ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಅಂದಾದುಂದಿ ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ತೆರೆದ ಗುಂಡಿ, ಕಾಲುವೆಗಳಿಗೆ ಬಿದ್ದು ನಾಗರಿಕರು ಕೈಕಾಲು ಮುರಿದುಕೊಳ್ಳುತ್ತಿರುವ ಘಟನೆಗಳು ನಿತ್ಯದ ಸುದ್ದಿಗಳಾಗಿವೆ. ಇದೀಗ ಕೇವಲ ನಗರದ ನಾಗರಿಕರಿಗೆ ಮಾತ್ರವಲ್ಲ, ಹಾವು, ಗೋವುಗಳಂತಹ ಪ್ರಾಣಿಗಳ ಪಾಲಿಗೂ ಯಾವ ಮುಂಜಾಗ್ರತೆ, ಮುನ್ನೆಚ್ಚರಿಕೆ ಇಲ್ಲದ ಈ ಕಾಮಗಾರಿಗಳು ಜೀವಕಂಟಕವಾಗಿವೆ.
ಕಳೆದ ವಾರ ಇಂಥದ್ದೆ ಸ್ನಾರ್ಟ್ ಸಿಟಿ ಕಾಮಗಾರಿಯೊಂದರ ವೇಳೆ ನಾಗರಹಾವನ್ನೇ ಯೋಜನೆ ಬಲಿತೆಗೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿತ್ತು. ಇದೀಗ ಹಾವು ಹತ್ಯೆಯ ಸಂಬಂಧ ಸ್ಮಾರ್ಟ್ ಸಿಟಿ ಯೋಜನೆ ಎಂಜಿನಿಯರ್ ವಿರುದ್ಧ ವನ್ಯಜೀವಿ ಕಾಯ್ದೆಯಡಿ ದೂರು ದಾಖಲಾಗಿದ್ದು, ಘಟನೆ ಗಂಭೀರ ತಿರುವು ಪಡೆದುಕೊಂಡಿದೆ. ಸ್ಮಾರ್ಟ್ ಸಿಟಿ ಕಾಮಗಾರಿಯ ವೇಳೆ ನಾಗರ ಹಾವನ್ನು ಕೊಂದು ಹಾಕಲಾಗಿದೆ ಎಂದು ಆರೋಪಿಸಿ ಸ್ಮಾರ್ಟ್ ಸಿಟಿ ಇಂಜಿನಿಯರ್ ವಿರುದ್ಧ ದೂರು ನೀಡಲಾಗಿದೆ.
ಡಿಸೆಂಬರ್ 4ರಂದು ಶಿವಮೊಗ್ಗದ ಸಾಗರ ರಸ್ತೆಯ ಎಪಿಎಂಸಿ ಎದುರಿನ ಕಾಮಗಾರಿಗಾಗಿ ಆ ಜಾಗದಲ್ಲಿ ಇದ್ದ ಆಂಜನೇಯ ಗುಡಿಯನ್ನು ಜೆಸಿಬಿಯಿಂದ ಕೆಡವಲಾಗಿತ್ತು. ಗುಡಿಯ ತೆರವಿನ ವೇಳೆ ಹಾವೊಂದು ಕಾಣಿಸಿಕೊಂಡಿತ್ತು. ಹಾವನ್ನು ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸುವ ಬದಲು ಕಾಮಗಾರಿ ನಡೆಸುತ್ತಿದ್ದವರು ಹಾವನ್ನು ಜೆಸಿಬಿ ಬಕೆಟ್ ನಿಂದ ಎತ್ತಿ ಹಾಕಲು ಯತ್ನಿಸಿದ್ದರು. ಈ ವೇಳೆ ಹಾವು ಜೆಸಿಬಿಯ ಬಕೆಟ್ ಅನ್ನು ಕಚ್ಚಲು ಯತ್ನಿಸಿತ್ತು. ನಂತರ ಜೆಸಿಬಿ ಬಕೆಟ್ನಿಂದ ಮಣ್ಣು ತುಂಬುವಾಗ ಹಾವನ್ನೂ ಸೇರಿಸಿ ತೆಗೆದುಕೊಂಡು ಹೋಗಿ ಹೊರಗೆ ಹೋಗಲಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆ ನಿರ್ವಹಿಸುವ ಆಡಳಿತದ ಇಂತಹ ಉದ್ಧಟತನದಿಂದಾಗಿ ಹಾವು ಸಾವನ್ನಪ್ಪಿದೆ ಎಂದು ಇದೀಗ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯವರು ಹಾವನ್ನು ಕೊಂದಿದ್ದಾರೆ ಎಂದು ಪಾಲಿಕೆಯ ಸದಸ್ಯ ರಾಹುಲ್ ಬಿದರೆ ಅವರು ಆಲ್ಕೊಳದ ಶಂಕರ ವಲಯದ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಸ್ಮಾರ್ಟ್ ಸಿಟಿ ಇಂಜಿನಿಯರ್ ವಿಜಯ ಕುಮಾರ್ ವಿರುದ್ಧ ದೂರು ದಾಖಲಿಸಲಾಗಿದೆ.
ಈ ಘಟನೆ ಬೆಳಕಿಗೆ ಬರುತ್ತಲೇ ನಗರದ ಪರಿಸರವಾದಿಗಳು ಮತ್ತು ನಾಗರಿಕರು ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ನಿರ್ವಹಿಸುವವರ ಅಮಾನವೀಯ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.