
ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ; ವಸತಿ ಶಾಲೆಗಳು ಮಂಜೂರು
ಬೆಳಗಾವಿ, ಜು.28: ಅಸಂಘಟಿತ ಕಾರ್ಮಿಕ ವಲಯಗಳಲ್ಲಿ 91 ವಲಯಗಳನ್ನು ಪ್ರತ್ಯೇಕಿಸಲಾಗಿದ್ದು, ರಾಜ್ಯದಲ್ಲಿ 31 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದಾರೆ. ಅಂತಹ ಕಾರ್ಮಿಕರಿಗೆ ವೈದ್ಯಕೀಯ, ಸಹಾಯಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ವಸತಿ ಶಾಲೆಗಳನ್ನು ಮಂಜೂರು ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ತಿಳಿಸಿದರು.
ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಯಮನಾಪುರ ಕೈಗಾರಿಕಾ ಪ್ರದೇಶದ ಹಿಂಡಾಲ್ಕೋ ಗೆಸ್ಟ್ ಹೌಸ್ ಹತ್ತಿರ ನಡೆದ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯ ಉದ್ಘಾಟನೆ ಹಾಗೂ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಶೇಕಡ 90 ರಷ್ಟು ಮತ್ತು ರಾಜ್ಯದಲ್ಲಿ ಶೇಕಡಾ 73 ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ಅವರ ಕಲ್ಯಾಣಕ್ಕೆ ವಿವಿಧ ಯೋಜನೆಗಳನ್ನು ಜನರಿಗೆ ತರುವುದು ಅನಿವಾರ್ಯವಾಗಿದೆ ಎಂದರು. ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಸೆಸ್‌ನಲ್ಲಿ ಒಂದಂಶ ಪಡೆದು ಕಾರ್ಮಿಕರ ಕಲ್ಯಾಣಕ್ಕೆ ಬಳಸಲು ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ. ಡೆಲಿವರಿ ಬಾಯ್ ಗಳಿಗೆ “ಗಿಗ್ ಕಾರ್ಮಿಕ” ಯೋಜನೆಯಡಿ ವೈದ್ಯಕೀಯ ಸೌಲಭ್ಯ ಮತ್ತು ಜೀವ ವಿಮೆ ಯೋಜನೆ ಜಾರಿಗೆ ತರಲಾಗಿದೆ ಎಂದರು.

ವಾಣಿಜ್ಯ ವಾಹನಗಳನ್ನು ಓಡಿಸುವ ಕಾರ್ಮಿಕರಿಗೆ ಸರ್ಕಾರ ಸೌಲಭ್ಯ ನೀಡುತ್ತಿದೆ. ಅಫಘಾತ ಮತ್ತು ಜೀವ ವಿಮೆ ಯೋಜನೆ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ವರ್ಷಕ್ಕೆ 1 ಲಕ್ಷ 60 ಸಾವಿರಕ್ಕೂ ಅಧಿಕ ಜನರು ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಸರ್ಕಾರದ ಯೋಜನೆಗಳು ಮೃತರ ಕುಟುಂಬಗಳಿಗೆ ನೆರವಾಗಲಿವೆ ಎಂದರು.

ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ, ಬೆಳಗಾವಿ ಉತ್ತರ ವಿಧಾನಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್, ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಹಾಗೂ ಕಾರ್ಯದರ್ಶಿ
ಭಾರತಿ.ಡಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಜಂಟಿ ಕಾರ್ಯದರ್ಶಿ ಎ. ಎಚ್ ಉಮೇಶ, ಪ್ರಾದೇಶಿಕ ಬೆಳಗಾವಿ ಉಪ ಕಾರ್ಮಿಕ ಆಯುಕ್ತ ನಾಗೇಶ್ ಡಿ.ಜಿ, ಬೆಳಗಾವಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಕೆ.ಬಿ ನಾಗರಾಜ್, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯ ಸದಸ್ಯರು, ಕಾರ್ಮಿಕ ಅಧಿಕಾರಿಗಳು ಕಾರ್ಮಿಕ ನಿರೀಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.