ಕೋಲಾರ: ಸಾಯಬೇಕಾದ್ರೆ ಕೊನೆ ಆಸೆ ಏನು ಅಂತ ಡಾಕ್ಟರ್ ಕೇಳಿದಂತಹ ಪರಿಸ್ಥಿತಿ ಸಿದ್ದರಾಮಯ್ಯ ಅವರದ್ದು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಬಹುಮತ ಬರೋದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 130 ಸೀಟು ಬರುತ್ತೆ ಅಂತ ಹೇಳಿದ್ದರು. ಎಲ್ಲಾ ಇಟ್ಟುಕೊಂಡೆ ಕಳೆದ ಬಾರಿ 78 ಬರಲಿಲ್ಲ. ಈಗ ಏನು ಇಲ್ಲದೇ ಏನು ಬರುತ್ತೆ ಎಂದು ಕುಹಕವಾಡಿದರು.
ಸಿದ್ದರಾಮಯ್ಯ ಕೋಲಾರದಲ್ಲಿ ಸಿಕ್ಕಿಕೊಂಡಿದ್ದಾರೆ. ಒಳಗೆ ಬರೋಕೂ ಆಗದ, ಹೊರಗೆ ಹೋಗಲು ಆಗದ ಸ್ಥಿತಿ ಸಿದ್ದರಾಮಯ್ಯ ಅವರದ್ದು. ಹುಮನಾಬಾದ್ ಕ್ಷೇತ್ರದಲ್ಲಿ ನನ್ನ ಮಗನ ವಿರುದ್ಧ ಪ್ರಚಾರ ಮಾಡಿ ಬಂದಿದ್ದೀರಾ. ಯಾರ ತಂದೆಯಿಂದ ನೀವು ಎರಡು ಸಲ ಗೆದ್ರೋ, ಅಂತವನ ಮಗನಿಗೆ ವಿಷ ಕೊಡೋಕೆ ಹೋಗಿದ್ದೀರಾ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದರು.
ರಾಜ್ಯದ 224 ಕ್ಷೇತ್ರದಲ್ಲಿ ನಮ್ಮ ಪಕ್ಷಕ್ಕೆ ಬೇಕಿರೋದು 123 ಕ್ಷೇತ್ರ. ಬಾಕಿ ೧೦೦ ಕ್ಷೇತ್ರವನ್ನು ನೀವು ಹಂಚಿಕೊಳ್ಳಿ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರಿಗಾಗಿ ಸೈಟ್ ಮಾರಿ ಹಣ ನೀಡಿದ್ದೆ
ವರ್ತೂರು ಪ್ರಕಾಶ್ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಕೆಲಸ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯರಿಗೆ ಬಂದಿದ್ದು ಬ್ಯಾನ್ ಮಾಡಿದ್ದ ಎಸ್’ಡಿಪಿಐ ಹಾಗೂ ಪಿಎಫ್’ಐ ಮತಗಳು. 30 ಸಾವಿರದಿಂದ ಗೆಲ್ತಿನಿ ಅಂತ ಸಿದ್ದರಾಮಯ್ಯ ಹೇಳಿದ್ದರು, ನಾನು ನಿಲ್ಲಬೇಡಿ ಎಂದಿದ್ದೆ. ಎಲೆಕ್ಷನ್’ಗೆ 10 ದಿನ ಇರುವಾಗಲೇ ನನ್ನ ಬಳಿ ಗೆಲ್ಲಲ್ಲ ಅಂತ ಹೇಳಿದ್ದರು. ನಾನು ಸೋತುಬಿಡ್ತಿನಿ ಕಣಯ್ಯ ಎಲ್ರೂ ಒಂದಾಗಿದ್ದಾರೆ ಅಂತ ಹೇಳಿದ್ದರು. ಧೈರ್ಯ ಕಳೆದುಕೊಳ್ಳಬೇಡಿ ಎಂದು ವಿಶ್ವಾಸ ನೀಡಿದ್ದೆ. ರಾತ್ರಿ ಹಗಲು ಅವರ ಪರ ಕೆಲಸ ಮಾಡಿದ್ದೆ. ಚುನಾವಣೆ ಖರ್ಚಿಗಾಗಿ ಸಿದ್ದರಾಮಯ್ಯರಿಗಾಗಿ ನನ್ನ 60 ಲಕ್ಷ ರೂ ಸೈಟು ಮಾರಿ 30 ಲಕ್ಷ ಅವರ ಕೈಗೆ ಕೊಟ್ಟಿದ್ದೇನೆ. ಅಂದು ನಾನು ದೇವೇಗೌಡರ ಮಾತು ಕೇಳಿದ್ದರೆ ಇಂದು ಸಿದ್ದರಾಮಯ್ಯ ಇರುತ್ತಿರಲಿಲ್ಲ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿಗೆ ಕೊಟ್ಟದ್ದು ಕುದುರೆ ಅಲ್ಲ ಕತ್ತೆ
ಕೊಟ್ಟ ಕುದುರೆಯನ್ನು ಏರದವನು ಶೂರನು ಅಲ್ಲ, ಧೀರನು ಅಲ್ಲ ಅಂತ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿ, ಅವರು ಕೊಟ್ಟಿದ್ದು ಕುದುರೆ ಅಲ್ಲ, ಕತ್ತೆ. ಸರ್ಕಾರ ತೆಗೆದಿದ್ದು ಸಿದ್ದರಾಮಯ್ಯ ಎಂದು ಆರೋಪಿಸಿದರು.
ಹಿಂದೆ ಇಂದ ಬೆನ್ನಿಗೆ ಚಾಕು ಹಾಕಿ, ರೈತ ಮಕ್ಕಳ ಕುತ್ತಿಗೆ ಕೊಯ್ದಿರಿ. ದೇವೇಗೌಡರು ನಿಮಗೆ ಪಾರ್ಟಿ ಅಧ್ಯಕ್ಷ ಮಾಡಿದ್ರು, ಈ ಸ್ಥಾನಕ್ಕೆ ನಿಮ್ಮನ್ನು ತಂದ್ರಲ್ವಾ. ನಿಮಗೆ ಅವರ ಬಗ್ಗೆ ಸ್ಮರಣೆ ಏನಾದ್ರು ಇದಿಯಾ ಎಂದು ಪ್ರಶ್ನಿಸಿದರು.
ಬಹಿರಂಗವಾಗಿ ಸಾಬ್ರ ವೋಟು ಬೇಡ ಎನ್ನಲಿ
ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡರು ನಮಗೆ ಅಲ್ಪಸಂಖ್ಯಾತರು ಓಟು ಹಾಕಿಲ್ಲ ಎನ್ನುವ ಹೇಳಿಕೆ ಕುರಿತು ಮಾತನಾಡಿ, ಅದನ್ನು ಬಹಿರಂಗವಾಗಿ ವೇದಿಕೆ ಮೇಲೆ ಸಾಬ್ರು ವೋಟು ಬೇಡ ಅಂತ ಹೇಳೊಕೆ ಹೇಳಿ. ನಿಸಾರ್ ಅಹ್ಮದ್’ನ ಸೋಲಿಸಿ ಇಲ್ಲಿ ಜೆಡಿಎಸ್’ನ ಗೆಲ್ಲಿಸಿದ್ದಾರೆ. ನಾನು ಜನತಾ ದಳದ ಅಧ್ಯಕ್ಷ ಆಗಿದ್ದಾಗ ಶ್ರೀನಿವಾಸಗೌಡರ ಮನೆಯಲ್ಲಿ ತಿನ್ನೋಕೆ ತಟ್ಟೆ ಇರಲಿಲ್ಲ. ಅವರನ್ನು ಇಪ್ಕೋ ಟೋಕಿಯಾ ಅಧ್ಯಕ್ಷ ಮಾಡಿದ್ದು ದೇವೇಗೌಡರು. ಇವತ್ತು ಶ್ರೀನಿವಾಸಗೌಡ ದುಡ್ಡು ಮಾಡಿಕೊಂಡಿದ್ದು ದೇವೇಗೌಡರ ಕೃಪೆ ಇಂದ. ತಿಂದ ಮನೆಗೆ ಕನ್ನ ಹಾಕಿದೋನು ಗೌಡ್ರು ಗೌಡ್ರಿಗೆ ಬಿಟ್ಟಿಲ್ಲ. ಇನ್ನು ಸಾಬರಿಗೆ ನೀನು ಬಿಟ್ಟೀಯಾ ಎಂದು ಶಾಸಕ ಶ್ರೀನಿವಾಸಗೌಡ ವಿರುದ್ಧ ಹರಿಹಾಯ್ದರು.