ರಾಜ್ಯ ಹಾಗು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಗದ್ದಲ ಎಬ್ಬಿಸಿರುವ ಪಠ್ಯ ಪುಸ್ತಕ ಪರಿಷ್ಕರಣಾ ವಿವಾದಕ್ಕೆ ಅಂತ್ಯ ಹಾಡಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮಿತಿಯನ್ನು ವಿಸರ್ಜಿಸಿದ್ದು ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ನಾಡದ್ರೋಹಿ ಅಧ್ಯಕ್ಷನ ಸಮಿತಿ ಪರಿಷ್ಕರಿಸಿರುವ ಪಠ್ಯ ರದ್ದು ಮಾಡಬೇಕು ಮತ್ತು ರೋಹಿತ್ ಚಕ್ರತೀರ್ಥ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನಾಡಗೀತೆ ಹಾಗು ರಾಷ್ಟ್ರಕವಿ ಕುವೆಂಪುರನ್ನ ಗೇಲಿ ಮಾಡಿರುವ ಸಮಾಜ ಸುಧಾರಕರಾದ ಅಂಬೇಡ್ಕರ್, ಬಸವಣ್ಣರಿಗೆ ಅವಮಾನ ಮಾಡಿರುವ ರೋಹಿತ್ನನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಡುವುದಲ್ಲದೇ ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದಲೂ ಕಿತ್ತುಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಬಸವಣ್ಣನವರ ವಿಚಾರವೂ ಸೇರಿದಂತೆ ಆಕ್ಷೇಪ ವ್ಯಕ್ತವಾಗಿರುವ ಅಂಶಗಳನ್ನು ಪರಿಷ್ಕರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಹಾಗಿದ್ದರೆ ಈಗಿನ ಪರಿಷ್ಕೃತ ಪಠ್ಯವನ್ನು ಕೈಬಿಡಲಾಗುವುದೇ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.












