ಹೊಟೇಲಿನಿಂದ ತರಿಸಿದ ಆಹಾರದ ಪೊಟ್ಟಣದಲ್ಲಿ ಹಾವಿನ ಚರ್ಮದ ಅವಶೇಷಗಳು ಪತ್ತೆಯಾದ ಬಳಿಕ ತಿರುವನಂತಪುರಂನ ನೆಡುಮಂಗಡದಲ್ಲಿರುವ ಹೋಟೆಲ್ ಅನ್ನು ಆಹಾರ ಸುರಕ್ಷತಾ ಅಧಿಕಾರಿಗಳು ತಾತ್ಕಾಲಿಕವಾಗಿ ಮುಚ್ಚಿದ್ದಾರೆ. ಮೇ 5 ರಂದು ಗುರುವಾರ ಮಹಿಳೆಯೊಬ್ಬರು ಚಂದಮುಕ್ಕು ಅಂಗಡಿಯಿಂದ ಪರೋಟಾ ಖರೀದಿಸಿದ್ದು, ಅದನ್ನು ತಂದಿದ್ದ ಪೊಟ್ಟಣದಲ್ಲಿ ಹಾವಿನ ಪೊರೆಯ ಅವಶೇಷಗಳು ಕಂಡು ಅವರು ಹೌಹಾರಿದ್ದಾರೆ. ಘಟನೆ ವರದಿಯಾದ ನಂತರ ಹೋಟೆಲ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ತಿರುವನಂತಪುರಂನ ಆಹಾರ ಸುರಕ್ಷತೆಯ ಸಹಾಯಕ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಪ್ರಿಯಾ ಎಂಬ ಮಹಿಳೆ ಮತ್ತು ಅವರ ಮಗಳು ತಮ್ಮ ಊಟಕ್ಕೆ ಎರಡು ಪರೋಟಾಗಳನ್ನು ಖರೀದಿಸಿದ್ದರು, ಅದರಲ್ಲಿ ಮಗಳು ಒಂದನ್ನು ತಿಂದರು ಮತ್ತು ತಾಯಿ ಎರಡನೆಯದನ್ನು ತಿನ್ನಲು ಪ್ರಾರಂಭಿಸಿದರು. ಆಗ ಪಾರ್ಸೆಲ್‌ನಲ್ಲಿ ಹಾವಿನ ಚರ್ಮದ ಒಂದು ಭಾಗ ಪತ್ತೆಯಾಗಿದೆ. ತಕ್ಷಣವೇ ಅವರು, ಆಹಾರ ಸುರಕ್ಷತಾ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅವರು ಅಂಗಡಿಯನ್ನು ಪರಿಶೀಲಿಸಿ ಅದನ್ನು ಮುಚ್ಚಲು ಆದೇಶಿಸಿದರು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

“ನಾವು ತಕ್ಷಣ ಹೋಟೆಲ್ ಅನ್ನು ಪರಿಶೀಲಿಸಿದ್ದೇವೆ. ಇದು ಕೆಟ್ಟ ಸ್ಥಿತಿಯಲ್ಲಿ ಕೆಲಸ ಮಾಡಿದೆ. ಅಡುಗೆ ಕೋಣೆಗೆ ಸಾಕಷ್ಟು ಬೆಳಕು ಇರಲಿಲ್ಲ ಮತ್ತು ಸ್ಕ್ರ್ಯಾಪ್ ಅನ್ನು ಹೊರಗೆ ಎಸೆಯಲಾಗಿದೆ. ತಕ್ಷಣವೇ ಅದನ್ನು ಮುಚ್ಚಲಾಯಿತು ಮತ್ತು ಶೋಕಾಸ್ ನೋಟಿಸ್ ನೀಡಲಾಯಿತು. ಆಹಾರದ ಪ್ಯಾಕಿಂಗ್‌ಗೆ ಬಳಸಲಾದ ಪೊಟ್ಟಣದಲ್ಲಿ ಸತ್ತ ಚರ್ಮವಿದೆ ಎಂಬುದು ನಮ್ಮ ಪ್ರಾಥಮಿಕ ಸಂಶೋಧನೆಯಲ್ಲಿ ಕಂಡುಬಂದಿದೆ” ಎಂದು ನೆಡುಮಂಗಾಡ್ ಸರ್ಕಲ್‌ನ ಆಹಾರ ಸುರಕ್ಷತಾ ಅಧಿಕಾರಿ ಹರ್ಶಿದಾ ಬಶೀರ್ TNIE ಗೆ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕಾಸರಗೋಡು ಜಿಲ್ಲೆಯಲ್ಲಿ ಕನಿಷ್ಠ 40 ಮಂದಿ ಆಹಾರ ವಿಷಾಹಾರ ಸೇವನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 16 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾರೆ. ಹೋಟೆಲ್ ಕಾರ್ಮಿಕರಲ್ಲಿ ಮೂವರನ್ನು ಬಂಧಿಸಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 304 (ನಿರ್ಲಕ್ಷ್ಯದಿಂದ ಸಾವು), 308 (ಕೊಲೆಗೆ ಸಮನಾಗದ ಅಪರಾಧಿ ನರಹತ್ಯೆಗೆ ಯತ್ನ) ಮತ್ತು 272 (ಕಲಬೆರಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾ ವೈದ್ಯಾಧಿಕಾರಿ (ಡಿಎಂಒ) ಡಾ.ಎ.ವಿ.ರಾಮದಾಸ್ ಪ್ರಕಾರ, ಶಿಗೆಲ್ಲ ಎಂಬ ಮಾರಣಾಂತಿಕ ಬ್ಯಾಕ್ಟೀರಿಯಾದಿಂದ ಆಹಾರ ವಿಷಪೂರಿತವಾಗಿದೆ.










