ಶರಾವತಿ ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಈ ಸರ್ಕಾರವು ಹಿಂಪಡೆದಿರುವ ನಮ್ಮ ಸರ್ಕಾರ ಹೊರಡಿಸಿದ್ದ ಎಲ್ಲ 55 ಪ್ರಕರಣಗಳನ್ನು ಮರುಸ್ಥಾಪಿಸಬೇಕು ಮತ್ತು ರಾಜ್ಯದ ಉಚ್ಛ ನ್ಯಾಯಾಲಯವು ರದ್ದು ಮಾಡಿರುವ 01 ಪ್ರಕರಣದ ವಿರುದ್ಧ ಸರ್ಕಾರವು ಈ ಕೂಡಲೇ ಮೇಲ್ಮನವಿ ಸಲ್ಲಿಸಬೇಕು. ಅಗತ್ಯ ಇರುವ ಕಡೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಗಳನ್ನು ಮಂಜೂರು ಮಾಡುವುದು ಹಾಗೂ ಮಂಜೂರು ಮಾಡಿರುವ ಭೂಮಿಗಳನ್ನು ರೈತರ ವಶದಲ್ಲಿಯೆ ತಕ್ಷಣ ಉಳಿಸುವಂತಾಗಬೇಕು. ಒಟ್ಟಿನಲ್ಲಿ ಸಂತ್ರಸ್ತರಿಗೆ ಸರ್ಕಾರದ ಯಾವುದೇ ಇಲಾಖೆಗಳಿಂದ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಣೆ ನೀಡಲು ಬದ್ಧವಾಗಿರಬೇಕು.
- ರಾಜ್ಯದ ಜನರಿಗೆ ಅನೇಕ ದಶಕಗಳಿಂದ ಬೆಳಕು ಕೊಟ್ಟಿರುವ ಶಿವಮೊಗ್ಗ ಜಿಲ್ಲೆಯ ಶರಾವತಿ ಪ್ರದೇಶದ ಜನರ ಬದುಕು ಇಂದು ಕತ್ತಲೆಯಲ್ಲಿ ಮುಳುಗಿದೆ. ಶರಾವತಿ ಯೋಜನೆಗಾಗಿ ಭೂಮಿಯನ್ನು ಬಿಟ್ಟುಕೊಟ್ಟವರಿಗೆ ತಮ್ಮ ಪೂರ್ವಜರು ಬಾಳಿ ಬದುಕಿದ್ದ ನೆಲವನ್ನು, ನೆಲದೊಂದಿನ ನೆನಪುಗಳನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಿದ್ದೇವೆ ಎಂಬ ದುಃಖ ಕಾಡಿದ್ದರೂ ಸಹ ತಾವು ನಾಡಿಗಾಗಿ ತ್ಯಾಗದ ಕೆಲಸ ಮಾಡುತ್ತಿದ್ದೇವೆ ಎಂಬ ಭಾವನೆಯಲ್ಲಿ ಈ ಯೋಜನೆಗಾಗಿ ಜಾಗವನ್ನು ಬಿಟ್ಟುಕೊಟ್ಟಿದ್ದವರು ಇಂದು ತಮ್ಮ ಕಾಳಜಿಗಳಿಗಾಗಿ ಪರಿತಪಿಸುವಂತಾಗಿದೆ.
- ಹಿರೇಭಾಸ್ಕರ ಅಣೆಕಟ್ಟು [ಶರಾವತಿ ನದಿಗೆ ಅಡ್ಡಕಟ್ಟಿದ ಅಣೆಕಟ್ಟು] ಕಟ್ಟಲು ಮತ್ತು ಶರಾವತಿ ಯೋಜನೆಯನ್ನು ವಿಸ್ತರಿಸಲು 1957ರಲ್ಲಿ 7000 ಕುಟುಂಬಗಳು ಅಂದಾಜು 30000 ಸಂಖ್ಯೆಯ ಜನರು ತಾವು ಶತಮಾನಗಳಿಂದ ಬಾಳಿ ಬದುಕಿದ್ದ ಭೂಮಿ, ತೋಟ, ತುಡಿಕೆ, ಮನೆ ಮಠ, ದೇವಸ್ಥಾನಗಳು, ಜಾನುವಾರುಗಳನ್ನು ಬಿಟ್ಟುಕೊಟ್ಟು ನಿರಾಶ್ರಿತರಾದರು.
- ಸಾಗರ ಮತ್ತು ಹೊಸನಗರ ತಾಲ್ಲೂಕಿನ ಬಾರಂಗಿ, ತಾಳಗುಪ್ಪ, ಕರೂರು, ಆವಿನಹಳ್ಳಿ, ಆನಂದಪುರ ಸೇರಿ ಅಧಿಕೃತವಾಗಿ 166 ಗ್ರಾಮಗಳು ಹಾಗೂ ಮಜರಾ ಗ್ರಾಮಗಳೂ ಸೇರಿ 180 ಗ್ರಾಮಗಳು ಮುಳುಗಡೆಯಾದವು.
- ಈ ಯೋಜನೆಗಾಗಿ ಒಂದು ಅಂದಾಜಿನಂತೆ 15,550 ಎಕರೆ ಕೃಷಿ ಭೂಮಿ ಮುಳುಗಡೆಯಾಗಿರುತ್ತದೆ. ಇದರಲ್ಲಿ 12,500 ಎಕರೆ ಭತ್ತ ಬೆಳೆಯುತ್ತಿದ್ದ ಪ್ರದೇಶ. 1000 ಎಕರೆ ಅಡಿಕೆ, 2100 ಎಕರೆ ಖುಷ್ಕಿ ಭೂಮಿ ಮುಳುಗಡೆಯಾಗಿತ್ತು.
- ಆಗ ಸರ್ಕಾರಗಳು ಪುನರ್ವಸತಿಗಾಗಿ ಅರಣ್ಯ ಇಲಾಖೆಗೆ ಸೇರಿದ 9947 ಎಕರೆ ಜಮೀನನ್ನು ಕಂದಾಯ ಇಲಾಖೆಗೆ ಸುಮಾರು 34 ಸರ್ಕಾರಿ ಆದೇಶಗಳ ಮೂಲಕ ಸರ್ಕಾರಕ್ಕೆ ಹಸ್ತಾಂತರಿಸಲಾಗಿತ್ತು.
- 1959 ರಿಂದ 1970ರ ವರೆಗೆ ಹಿಂದಿನ ಸರ್ಕಾರಗಳು ಸುಮಾರು 34 ಸರ್ಕಾರಿ ಆದೇಶಗಳ ಮೂಲಕ ಸಾಗರ, ಶಿಕಾರಿಪುರ, ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗ, ಭದ್ರಾವತಿ, ಸಿದ್ದಾಪುರ, ನರಸಿಂಹರಾಜಪುರ ಹಾಗೂ ತರೀಕೆರೆ ತಾಲ್ಲೂಕುಗಳಲ್ಲಿ ಸುಮಾರು 19067.08 ಎಕರೆ ಭೂಮಿಯನ್ನು ಶರಾವತಿ ಸಂತ್ರಸ್ಥರಿಗಾಗಿ ನೀಡಿದ್ದವು. ಇದರಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿದ್ದ 9947 ಎಕರೆ ಜಮೀನು ಸಹ ಸೇರಿತ್ತು. ಅರಣ್ಯ ಇಲಾಖೆಯ ಜಮೀನುಗಳನ್ನು ಸಂತ್ರಸ್ಥರಿಗಾಗಿ ಡಿ ರಿಸರ್ವ್ ಮಾಡಿ ಬಿಟ್ಟುಕೊಡುವ ಮೂಲಕ ಅವರೆಲ್ಲರ ಬದುಕಿಗೆ ಭದ್ರತೆ ನೀಡಿ, ಮತ್ತೆ ಹೊಸದಾಗಿ ಬದುಕನ್ನು ರೂಪಿಸಿಕೊಳ್ಳುವ ಅವಕಾಶವನ್ನು ಒದಗಿಸಲಾಗಿತ್ತು.
- ಹೀಗಿದ್ದರೂ, “ಹಿಂದೆ ಅರಣ್ಯದ ಭೂಮಿಯು ಅರಣ್ಯೇತರ ಚಟುವಟಿಕೆಗಳಿಗೆ ಬಳಸಲು ಕಾನೂನುಬದ್ಧವಾಗಿ ವರ್ಗಾವಣೆಯಾಗಿಲ್ಲ” ಎಂದು ಅರಣ್ಯ ಇಲಾಖೆಯು ಕಿತಾಪತಿ ಪ್ರಾರಂಭಿಸಿತು. ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಕಿತಾಪತಿ ನನ್ನ ಗಮನಕ್ಕೆ ಬಂದಿತ್ತು. ನಮ್ಮ ಸರ್ಕಾರ ಜನರ ಮನವಿಗೆ ಸ್ಪಂದಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಿತು. ಆಗ ಅರಣ್ಯ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದೆವು. ಸಮಿತಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಇದ್ದರು. ಇದರಲ್ಲಿ ಕಾಗೋಡು ತಿಮ್ಮಪ್ಪನವರು, ಈಶ್ವರಪ್ಪನವರು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್ ಗೋಪಾಲ್ ಎಂಬ ಐಎಎಸ್ ಅಧಿಕಾರಿ ಇದ್ದರು. ಇವರೆಲ್ಲ ಸೇರಿ ಸಮಸ್ಯೆ ಬಗೆಹರಿಸಲು ಹಲವಾರು ಸೂತ್ರಗಳನ್ನು ಕಂಡುಕೊಂಡಿದ್ದರು.
- 2015 ರಲ್ಲಿ ನಮ್ಮ ಸರ್ಕಾರವು ‘ದ ಕರ್ನಾಟಕ ಫಾರೆಸ್ಟ್ ಆಕ್ಟ್-1963’ ಮತ್ತು ‘ಫಾರೆಸ್ಟ್ ಕನ್ಸರ್ವೇಶನ್ ಆಕ್ಟ್-1980’ರ ಪ್ರಕಾರ ರಾಜ್ಯ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಈ ಎಲ್ಲ ಪ್ರದೇಶಗಳನ್ನು 55 ಸರ್ಕಾರಿ ಆದೇಶಗಳ ಮೂಲಕ ಡಿ-ರಿಸರ್ವ್ ಮಾಡಿ ಅಧಿಸೂಚನೆ ಹೊರಡಿಸಲಾಗಿತ್ತು.
- ನಿರಾಶ್ರಿತರಿಗೆ ಭೂಮಿ, ಪರಿಹಾರ ಹಂಚಿಕೆ ಮಾಡಲು ತ್ರಿಸದಸ್ಯ ಸದಸ್ಯ ಸಮಿತಿಯನ್ನೂ ಮಾಡಲಾಗಿತ್ತು. ಪುನರ್ವಸತಿಗೊಂಡ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಹಾಗೂ ಭೂಮಿ ಕಳೆದುಕೊಂಡವರಿಗೆ ಭೂಮಿ ಕೊಡಲು ಯೋಜನೆ ಸಿದ್ಧಪಡಿಸಲಾಗಿತ್ತು. ಅದರಂತೆ ಒಣ ಭೂಮಿಯಾದರೆ 1:4 ರಷ್ಟು ನೀರಾವರಿಯಾದರೆ 1:2 ರಷ್ಟು ಹೀಗೆ ಪರಿಹಾರ ಸೂತ್ರ ಮಾಡಿ ಹಂಚಿಕೆ ಮಾಡಲಾಗಿತ್ತು.
- ಹೀಗೆ ಪರ್ಯಾಯ ಜಾಗದಲ್ಲಿ ಭೂಮಿ ಪಡೆದ ಜನರು ಬದುಕು ಕಟ್ಟಿಕೊಂಡು 06 ದಶಕಗಳಿಂದ ಬದುಕುತ್ತಿದ್ದರು. ಅವರಿಗೆ ಹಕ್ಕುಪತ್ರ, ಪಹಣಿ, ಖಾತೆ ಇತ್ಯಾದಿಗಳೆಲ್ಲವೂ ಸಿಕ್ಕಿವೆ. ಈ ಜಾಗಗಳಲ್ಲಿ ಸರ್ಕಾರವು ಆಸ್ಪತ್ರೆ, ಶಾಲೆ, ಸರ್ಕಾರಿ ಕಛೇರಿಗಳು, ಡಾಂಬರು ರಸ್ತೆಗಳನ್ನು ನಿರ್ಮಿಸಿಯಾಗಿತ್ತು. ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಹಸ್ತಾಂತರವಾದ ಭೂಮಿಯಲ್ಲಿ ಈಗಾಗಲೆ ಹಲವಾರು ಅಭಿವೃದ್ಧಿ ಚಟುವಟಿಕೆಗಳು ನಡೆದು ರೈತರು ತಮ್ಮ ಭೂಮಿಗಳನ್ನು ಭೂ ಪರಿವರ್ತನೆ ಮಾಡಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ತೋಟ-ಗದ್ದೆಗಳನ್ನು ಮಾಡಿಕೊಂಡು, ರಸ್ತೆಗಳನ್ನು ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈಗಾಗಲೆ ಎರಡು ಮೂರು ತಲೆಮಾರುಗಳು ಬದುಕು ಕಳೆದಿವೆ. ರೈತರ ಹೆಸರಿಗೆ ಸ್ಪಷ್ಟವಾದ ದಾಖಲೆಗಳು ಬಂದಿವೆ.
- ನಮ್ಮ ಸರ್ಕಾರ ರಚಿಸಿದ್ದ ಸಮಿತಿಯು ಹಲವಾರು ಸಭೆಗಳನ್ನು ನಡೆಸಿ ಅರಣ್ಯ ಇಲಾಖೆಯ ಭೂಮಿ ಸರ್ಕಾರಕ್ಕೆ ಹಸ್ತಾಂತರವಾಗಿ ಡಿ-ರಿಸರ್ವ್ (ಡಿ-ನೋಟಿಫಿಕೇಶನ್) ಮಾಡುವುದು, ಯಾರ್ಯಾರು ಎಲ್ಲೆಲ್ಲಿ ಸ್ವಾಧೀನದಲ್ಲಿದ್ದಾರೆ ಎಂಬುದನ್ನು ಗುರ್ತಿಸಿ ಜಂಟಿ ನಕ್ಷೆ ಮಾಡುವುದು, ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರ ನೀಡುವುದು. ಹೀಗೆ ಹಲವಾರು ಸೂತ್ರಗಳನ್ನು ಶಿಫಾರಸ್ಸು ಮಾಡಲಾಯಿತು. (ಫಾರೆಸ್ಟ್ ಡ್ವೆಲ್ಲರ್ಸ್ ಆಕ್ಟ್ ಎಂಬ ಈ ಕಾಯ್ದೆಯನ್ನು ಜಾರಿಗೆ ತಂದು ಅರಣ್ಯವಾಸಿಗಳನ್ನು ಸಂರಕ್ಷಿಸಿದ್ದು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಎನ್ನುವುದನ್ನು ಇಲ್ಲಿ ನೆನಪಿಸ ಬಯಸುತ್ತೇನೆ).
- 1957 ರಿಂದ 1970ರ ಮಧ್ಯದ ಅವಧಿಯಲ್ಲಿ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಹಸ್ತಾಂತರವಾಗಿರುವ ಒಟ್ಟು ಅರಣ್ಯ ವಿಸ್ತೀರ್ಣವು 9934.02 ಎಕರೆ. ಸಂತ್ರಸ್ಥರ ಸ್ವಾಧೀನದಲ್ಲಿರುವ ಜಮೀನುಗಳನ್ನು ಕರ್ನಾಟಕ ಅರಣ್ಯ ಹಕ್ಕು ಕಾಯ್ದೆ 1963ರ ಸೆಕ್ಷನ್ 28ರ ಪ್ರಕಾರ ಡಿ-ರಿಸರ್ವ್ (ಡಿ-ನೋಟಿಫಿಕೇಷನ್) ಪ್ರಕ್ರಿಯೆ ಪೂರ್ಣಗೊಂಡಿಲ್ಲದಿದ್ದರೆ ಅವುಗಳನ್ನು ಡಿ-ರಿಸರ್ವ್ ಮಾಡುವುದು ಹಾಗೂ 10/9/1970 ಮತ್ತು 25/10/1980 ಕ್ಕಿಂತಲೂ ಮುಂಚೆ ಅರಣ್ಯ ಜಮೀನುಗಳು ಸರ್ಕಾರಕ್ಕೆ ಹಸ್ತಾಂತರವಾಗಿರುವ ಕಾರಣ ಡಿನೋಟಿಫಿಕೇಷನ್ ಮಾಡಲು ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿಲ್ಲವೆಂದು ಮನಗಂಡು ನಮ್ಮ ಸರ್ಕಾರವು 2015 ರಿಂದ 2017 ರವರೆಗೆ 56 ಅಧಿಸೂಚನೆಗಳನ್ನು ಹೊರಡಿಸಿ ಡಿ-ರಿಸರ್ವ್ ಮಾಡಿದ್ದೆವು. ಇದರಿಂದ 9934.02 ಎಕರೆ ಭೂಮಿ ಸಿಕ್ಕಿ ಅದರಲ್ಲಿ ಮಂಜೂರಾತಿ ಪ್ರಕ್ರಿಯೆ ಮುಗಿಸಿ ಹಕ್ಕುಪತ್ರಗಳನ್ನು ನೀಡಿ ಬಹುಕಾಲದ ಸಮಸ್ಯೆ ಬಗೆಹರಿಸಿದ್ದೆವು.
- ಹೀಗೆ ಡಿ-ರಿಸರ್ವ್ ಮಾಡಿ ಆದೇಶ ಹೊರಡಿಸಿ ಸಂತ್ರಸ್ಥರಿಗೆ ಒದಗಿಬಂದ ಭದ್ರತೆಯೂ ಹೆಚ್ಚು ದಿನ ಉಳಿಯಲು ಬಿಡಲಿಲ್ಲ. ಗಿರೀಶ್ ಆಚಾರ್ ಎನ್ನುವವರು ಸೂಡೂರಿನ 260 ಎಕರೆ ಪ್ರದೇಶವನ್ನು ಡಿ-ರಿಸರ್ವೇಶನ್ ಮಾಡಿದ್ದ 01 ಆದೇಶದ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಿಸಿದರು (ರಿಟ್ ಪಿಟೀಷನ್ ಸಂಖ್ಯೆ/ 43037/2019). ಈ ಪ್ರಕರಣದಲ್ಲಿ ಮಾನ್ಯ ಉಚ್ಛ ನ್ಯಾಯಾಲಯವು ಎ ಎಫ್ ಡಿ 114 ಎಫ್ ಜಿ ಎಲ್ 2016 [1] ರಂತೆ ಸರ್ಕಾರವು ಮಾಡಿದ್ದ ಡಿ-ರಿಸರ್ವ್ ಅಧಿಸೂಚನೆಯನ್ನು ದಿನಾಂಕ 4/3/2021 ರಂದು ರದ್ದು ಮಾಡಿ ಆದೇಶಿಸಿತ್ತು.
- ಈ ಪ್ರಕರಣದಲ್ಲಿ ನಿರಾಶ್ರಿತರನ್ನು ಪ್ರತಿವಾದಿಗಳನ್ನಾಗಿಸಿ ಅವರ ಅಹವಾಲನ್ನೆ ಕೇಳಿರಲಿಲ್ಲ. ಹಾಗಾಗಿ ಸಂತ್ರಸ್ತರಾದ ನಾರಾಯಣ ಶೆಟ್ಟಿಯವರು ಸಂಖ್ಯೆ 16753/2022 ರಂತೆ ರಿವ್ಯೂ ಪಿಟಿಷನ್ ಹಾಕಿದ್ದರು. ಆದರೆ ನ್ಯಾಯಾಲಯವು ಇದನ್ನು ವಜಾ ಮಾಡಿತು.
- ಗಿರೀಶ್ ಆಚಾರ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಸಂತ್ರಸ್ಥರನ್ನು ಪಾರ್ಟಿ ಮಾಡದೆ ಕೇವಲ ಸರ್ಕಾರವನ್ನು ಮಾತ್ರ ಪಾರ್ಟಿ ಮಾಡಲಾಗಿತ್ತು. ಸದರಿ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಸರ್ಕಾರದ ಆದೇಶವನ್ನು ರದ್ದುಪಡಿಸಿದರೂ ತನ್ನ ಆದೇಶದ ಪ್ಯಾರಾ 9 ರಲ್ಲಿ ಸರ್ಕಾರ ಹೊಸದಾಗಿ ನೋಟಿಫಿಕೇಶನ್ ಮಾಡಬಹುದು ಎಂದು ಹೇಳಿತು.
- ಈ ವಿಚಾರದ ಕುರಿತು ಮುಖ್ಯಮಂತ್ರಿಗಳು 15 ದಿನಗಳಲ್ಲೆ ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದ್ದರು. ಆದರೆ ಇಷ್ಟು ದಿನವಾದರೂ ಸಹ ಸದರಿ ಗಿರೀಶ್ ಆಚಾರ್ ಅವರ ಪ್ರಕರಣದಲ್ಲಿ ಉಚ್ಛ ನ್ಯಾಯಾಲಯದ ಆದೇಶದ ವಿರುದ್ಧ ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿಯನ್ನೂ ಸಲ್ಲಿಸಿಲ್ಲ. ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆಗಳನ್ನು ಸಲ್ಲಿಸಿಲ್ಲ. ಉಚ್ಛ ನ್ಯಾಯಾಲಯವು ರದ್ದು ಪಡಿಸಿದ್ದು ಕೇವಲ ಒಂದು ಆದೇಶವನ್ನು ಮಾತ್ರ. ಆದರೆ ಈ ಸರ್ಕಾರ ಇದನ್ನೇ ನೆಪವಾಗಿ ಇಟ್ಟುಕೊಂಡು ಬಾಕಿ ಉಳಿದಿದ್ದ ಎಲ್ಲಾ 56 ಡಿ-ರಿಸರ್ವ್ ಆದೇಶಗಳನ್ನೂ ಸಹ ಹಿಂದಕ್ಕೆ ಪಡೆದುಬಿಟ್ಟಿದೆ. ಈ ಕಾರಣಗಳಿಂದಾಗಿ ಶರಾವತಿ ಯೋಜನೆಗೆ ಭೂಮಿ ಬಿಟ್ಟುಕೊಟ್ಟ ಸುಮಾರು 30 ಸಾವಿರ ಕುಟುಂಬಗಳ 2.5 ಲಕ್ಷಕ್ಕೂ ಹೆಚ್ಚು ಜನ ವಿಪರೀತ ಸಂಕಷ್ಟದಲ್ಲಿದ್ದಾರೆ.
- ಸರ್ಕಾರವು ಕೇಂದ್ರದಿಂದ ಅನುಮತಿ ಪಡೆದು ಹೊಸದಾಗಿ ಡಿ-ರಿಸರ್ವ್ ಮಾಡುವುದಾಗಿ ಈ ಸರ್ಕಾರ ಹೇಳಿತ್ತು. ಆದರೆ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರವು ದಿನಾಂಕ 28/9/2022 ರಂದು ಏಕಾಏಕಿ ನಮ್ಮ ಸರ್ಕಾರ ಮಾಡಿದ್ದ ಎಲ್ಲ 55 ಡಿ-ರಿಸರ್ವ್ ಅಧಿಸೂಚನೆಗಳನ್ನೂ ರದ್ದು ಮಾಡಿ ಆದೇಶ ಹೊರಡಿಸಿತು. ಇದರ ಜೊತೆಗೆ ಬೊಮ್ಮಾಯಿಯವರು ವಿಧಾನ ಪರಿಷತ್ತಿನಲ್ಲಿ ನೀಡಿರುವ ಹೇಳಿಕೆ ಪ್ರಕಾರ ಶಿವಮೊಗ್ಗ ಜಿಲ್ಲೆಯ 12385.89 ಹೆಕ್ಟೇರ್ ವಿಸ್ತೀರ್ಣದ [30965 ಎಕರೆ] ಭೂಮಿಯ ಎಲ್ಲಾ ಮಂಜೂರಾತಿಗಳನ್ನೂ ರದ್ದು ಮಾಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದರು.
- ಈ ಕೆಟ್ಟ ಸರ್ಕಾರದ ಅಮಾನವೀಯ ನಿರ್ಧಾರದಿಂದಾಗಿ ಈಗ ಅಂದಾಜು 2.5 ಲಕ್ಷ ಜನರು ಇನ್ನಿಲ್ಲದ ಸಂಕಟಕ್ಕೆ ಸಿಕ್ಕಿಕೊಂಡಿದ್ದಾರೆ.
- ಡಬಲ್ ಎಂಜಿನ್ ಸರ್ಕಾರ ಎಂದು ಬೊಗಳೆ ಬಿಟ್ಟು ಅಧಿಕಾರಕ್ಕೆ ಬಂದ ಬಿಜೆಪಿಗರು ಕೇಂದ್ರಕ್ಕೆ ಹೋಗಿ ಮೋದಿ ಎದುರುಗಡೆ ನಿಂತು ಜಿಲ್ಲೆಯ ಜನರ ಸಂಕಷ್ಟ ಪರಿಹರಿಸುವ ತಾಕತ್ತನ್ನು ಪ್ರದರ್ಶಿಸಿಲ್ಲ.
ಆದ್ದರಿಂದ…
• ಶರಾವತಿ ಸಂತ್ರಸ್ಥರ ಪ್ರಕರಣದಲ್ಲಿ ಈ ಸರ್ಕಾರವು ಹಿಂಪಡೆದಿರುವ ನಮ್ಮ ಸರ್ಕಾರ ಹೊರಡಿಸಿದ್ದ ಎಲ್ಲ 55 ಪ್ರಕರಣಗಳನ್ನು ಮರುಸ್ಥಾಪಿಸಬೇಕು.
• ರಾಜ್ಯದ ಉಚ್ಛ ನ್ಯಾಯಾಲಯವು ರದ್ದು ಮಾಡಿರುವ 01 ಪ್ರಕರಣದ ವಿರುದ್ಧ ಸರ್ಕಾರವು ಈ ಕೂಡಲೇ ಮೇಲ್ಮನವಿ ಸಲ್ಲಿಸಬೇಕು.
• ಅಗತ್ಯ ಇರುವ ಕಡೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಗಳನ್ನು ಮಂಜೂರು ಮಾಡುವುದು. ಮಂಜೂರು ಮಾಡಿರುವ ಭೂಮಿಗಳನ್ನು ರೈತರ ವಶದಲ್ಲಿಯೆ ತಕ್ಷಣ ಉಳಿಸುವಂತಾಗಬೇಕು.
• ಶರಾವತಿಯ ನಿರಾಶ್ರಿತರೂ ಸೇರಿದಂತೆ, ಚಕ್ರ, ವಾರಾಹಿ, ಸಾವೆ ಹಕ್ಲು, ಭದ್ರಾ, ತುಂಗಾ ಅಣೆಕಟ್ಟುಗಳ ಸಂತ್ರಸ್ಥರ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಬೇಕು.
• ಜೊತೆಗೆ ಎಲ್ಲ ಬಗರ್ ಹುಕುಂ ಅರ್ಜಿಗಳಾದ 50, 53 ಮತ್ತು 57 [ಇವು ಕಾಂಗ್ರೆಸ್ ಸರ್ಕಾರದ ಸಾಧನೆಗಳು] ಅನ್ನು ಜನಪರವಾಗಿ ಇತ್ಯರ್ಥ ಮಾಡಿ ರೈತರಿಗೆ ಭೂ ಮಂಜೂರಾತಿ ಮಾಡಿಕೊಡಬೇಕು.
• ನಮ್ಮ ಸರ್ಕಾರ ಜಾರಿಗೆ ತಂದಿರುವ 94ಸಿ, ಸಿಸಿ, ಡಿ, ಕಂದಾಯ ಗ್ರಾಮ ಮುಂತಾದವುಗಳಡಿ ಜಮೀನುಗಳನ್ನು ಮಂಜೂರು ಮಾಡಿ ವಸತಿ ಹಕ್ಕುಗಳನ್ನು ಸ್ಥಾಪಿಸಿಕೊಡಬೇಕು.
• ನಮ್ಮ ಸರ್ಕಾರ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಿತ್ತು. ಅದನ್ನು ಬಿಜೆಪಿ ಸರ್ಕಾರ ರದ್ದು ಮಾಡಿದೆ. ಸರ್ಕಾರ ಕೂಡಲೆ ರದ್ದು ಮಾಡಿದ ಆದೇಶವನ್ನು ಹಿಂಪಡೆಯಬೇಕು. ಎಲ್ಲ ರೈತರಿಗೆ ಹಕ್ಕುಪತ್ರ ಖಾತೆ ಖಿರ್ದಿಗಳನ್ನು ನೀಡಿ ಅವರು ನೆಮ್ಮದಿಯಿಂದ ವಾಸ ಮಾಡುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ನಾನು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಇದು ಪದೇ ಪದೇ ನಿರಾಶ್ರಿತರಾಗುತ್ತಿರುವ ಶರಾವತಿ ಸಂತ್ರಸ್ಥರ ಆಗ್ರಹವೂ ಕೂಡ ಆಗಿದೆ.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮಾತಿಗೆ ಸದನದಲ್ಲಿ ಸಭಾಧ್ಯಕ್ಷರು ಕೂಡ ದನಿಗೂಡಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸರ್ಕಾರ ಸಿದ್ದರಾಮಯ್ಯ ಅವರು ನೀಡಿರುವ ಸಲಹೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ, ಸಂತ್ರಸ್ತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸುವುದಾಗಿ ಭರವಸೆ ನೀಡಿತು.