ಪಾಕಿಸ್ತಾನದ ಉಗ್ರ ತಾಣಗಳ ಮೇಲೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಭವನಕ್ಕೆ ಭೇಟಿ ಮಾಡಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಪರೇಷನ್ ಸಿಂಧೂರ ವಿಚಾರವಾಗಿ ಏನೆಲ್ಲಾ ಆಯ್ತು..? ಕಾರ್ಯಾಚರಣೆ ಹೇಗೆ ನಡೀತು.. ಅನ್ನೋ ಮಾಹಿತಿ ನೀಡಿ ವಾಪಸ್ ಆಗಿದ್ದಾರೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸುದ್ದಿಗೋಷ್ಟಿ ನಡೆಸಿದ್ದು, ಭಾರತೀಯ ಸೇನಾಪಡೆಗಳು ಸಂಪೂರ್ಣವಾಗಿ ಉಗ್ರರನ್ನು ಗುರಿಯಾಗಿಸಿ ದಾಳಿ ಮಾಡಿವೆ. ನಮ್ಮ ಸೇನಾಪಡೆಗಳ ಕಾರ್ಯಾಚರಣೆಯಿಂದ ಯಾವುದೇ ಪಾಕಿಸ್ತಾನ ನಾಗರೀಕರಿಗೆ ತೊಂದರೆ ಆಗಿಲ್ಲ ಎಂದಿದ್ದಾರೆ. ಸೇನಾಪಡೆಗಳು ಇಂದು ನಾವು ಹೆಮ್ಮೆ ಪಡುವಂತಹ ಕೆಲಸ ಮಾಡಿವೆ. ನಮ್ಮ ನಾಗರೀಗರನ್ನು ಕೊಂದವರನ್ನು ಮಾತ್ರ ಟಾರ್ಗೆಟ್ ಮಾಡಲಾಗಿದೆ ಎಂದಿದ್ದಾರೆ.

ಪಾಕಿಸ್ತಾನದ ವಿರುದ್ಧ ಸೇನಾ ಕಾರ್ಯಾಚರಣೆ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಷಾ ತುರ್ತು ಸಭೆ ನಡೆಸಿದ್ದಾರೆ. ಪಾಕಿಸ್ತಾನ ಹಾಗು ನೇಪಾಳದ ಜೊತೆಗೆ ಯಾವ ಯಾವ ರಾಜ್ಯಗಳು ಗಡಿಯನ್ನು ಹಂಚಿಕೊಂಡಿವೆ ಆ ರಾಜ್ಯಗಳ ಸಿಎಂ, ಡಿಜಿಪಿ ಹಾಗು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆಗೆ ಸಭೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ , ಪಂಜಾಬ್, ರಾಜಸ್ಥಾನ್, ಗುಜರಾತ್, ಉತ್ತರಾಖಂಡ್, ಉತ್ತರ ಪ್ರದೇಶ, ಬಿಹಾರ, ಸಿಕ್ಕಿಂ, ಪಶ್ಚಿಮ ಬಂಗಾಳ, ಲಡಾಕ್ ಲೆಫ್ಟಿನೆಂಟ್ ಗವರ್ನರ್ ಭಾಗಿಯಾಗಿದ್ದರು. ಮುಂದಿನ 48 ಗಂಟೆಗಳ ಕಾಲ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ

ನಾಳೆ ಬೆಳಗ್ಗೆ 11 ಗಂಟೆಗೆ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಲಿದೆ. ಕೇಂದ್ರ ಸರ್ಕಾರ ಸರ್ವಪಕ್ಷ ಸಭೆಯನ್ನ ಕರೆದಿದ್ದು, ಆಲ್ ಪಾರ್ಟಿ ಮೀಟಿಂಗ್ನಲ್ಲಿ ಪಾಕ್ ಉಗ್ರರ ವಿರುದ್ಧ ಭಾರತದ ಸೇನೆ ಕೈಗೊಂಡ ಪ್ರತಿಕಾರದ ದಾಳಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸರ್ವಪಕ್ಷ ಸಭೆಯಲ್ಲಿ ರಕ್ಷಣಾ ಸಚಿವ ಅಮಿತ್ ಷಾ, ಗೃಹ ಸಚಿವ ಅಮಿತ್ ಷಾ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜನ ಖರ್ಗೆ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೇರಿದಂತೆ ಅನೇಕ ನಾಯಕರು ಭಾಗಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.