ವಿಜಯಪುರ: ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಅಂತ್ಯಕ್ರಿಯೆ ಶ್ರೀಗಳ ಆಶಯದಂತೆ ಶಿಸ್ತು, ಸರಳವಾಗಿ ಹಾಗೂ ಮನಸ್ಸು ಒಪ್ಪುವ ರೀತಿಯಲ್ಲಿ ನಡೆದಿದ್ದು, ಮುಂದಿನ ಕಾರ್ಯಗಳು ಸುತ್ತೂರು, ಕನೇರಿ ಮಠದ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀಗಳ ಆಶಯದಂತೆ ಅವರ ಅಂತ್ಯಕ್ರಿಯೆ ನಡೆದಿದ್ದು, ಇದಕ್ಕೆ ಸರ್ಕಾರ, ಜಿಲ್ಲಾಡಳಿತ, ಸಂಘ ಸಂಸ್ಥೆಗಳು ಸಹಕಾರ ನೀಡಿದ್ದಾರೆ. ಹೀಗಾಗಿ ಎಲ್ಲರಿಗೂ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಬಸವಲಿಂಗ ಸ್ವಾಮೀಜಿ ಜೊತೆ ಜಿಲ್ಲೆಯ ಜನತೆ, ಪಕ್ಷ, ಜಾತ್ಯಾತೀತವಾಗಿ ಇದ್ದೇವೆ.
ಶ್ರೀಗಳ ಆಶಯದಂತೆ ಗದ್ದುಗೆ, ಸ್ಮಾರಕ ಇಲ್ಲದೇ ಮುಂದುವರೆಯಬೇಕು ಎನ್ನುವುದಕ್ಕೆ ಎಲ್ಲರೂ ಸಹಕಾರ ಇದೆ. ಇನ್ನು ಜ್ಞಾನಯೋಗಾಶ್ರಮದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳು ಜೀವಂತವಾಗಿ ನಡೆಯಬೇಕಿದೆ. ಮುಂದಿನ ಕಾರ್ಯಗಳು ಸುತ್ತೂರು, ಕನೇರಿ ಮಠದ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಲಿದ್ದು, ನಾವು ಭಕ್ತರಾಗಿ ಇರುತ್ತೇನೆ ಎಂದರು.
ಇನ್ನೂ ಪಠ್ಯಪುಸ್ತಕದಲ್ಲಿ ಸಿದ್ದೇಶ್ವರ ಸ್ವಾಮೀಜಿ ಜೀವನ ಚರಿತ್ರೆ ಅಳವಡಿಸುವ ವಿಚಾರದ ಕುರಿತು ಮಾತನಾಡಿದ ಅವರು, ಈ ಬಗ್ಗೆ ನಾನು ರಾಜಕೀಯವಾಗಿ ಹೇಳಲ್ಲ, ಪಠ್ಯಪುಸ್ತಕದಲ್ಲಿ ಶ್ರೀಗಳ ಜೀವನ ಚರಿತ್ರೆ ಇರಬೇಕು ಎಂಬುದು ಎಲ್ಲರ ಆಶಯವಾಗಿದೆ. ಇನ್ನೂ ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದೇಶ್ವರ ಸ್ವಾಮೀಜಿ ಅವರು ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ್ದರು.
ಅಂತಿಮ ವಿದಾಯ ಕಾರ್ಯಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ ಎಂದ ಅವರು, ಸಿದ್ದೇಶ್ವರ ಸ್ವಾಮೀಜಿ ಅವರ ಚಿತಾಭಸ್ಮ ವಿಸರ್ಜನಾ ವಿಚಾರಕ್ಕೆ ಸಂಬಂಧಿಸಿದಂತೆ ಒಬ್ಬರು ತೆಗೆದುಕೊಳ್ಳುವ ನಿರ್ಧಾರವಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.