ರಾಯಚೂರು: ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕಗುರುಪೀಠದ ಪೀಠಾಧಿಪತಿ ಸಿದ್ದರಾಮನಂದ ಸ್ವಾಮೀಜಿ (50)(Siddha Ramananda Swamiji) ಅವರು ಹೃದಯ ಸ್ತಂಭನದಿಂದ ವಿಧಿವಶರಾಗಿದ್ದಾರೆ. ಇಂದು (ಗುರುವಾರ) ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಅಸ್ತಂಗತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ದರಾಮನಂದ ಸ್ವಾಮೀಜಿ ಅವರು ಇತ್ತೀಚೆಗಷ್ಟೇ ಜನವರಿ 12, 13 ಮತ್ತು 14ರಂದು ಅದ್ದೂರಿಯಾಗಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಹಾಲುಮತ ಸಾಹಿತ್ಯ ಸಮ್ಮೇಳನ ಹಾಗೂ ಹಾಲುಮತ ಪೂಜಾರಿಗಳ ಶಿಬಿರ ಯಶಸ್ವಿಯಾಗಿ ನಡೆದಿದ್ದು, ರಾಜಕೀಯ ಪ್ರಭಾವವಿಲ್ಲದ ಕಾರ್ಯಕ್ರಮವೆಂದು ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿತ್ತು.

ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಸರಿಯಾಗಿ ಊಟ ಮತ್ತು ನಿದ್ರೆ ಮಾಡದೇ ನಿರಂತರವಾಗಿ ಭಾಗವಹಿಸಿದ್ದ ಸ್ವಾಮೀಜಿ ಅವರು ಬುಧವಾರ ರಾತ್ರಿ ಲೋ ಬಿಪಿಯಿಂದ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಲಿಂಗಸುಗೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿಗಳ ಅಕಾಲಿಕ ನಿಧನಕ್ಕೆ ಭಕ್ತರು, ಶಿಷ್ಯರು ಹಾಗೂ ಹಾಲುಮತ ಸಮಾಜದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.

ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ದರಾಮನಂದ ಶ್ರೀಗಳ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶಾಖಾ ಮಠ ತಿಂಥಿಣಿ ಬ್ರಿಜ್ ಕಲಬುರ್ಗಿ ವಿಭಾಗೀಯ ಪೀಠದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ದೈವಾಧೀನರಾದ ಸುದ್ದಿ ನೋವುಂಟುಮಾಡಿದೆ. ಧಾರ್ಮಿಕ ಕಾರ್ಯಗಳ ಜೊತೆಗೆ ಸಮಾಜದ ಏಳಿಗೆಯ ಬಗ್ಗೆ ಅಪಾರ ಕಾಳಜಿ, ಶ್ರದ್ಧೆ ಹೊಂದಿದ್ದ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ. ಶ್ರೀಗಳ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲಿ, ಶ್ರೀ ಮಠದ ಭಕ್ತಾದಿಗಳು ಹಾಗೂ ಅಪಾರ ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.












