ವಿವಾದಿತ ‘ಲವ್ ಜಿಹಾದ್’ ವಿರೋಧಿ ಕರಡು ಸುಗ್ರೀವಾಜ್ಞೆಗೆ ಉತ್ತರಪ್ರದೇಶ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. ಆ ಮೂಲಕ ಸಂಘಪರಿವಾರದ ಮುಸ್ಲಿಂ ವಿರೋಧಿ ಅಜೆಂಡಾದ ಪ್ರಮುಖ ಪರಿಕಲ್ಪನೆಯಾದ ‘ಲವ್ ಜಿಹಾದ್’ ಪ್ರಕರಣಗಳಲ್ಲಿ ಮದುವೆಯ ಉದ್ದೇಶಕ್ಖಾಗಿ ನಡೆಸುವ ಮತಾಂತರವನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೆ ಯೋಗಿ ಆದಿತ್ಯನಾಥ ಸರ್ಕಾರ ಚಾಲನೆ ನೀಡಿದೆ.
ಭಾರತೀಯ ಸಂವಿಧಾನ ಮತ್ತು ಕಾನೂನು ಚೌಕಟ್ಟಿನಲ್ಲಿ ಈವರೆಗೆ ವ್ಯಾಖ್ಯಾನವನ್ನೇ ಮಾಡದೇ ಹೋದರೂ, ಬಿಜೆಪಿ ಮತ್ತು ಸಂಘಪರಿವಾರದ ಪ್ರಮುಖ ಚುನಾವಣಾ ಅಸ್ತ್ರವಾಗಿರುವ ಮತ್ತು ಮುಸ್ಲಿಮರ ವಿರುದ್ಧ ಹಿಂದೂ ಮತಗಳ ಧ್ರುವೀಕರಣದ ತಂತ್ರಗಾರಿಕೆಯ ಭಾಗವಾಗಿರುವ ಲವ್ ಜಿಹಾದ್ ವಿಷಯದಲ್ಲಿ ಈಗಾಗಲೇ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಅತ್ಯುತ್ಸಾಹ ತೋರಿವೆ. ಈಗಾಗಲೇ ಬಿಜೆಪಿ ಆಡಳಿತದ ಮಧ್ಯಪ್ರದೇಶ ಮತ್ತು ಹರ್ಯಾಣದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಗೊಳಿಸಲಾಗಿದ್ದು, ಇದೀಗ ಉತ್ತರಪ್ರದೇಶದ ಯೋಗಿ ಆದಿತ್ಯನಾಥರ ಸರ್ಕಾರ, ಸಂಘಪರಿವಾರದ ಅಜೆಂಡಾವನ್ನು ಕಾನೂನಾಗಿ ಜಾರಿಗೊಳಿಸಿದ ಮೂರನೇ ರಾಜ್ಯವಾಗಿದೆ. ಇದೇ ನಿಲುವನ್ನೇ ಅನುಸರಿಸಿ ಕರ್ನಾಟಕವೂ ಸೇರಿದಂತೆ ಬಿಜೆಪಿ ಆಡಳಿತದ ಇತರೆ ಕೆಲವು ರಾಜ್ಯಗಳು ಕಾನೂನು ಜಾರಿಗೆ ಪ್ರಯತ್ನಿಸುತ್ತಿರುವ ಹೊತ್ತಿನಲ್ಲಿಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಜೆಪಿ ಮತಗಳ ಧ್ರುವೀಕರಣದ ತಾತ್ಕಾಲಿಕ ಲಾಭ ಮತ್ತು ಮುಸ್ಲಿಮರು ಸೇರಿದಂತೆ ಅನ್ಯ ಧರ್ಮೀಯರನ್ನು ಮುಖ್ಯವಾಹಿನಿಯಿಂದ ಹೊರಗಿಡುವ ಮೂಲಕ ಹಿಂದೂರಾಷ್ಟ್ರ ನಿರ್ಮಾಣ ಮಾಡುವ ತನ್ನ ದೂರಗಾಮಿ ಉದ್ದೇಶವನ್ನು ಹಂತಹಂತವಾಗಿ ಈಡೇರಿಸುವ ಗುರಿಯೊಂದಿಗೆ ಈ ಲವ್ ಜಿಹಾದ್ ಪರಿಕಲ್ಪನೆ ಹುಟ್ಟುಹಾಕಿದೆ. ಅದಕ್ಕೆ ತಕ್ಕಂತೆ ಇದೀಗ ಸಂವಿಧಾನ ಮತ್ತು ಕಾನೂನು ಮೀರಿ ಪೊಳ್ಳು ಮತ್ತು ಕಲ್ಪಿತ ಪರಿಕಲ್ಪನೆಗಳ ಆಧಾರದ ಮೇಲೆ ಇಂತಹ ಸುಗ್ರೀವಾಜ್ಞೆಗಳನ್ನು ಜಾರಿಗೆ ತರುತ್ತಿದೆ. ಇದು ದೇಶದ ಸಂವಿಧಾನ ಮತ್ತು ಮೂಲಭೂತವಾಗಿ ಮನುಷ್ಯನ ವ್ಯಕ್ತಿ ಸ್ವಾತಂತ್ರ್ಯವನ್ನು ಗಾಳಿಗೆ ತೂರುವ ಕ್ರಮ. ಪ್ರೀತಿ, ಪ್ರೇಮ ಮತ್ತು ಮದುವೆಯಂತಹ ಖಾಸಗೀ ವಿಷಯಗಳನ್ನು ಮತ್ತು ಆ ಕುರಿತ ವ್ಯಕ್ತಿಗತ ಸ್ವಾತಂತ್ರ್ಯವನ್ನು ಬಿಜೆಪಿ ಧರ್ಮ ಮತ್ತು ಧರ್ಮಾಂಧ ಕಾನೂನುಗಳ ಮೂಲಕ ಬಗ್ಗುಬಡಿಯುತ್ತಿದೆ. ಈ ವಿಷಯದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಆಡಳಿತಕ್ಕೂ ಮತಾಂಧ ತಾಲಿಬಾನ್ ಆಡಳಿತಕ್ಕೂ ಹೆಚ್ಚಿನ ವ್ಯತ್ಯಾಸವೇನಿಲ್ಲ ಎಂಬ ವ್ಯಾಪಕ ಟೀಕೆಗಳ ನಡುವೆಯೂ ಉತ್ತರಪ್ರದೇಶ ಆಡಳಿತ ಮಂಗಳವಾರ ಈ ವಿವಾದಿತ ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದೆ.
ಈ ನಡುವೆ ಯೋಗಿ ಸರ್ಕಾರ ಈ ಸುಗ್ರೀವಾಜ್ಞೆ ಅಂಗೀಕರಿಸುವ ಮುನ್ನಾ ದಿನ ಸೋಮವಾರ, ಲವ್ ಜಿಹಾದ್ ಶಂಕಿತ ಪ್ರಕರಣಗಳ ಕುರಿತ ತನಿಖೆ ನಡೆಸಿದ ಉತ್ತರಪ್ರದೇಶದ ಪೊಲೀಸ್ ವಿಶೇಷ ತನಿಖಾ ತಂಡ(ಎಸ್ ಐಟಿ) ತಾನು ತನಿಖೆ ನಡೆಸಿದ 14 ಶಂಕಿತ ಪ್ರಕರಣಗಳಲ್ಲಿ ಅಂತಹ ಯಾವುದೇ ಸಂಚು ಅಥವಾ ಹುನ್ನಾರ ಕಂಡುಬಂದಿಲ್ಲ ಮತ್ತು ಆ ಪ್ರಕರಣಗಳಲ್ಲಿ ಭಾಗಿಯಾಗಿರುವ ಮುಸ್ಲಿಂ ಯುವಕರಿಗೆ ಯಾವುದೇ ರೀತಿಯ ಬಾಹ್ಯ ಹಣಕಾಸು ನೆರವಾಗಲೀ, ಇತರೆ ಯಾವುದೇ ರೀತಿಯ ಬೆಂಬಲವಾಗಲೀ ಸಿಕ್ಕಿರುವುದು ಪತ್ತೆಯಾಗಿಲ್ಲ ಎಂದು ವರದಿ ನೀಡಿದೆ. ಆ ಮೂಲಕ ಹಿಂದೂ ಯುವತಿಯರು ಮತ್ತು ಮುಸ್ಲಿಂ ಯುವಕರ ನಡುವಿನ ಪ್ರೇಮ ವಿವಾಹ ಪ್ರಕರಣಗಳು ಬಿಜೆಪಿ ಮತ್ತು ಸಂಘಪರಿವಾರ ಹೇಳುವಂತೆ ಲವ್ ಜಿಹಾದ್ ಆಗಲೀ, ಅಂತಹ ಪ್ರಕರಣ ಹಿಂದೆ ಯಾವುದೇ ಕುತಂತ್ರವಾಗಲೀ ಇಲ್ಲ ಎಂಬುದನ್ನು ಅದೇ ಯೋಗಿ ಆಡಳಿತದ ಪೊಲೀಸರೇ ಸಂಪೂರ್ಣ ತನಿಖೆ ನಡೆಸಿ ವಾಸ್ತವಾಂಶ ಬಹಿರಂಗಪಡಿಸಿದ್ದಾರೆ.
Also Read: ಲವ್ ಜಿಹಾದ್: ಮಹಿಳೆಯ ಆಯ್ಕೆಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಷಡ್ಯಂತ್ರ
ಕಳೆದ ವಾರಾಂತ್ಯದ ಹೊತ್ತಿಗೆ ಉತ್ತರಪ್ರದೇಶ ಬಿಜೆಪಿ ಸರ್ಕಾರ ಲವ್ ಜಿಹಾದ್ ತಡೆ ಸುಗ್ರೀವಾಜ್ಞೆ ತರುವುದಾಗಿ ಘೋಷಿಸಿಸಿದ ಬೆನ್ನಲ್ಲೇ ಎಸ್ ಐಟಿ ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ. ಕಳೆದ ಸೆಪ್ಟೆಂಬರಿನಲ್ಲಿ ರಾಜ್ಯದ ಒಟ್ಟು 14 ಶಂಕಾಸ್ಪದ ಲವ್ ಜಿಹಾದ್ ಪ್ರಕರಣಗಳ ತನಿಖೆಗಾಗಿ ಯೋಗಿ ಸರ್ಕಾರ ಎಸ್ ಐಟಿ ರಚಿಸಿತ್ತು. ವಿಎಚ್ ಪಿ ಸೇರಿದಂತೆ ಸಂಘಪರಿವಾರ ಮತ್ತು ಬಿಜೆಪಿಯ ಪ್ರಮುಖರ ಒತ್ತಾಯದ ಮೇರೆಗೆ ಕಾನ್ಪುರ ವಲಯ ಐಜಿಪಿ ಮೋಹಿತ್ ಅಗರವಾಲ್ ಅವರು ಡಿವೈಎಸ್ ಪಿ ವಿಕಾಸ್ ಪಾಂಡೆ ನೇತೃತ್ವದಲ್ಲಿ ಎಸ್ ಐಟಿ ತಂಡ ರಚಿಸಿ, ವಲಯ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಸಂಘಪರಿವಾರದ ಮಂದಿ ಲವ್ ಜಿಹಾದ್ ಆರೋಪ ಮಾಡಿರುವ 14 ಹಿಂದೂ-ಮುಸ್ಲಿಂ ವಿವಾಹಗಳ ಕುರಿತ ತನಿಖೆಗೆ ಆದೇಶಿಸಿದ್ದರು.
ತನಿಖೆ ನಡೆಸಿದ 14 ಪ್ರಕರಣಗಳ ಪೈಕಿ 11 ಪ್ರಕರಣಗಳಲ್ಲಿ ಆರೋಪಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಾದಾಗಲೇ ಸೂಕ್ತ ಕಾನೂನು ಕ್ರಮಕೈಗೊಂಡಿದ್ದಾರೆ. ಅಪಹರಣ, ಮದುವೆಯಾಗಲೂ ಒತ್ತಡ, ಬೆದರಿಕೆ ಮುಂತಾದ ಆರೋಪಗಳ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 363 ಮತ್ತು 366ರಡಿ ಪ್ರಕರಣ ದಾಖಲಿಸಿ ಕ್ರಮಜರುಗಿಸಲಾಗಿದೆ. ಆ ಪೈಕಿ ಎಂಟು ಪ್ರಕರಣಗಳಲ್ಲಿ ಮದುವೆಯ ವೇಳೆ ಯುವತಿಯರು ಅಪ್ರಾಪ್ತರಾಗಿರುವುದು ಪತ್ತೆಯಾಗಿದೆ. ಇನ್ನುಳಿದ ಮೂರು ಪ್ರಕರಣಗಳಲ್ಲಿ ವಿವಾಹಿತ ಹುಡುಗಿಯರು 18 ವರ್ಷ ಮೇಲ್ಪಟ್ಟವರಾಗಿದ್ದು, ತಾವು ಸ್ವಇಚ್ಚೆಯಿಂದಲೇ ಮುಸ್ಲಿಂ ಯುವಕರನ್ನು ಪ್ರೀತಿಸಿ ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.
ಅನುಮಾನಾಸ್ಪದ 11 ಪ್ರಕರಣಗಳಲ್ಲಿ ಎಸ್ ಐಟಿ ತನಿಖೆ ವೇಳೆ, ಯಾವ ಪ್ರಕರಣದಲ್ಲಿಯೂ ಹಿಂದೂ ಹುಡುಗಿಯರನ್ನು ಮುಸ್ಲಿಂ ಯುವಕರು ಮದುವೆಯಾಗುವುದರ ಹಿಂದೆ ಯಾವುದೇ ಮತಾಂತರದ ಅಥವಾ ಧಾರ್ಮಿಕ ಸೇಡಿನ ಸಂಚು ಕಂಡುಬಂದಿಲ್ಲ. ಅಲ್ಲದೆ ಆ ಪೈಕಿ, ಕಾನ್ಪುರದ ಜುಹಿ ಕಾಲೊನಿ ಎಂಬ ಒಂದೇ ಪ್ರದೇಶದ ನಿವಾಸಿಗಳಾದ ನಾಲ್ವರು ಯುವಕರನ್ನು ಹೊರತುಪಡಿಸಿ ಉಳಿದವರಾರಿಗೂ ಪರಸ್ಪರ ಪರಿಚಯವಾಗಲೀ, ಯಾವುದೇ ರೀತಿಯ ನಂಟಾಗಲೀ ಇಲ್ಲ. ಯಾವುದೇ ಸಂಘಟನೆಯೂ ಅವರ ಹಿಂದೆ ಇಲ್ಲ. ಮತ್ತು ಅವರಿಗೆ ಯಾವುದೇ ವಿದೇಶಿ ನೆರವಾಗಲೀ, ಪ್ರಚೋದನೆಯಾಗಲೀ ಇರುವುದು ಕಂಡುಬಂದಿಲ್ಲ ಎಂದು ಎಸ್ ಐಟಿ ವರದಿ ಹೇಳಿದೆ.
ಕೆಲವು ಪ್ರಕರಣಗಳಲ್ಲಿ ಕಾನೂನು ರೀತ್ಯಾ ಮತಾಂತರ ನಡೆದಿಲ್ಲ, ಹೆಸರು ಬದಲಾವಣೆ ಪ್ರಕ್ರಿಯೆ ನಡೆದಿಲ್ಲ ಮತ್ತು ಮದುವೆ ನೋಂದಣಿಯಾಗಿಲ್ಲ. ಮೂರು ಪ್ರಕರಣಗಳಲ್ಲಿ ಯುವಕರು ತಮ್ಮ ಗುರುತು ಮರೆಮಾಚಿ ಮದುವೆಯಾಗಿ, ಬಳಿಕ ನೈಜ ಗುರುತು ಹೇಳಿಕೊಂಡಿದ್ದಾರೆ. ಇಂತಹ ಕಾನೂನು ನೂನ್ಯತೆಗಳಿವೆಯೇ ವಿನಃ ಯಾವುದೇ ಸಂಚಿನ ಭಾಗವಾಗಿಯಾಗಲೀ, ಧಾರ್ಮಿಕ ಮತಾಂತರದ ಉದ್ದೇಶಕ್ಕಾಗಲೀ ಮದುವೆಯಾಗಿರುವುದು ತನಿಖೆಯಲ್ಲಿ ಕಂಡುಬಂದಿಲ್ಲ ಎಂದು ಎಸ್ ಐಟಿ ಹೇಳಿದೆ.
Also Read: ಕಾಲ್ಪನಿಕ ಲವ್ ಜಿಹಾದ್ ಮೂಲಕ ಯಶಸ್ವಿ ಅಪಪ್ರಚಾರ ನಡೆಸುತ್ತಿರುವ ಸಂಘ ಪರಿವಾರ
ತನ್ನದೇ ದೂರಿನ ಮೇಲೆ ಪ್ರತ್ಯೇಕ ತನಿಖಾ ತಂಡ ರಚಿಸಿ ತನಿಖೆ ನಡೆಸಿ ತಾನು ಆರೋಪಿಸಿದಂತೆ, ಹುಯಿಲೆಬ್ಬಿಸಿದಂತೆ ಲವ್ ಜಿಹಾದ್ ನಂತಹ ಯಾವುದೇ ಘಟನೆ ನಡೆದಿಲ್ಲ. ಈ ಅಂತರ್ ಧರ್ಮೀಯ ಮದುವೆಗಳು ಬೇರಾವುದೇ ಸಹಜ ಪ್ರೇಮ ವಿವಾಹಗಳಂತೆ ಒಬ್ಬ ಹುಡುಗ ಮತ್ತು ಹುಡುಗಿ ನಡುವಿನ ವಯೋಸಹಜ ಪ್ರೇಮವೇ ವಿನಃ ಯಾವುದೇ ಸಂಚಿನ, ಹುನ್ನಾರದ ಅಥವಾ ಪ್ರಚೋದನೆಯ ಭಾಗವಲ್ಲ ಎಂದು ರಾಜ್ಯ ಪೊಲೀಸ್ ವರದಿ ಸಲ್ಲಿಸಿದೆ. ಆದರೆ, ಅಂತಹ ವರದಿಯ ಹೊರತಾಗಿಯೂ ಯೋಗಿ ಸರ್ಕಾರ, ತಾನು ಈ ಮೊದಲೇ ಘೋಷಿಸಿದಂತೆ ಮಂಗಳವಾರ ಲವ್ ಜಿಹಾದ್ ವಿರೋಧಿ ಸುಗ್ರೀವಾಜ್ಞೆ ಜಾರಿಗೊಳಿಸಿದೆ.
Also Read: ಗೋಹತ್ಯೆ ಹಾಗೂ ಲವ್ ಜಿಹಾದ್ ನಿಷೇಧಕ್ಕೆ ಕಾನೂನು ರೂಪಿಸಲಿರುವ ಕರ್ನಾಟಕ ಸರ್ಕಾರ
ಲವ್ ಜಿಹಾದ್ ಪ್ರಕರಣದಲ್ಲಿ ಬಲವಂತದ ಮತಾಂತರ ಮತ್ತು ಮತಾಂತರಕ್ಕಾಗಿ ಸಂಚಿನ ವಿವಾಹ ಸಾಬೀತಾದಲ್ಲಿ ಒಂದರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಹದಿನೈದು ಸಾವಿರ ರೂ. ದಂಡ. ಅದರಲ್ಲೂ ಪರಿಶಿಷ್ಟ ವರ್ಗ ಮತ್ತು ಪಂಗಡದ ಮಹಿಳೆ ಅಥವಾ ಹುಡುಗಿಯ ಪ್ರಕರಣವಾದಲ್ಲಿ ಕನಿಷ್ಟ 3-10 ವರ್ಷ ಜೈಲು ಮತ್ತು 25 ಸಾವಿರ ರೂ. ದಂಡ ವಿಧಿಸಲು ಈ ಹೊಸ ಕಾನೂನಿನಲ್ಲಿ ಅವಕಾಶವಿದೆ. ಕಳೆದ ವರ್ಷ ರಾಜ್ಯ ಕಾನೂನು ಆಯೋಗ ಸಲ್ಲಿಸಿದ್ದ ಉತ್ತರಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ-2019ರ ಅಡಿ ಈ ಸುಗ್ರೀವಾಜ್ಞೆ ಜಾರಿಗೆ ತರಲಾಗಿದೆ ಎಂದು ಯೋಗಿ ಸರ್ಕಾರ ಹೇಳಿದೆ.