ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ರು. ಆ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ನೇರವಾಗಿಯೇ ಟಾಂಗ್ ಕೊಡುವ ಕೆಲಸ ಮಾಡಿದ್ದರು. ಗ್ಯಾರಂಟಿಗೂ ಕುಮಾರಸ್ವಾಮಿ ಅವರಿಗೂ ಏನು ಸಂಬಂಧ..? ಅವರು ಯೋಜನೆಯ ಲಾಭ ಪಡೆದವರೂ ಅಲ್ಲ, ಯೋಜನೆಯನ್ನು ಜಾರಿ ಮಾಡಿದವರೂ ಅಲ್ಲ. ಅವರದ್ದು ಪಂಚರತ್ನ ಯಾತ್ರೆ ಎಂದಿದ್ದರು. ಗ್ಯಾರಂಟಿಗಳ ಬಗ್ಗೆ ಕುಮಾರಸ್ವಾಮಿಗೆ ಏನ್ ಗೊತ್ತಿದೆ.. ಅವ್ರೇನು ಫಲಾನುಭವಿಗಳಾ ಅಂತ ಕೇಳಿದ್ದ ಡಿ.ಕೆ ಶಿವಕುಮಾರ್ ವ್ಯಂಗ್ಯಕ್ಕೆ ಕುಮಾರಸ್ವಾಮಿ ಜಾಲತಾಣಗಳಲ್ಲಿ ಪದಪುಂಜಗಳನ್ನು ಪೋಣಿಸಿ ವಾಗ್ದಾಳಿ ಮಾಡಿದ್ದಾರೆ.
ಆವೇಶ ಆರೋಗ್ಯಕ್ಕೆ ಒಳ್ಳೇದಲ್ಲ.. ಹಾನಿಕಾರಕ..
ಡಿಸಿಎಂ ಎನ್ನುವುದನ್ನು ಡೂಪ್ಲಿಕೇಟ್ ಸಿಎಂ ಎಂದಿರುವ ಕುಮಾರಸ್ವಾಮಿ, ಡಿಸಿಎಂ ಬಹಳ ಆವೇಶದಲ್ಲಿದ್ದಾರೆ. ಅತಿಯಾದ ಆವೇಶ ಆರೋಗ್ಯಕ್ಕೆ ಹಾನಿಕಾರಕ. ಈ ಎಚ್ಚರಿಕೆ ನೆನಪಿದ್ದರೆ ಕ್ಷೇಮ ಅನ್ನೋದು ನೆನಪಿರಲಿ ಎಂದು ಪರೋಕ್ಷವಾಗಿ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಅಧಿಕಾರದ ಪಿತ್ತ ನೆತ್ತಿಗೇರಿ ಮಿದುಳು ಕೆಲಸ ಮಾಡದಿದ್ರೆ, ನಾಲಿಗೆ ಹೀಗೆ ಮಾತನಾಡುತ್ತದೆ.. ಅದರಲ್ಲಿ ಅಚ್ಚರಿಯೇನೂ ಇಲ್ಲ.. ಇದು ಕರ್ನಾಟಕ, ಡಿಕೆಶಿ ರಿಪಬ್ಲಿಕ್ ಅಲ್ಲ. ಆಡಳಿತದಲ್ಲಿ ಇದ್ದೀವಿ ಅಂತ ತಲೆಯೇ ನಿಲ್ಲುತ್ತಿಲ್ಲ. ಸಮಯ ಬೇಕು, ಆಗ ತಿರುಗುವ ತಲೆ ತಾನಾಗೇ ನಿಲ್ಲುತ್ತದೆ ಎಂದು ಹೇಳುವ ಮೂಲಕ ಅಧಿಕಾರ ಶಾಶ್ವತ ಅಲ್ಲ ಎನ್ನುವುದನ್ನು ನೆನಪಿಸಿದ್ದಾರೆ. ಪಂಚರತ್ನದ ಬಗ್ಗೆ ಮಾತನಾಡಿದ್ದ ಡಿಕೆಶಿಗೆ ಮತ್ತೆ ಕೌಂಟರ್ ಕೊಟ್ಟಿದ್ದು, ಪಂಚರತ್ನ ರಾಜ್ಯಕ್ಕಾಗಿ ನಾನು ರೂಪಿಸಿದ್ದ ಪಂಚಸೂತ್ರಗಳು. ಗ್ಯಾರಂಟಿಗಳು ಶಾಶ್ವತ ‘ಆರ್ಥಿಕವೈಕಲ್ಯ’ರನ್ನಾಗಿಸುವ ತಂತ್ರಗಳು. ಎಲೆಕ್ಷನ್ ಗೆಲ್ಲಲು ಗ್ಯಾರಂಟಿಗಳಂಥ ಚೀಫ್ ಗಿಮಿಕ್ ಮಾಡ್ಬೇಕು. ನಿಮ್ಮ ಸಚಿವರು ಹೇಳಿದ್ದ ಈ ಹೇಳಿಕೆಗೆ ನನ್ನ ಸಹಮತವಿದೆ. ಗ್ಯಾರಂಟಿಗಳು ಎಷ್ಟು ಜನರಿಗೆ ತಲುಪಿದೆ. ಆರ್ಥಿಕ ಹೊರೆ ಎಷ್ಟು? ಶ್ವೇತಪತ್ರ ಹೊರಡಿಸಿ ಆಮೇಲೆ ಚರ್ಚೆಗೆ ಬನ್ನಿ ನಾನು ರೆಡಿಯಿದ್ದೀನಿ ಎನ್ನುವ ಮೂಲಕ ಚಲುವರಾಯಸ್ವಾಮಿ ಹೇಳಿದ್ದ ಚೀಪ್ ಗಿಮಿಕ್ ಅನ್ನೋ ಹೇಳಿಕೆಯನ್ನು ನೆನಪು ಮಾಡಿದ್ದಾರೆ.
CM ವಿರುದ್ಧದ ಆರೋಪಕ್ಕೆ ಉತ್ತರ ಕೊಟ್ಟ ಸಿದ್ದು..
ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಸ್ವತಃ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸುಳ್ಳು ಆರೋಪಗಳ ಮೂಲಕ ದಿನನಿತ್ಯ ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕುಮಾರಸ್ವಾಮಿ ಅವರೇ ನನ್ನನ್ನು ಟೀಕಿಸುವುದರಿಂದ ನಿಮ್ಮ ಮನಸಿಗೆ ಶಾಂತಿ ಸಿಗುವುದಿದ್ದರೆ, ನಿಮ್ಮ ದ್ವೇಷ ಅಸೂಯೆ ಮುಂದುವರಿಯಲಿ. ಚುನಾವಣಾ ಸೋಲಿನ ನಿಮ್ಮ ನಿರಾಸೆ, ಅದರಿಂದಾಗಿರುವ ಹತಾಶೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ರಾಜ್ಯದ ಬಡವರನ್ನು ಯಾಕೆ ಈ ರೀತಿ ದ್ವೇಷಿಸುತ್ತಿದ್ದೀರಿ..? ಬಡವರ ಕಲ್ಯಾಣಕ್ಕಾಗಿಯೇ ರೂಪಿಸಲಾಗಿರುವ ಯೋಜನೆಗಳನ್ನು ಯಾಕೆ ವಿರೋಧಿಸುತ್ತಿದ್ದೀರಿ? ಕಳೆದ ಚುನಾವಣೆಯಲ್ಲಿ ಅವರು ನಿಮ್ಮ ಪಕ್ಷವನ್ನು ತಿರಸ್ಕರಿಸಿದ್ದಕ್ಕಾಗಿ ಈ ದ್ವೇಷವೇ ? ಎಂದು ಕುಟುಕಿದ್ದಾರೆ.
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿನ ಘೋಷಣೆಗಳು. ಅದನ್ನು ಒಪ್ಪಿಕೊಂಡೇ ರಾಜ್ಯದ ಜನ ನಮ್ಮ ನಮ್ಮ ಪಕ್ಷವನ್ನು ಗೆಲ್ಲಿಸಿದ್ದಾರೆ. ಈ ಯೋಜನೆಗಳನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆರಡೂ ವಿರೋಧಿಸಿದ್ದವು. ಆ ಪಕ್ಷಗಳ ಸೋಲಿಗೆ ಗ್ಯಾರಂಟಿ ಯೋಜನೆಗಳ ಬಗೆಗಿನ ನಿಮ್ಮ ವಿರೋಧವೂ ಕಾರಣ ಎನ್ನುವುದು ನಿಮಗೆ ಇನ್ನೂ ಅರ್ಥವಾಗದೆ ಇರುವುದು ದುರಂತ ಎಂದಿದ್ದಾರೆ. ಇದೇ ರೀತಿ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಾ ಹೋದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆರಡಕ್ಕೂ ರಾಜ್ಯದ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಬಹಳ ಮುಖ್ಯವಾಗಿ ರಾಜ್ಯದ ಬಡಜನರನ್ನು ಗುರಿಯಾಗಿಸಿಕೊಂಡು ರೂಪಿಸಿದ್ದೇವೆ. ಅದು ಶ್ರೀಮಂತರು ಇಲ್ಲವೇ ಉದ್ಯಮಿಗಳಿಗೆ ನೆರವಾಗುವ ತೆರಿಗೆ ವಿನಾಯಿತಿಯೂ ಅಲ್ಲ, ಅವರ ಸಾಲ ಮನ್ನಾ ಮಾಡುವ ಯೋಜನೆಯೂ ಅಲ್ಲ. ವಂಚಕ ಉದ್ಯಮಿಗಳಿಗೆ ನೆರವಾಗಲು ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸೊಲ್ಲೆತ್ತಲಾಗದ ಕುಮಾರಸ್ವಾಮಿ ಮೂರು ಹೊತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ಜಗ್ಗಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ