು ಒಂದು ಪಂಚಾಯಿತಿಗೆ ಸೋಲಾರ್ ಅಳವಡಿಸಲು ₹2.50 ಲಕ್ಷ ಖರ್ಚಾಗುತ್ತೆ. ಆದ್ರೆ ಈಗ ಕರೆದಿರೋ ಟೆಂಡರ್ ಪ್ರಕಾರ ಒಂದು ಗ್ರಾಮ ಪಂಚಾಯ್ತಿಗೆ ಸೋಲಾರ್ ಅಳವಡಿಸಲು ₹5 ಲಕ್ಷ ಖರ್ಚಾಗುತ್ತೆ. ಆದ್ರೆ ಗ್ರಾಮ ಪಂಚಾಯ್ತಿಯಿಂದಲೇ ಸೋಲಾರ್ ಘಟಕ ಅಳವಡಿಸಿದ್ರೆ ವೆಚ್ಚ ಕಡಿಮೆಯಾಗುತ್ತೆ ಅನ್ನೋದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಕ್ರೆ ಮಾತು.
ಈ ಸಂಬಂಧ ಮಾತಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ, ಈ ನಿರ್ಧಾರ ಆಯಾ ಗ್ರಾಮ ಪಂಚಾಯ್ತಿಗಳ ಅಭಿಪ್ರಾಯಕ್ಕೆ ಬಿಟ್ಟಿದ್ದು, ಕಡ್ಡಾಯವಲ್ಲ ಅಂತ ತಿಳಿಸಿದ್ರು. ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ಸಿಗರು ಎತ್ತಿಕೊಂಡಿರುವ ಸೋಲಾರ್ ಘಟಕ ಅಳವಡಿಕೆಯ ಭ್ರಷ್ಟಾಚಾರದ ಆರೋಪ ಮತದಾರರ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತೆ ಎಂಬುದು ಫಲಿತಾಂಶ ಬಂದ ನಂತರ ಗೊತ್ತಾಗಲಿದೆ.