ವಿಜಯಪುರ ಸಿಂದಗಿ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಶಾಸಕ, ಮಾಜಿ ಸಚಿವ ಎಂ.ಸಿ. ಮನಗೂಳಿ ಅವರು ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ನಿಧನರಾಗಿದ್ದಾರೆ. 85 ವರ್ಷದ ಮನಗೂಳಿ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ತೀವ್ರ ಉಸಿರಾಟ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಜನವರಿ 9ರಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರಾತ್ರಿ 1 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ
1936ರ ಸೆಪ್ಟೆಂಬರ್ 29ರಂದು ಬಾಗೇವಾಡಿ ತಾಲ್ಲೂಕಿನ ಮನಗೂಳಿಯಲ್ಲಿ ಜನಿಸಿದ್ದ ಮಲ್ಲಪ್ಪ ಚೆನ್ನವೀರಪ್ಪ ಮನಗೂಳಿ, ಎಂಸಿ ಮನಗೂಳಿ ಎಂದೇ ಪ್ರಸಿದ್ಧರಾದವರು.
ಹತ್ತನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದ ಎಂಸಿ ಮನಗೂಳಿ ಅವರು ಸಿಂದಗಿ ಕ್ಷೇತ್ರದಿಂದ ಏಳು ಬಾರಿ ಸ್ಪರ್ಧಿಸಿದ್ದರು. ಎರಡು ಬಾರಿ ಶಾಸಕರಾಗಿದ್ದರು. 1994ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಎಚ್ಡಿ ದೇವೇಗೌಡ ಅವರ ಸರ್ಕಾರದಲ್ಲಿ 12 ತಿಂಗಳು ಪಂಚಾಯತ್ ರಾಜ್ ಸಚಿವರಾಗಿ ಮತ್ತು 2018ರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿದ್ದರು. ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವರಾಗಿ ಸಹ ಕಾರ್ಯನಿರ್ವಹಿಸಿದ್ದರು.
ಮನಗೂಳಿ ಅವರ ನಿಧನಕ್ಕೆ ರಾಜಕೀಯ ಧುರೀನರು ಸಂತಾಪ ವ್ಯಕ್ತಪಡಿಸಿದ್ದಾರೆ.