ಇಂದು ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಸಚಿವ ಕೆ.ಎಸ್.ಈ vs ಡಿಕೆಶಿ ಎಂದೇ ಹೇಳಬಹುದು ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ಗಳನ್ನು ಮಾಡಿ ಈಶ್ವರಪ್ಪನವರ ರಾಜೀನಾಮೆಗೆ ಆಗ್ರಹಿಸಿದೆ.
ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿರುವ ಗ್ರಾಮೀಣ ಅಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ಧ ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸಿ, ಅವರನ್ನು ಗುರುವಾರ 11 ಗಂಟೆಯೊಳಗೆ ಸಚಿವ ಸ್ಥಾನದಿಂದ ವಜಾಮಾಡದೆ ಇದ್ದರೆ ವಿಧಾನಮಂಡಲದ ಉಭಯ ಸದನಗಳಲ್ಲಿ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತೇವೆ.
ಬಿಜೆಪಿ ಮತ್ತು ಆರ್ ಎಸ್ ಎಸ್ ಈ ದೇಶದ ಸಂವಿಧಾನವನ್ನಾಗಲಿ, ರಾಷ್ಟ್ರಧ್ವಜವನ್ನಾಗಲಿ ಹೃತ್ಪೂರ್ವಕವಾಗಿ ಎಂದೂ ಒಪ್ಪಿಕೊಂಡಿಲ್ಲ. ದೇವರು, ಧರ್ಮ, ದೇಶಪ್ರೇಮ, ರಾಷ್ಟಧ್ವಜ, ರಾಷ್ಟ್ರಗೀತೆ ಎಲ್ಲವೂ ಆ ಪಕ್ಷಕ್ಕೆ ರಾಜಕೀಯದ ಅಸ್ತ್ರಗಳು. ಸಂವಿಧಾನ ಮತ್ತು ರಾಷ್ಟ್ರಧ್ವಜದ ವಿರುದ್ಧ ಹೇಳಿಕೆ ನೀಡುತ್ತಾ ಬಂದಿದ್ದಾರೆ. ಸಚಿವ ಈಶ್ವರಪ್ಪನವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಅಲ್ಲ. ತಮ್ಮ ಪಕ್ಷ ಮತ್ತು ಪರಿವಾರದ ಅಭಿಪ್ರಾಯವನ್ನೇ ಅವರು ಹೇಳಿದ್ದಾರೆ. ಅಂತರಂಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಆರ್.ಎಸ್.ಎಸ್ ನ ಸರಸಂಘ ಚಾಲಕ ಮೋಹನ್ ಭಾಗವತ್ ವರೆಗೆ ಎಲ್ಲರ ಅಭಿಪ್ರಾಯವೂ ಇದೇ ಆಗಿದೆ.
ವಿದ್ಯಾರ್ಥಿಗಳು ರಾಷ್ಟ್ರಧ್ವಜದ ಸ್ಥಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದ ಕೃತ್ಯವನ್ನು ಈಶ್ವರಪ್ಪನವರು ಖಂಡಿಸಿ, ವಿದ್ಯಾರ್ಥಿಗಳ ವಿರುದ್ಧ ಕ್ರಮಕೈಗೊಂಡಿದ್ದರೆ ವಿವಾದ ಶಾಂತಿಯುತವಾಗಿ ಬಗೆಹರಿಯುತ್ತಿತ್ತು. ಅವರು ‘”ಇವತ್ತಲ್ಲ ನಾಳೆ ಕೆಂಪು ಕೋಟೆಯ ಮೇಲೆ ಕೇಸರಿ ಬಾವುಟ ಹಾರಿಸುತ್ತೇವೆ” ಎಂದು ಅತ್ಯಂತ ಉಡಾಫೆಯಿಂದ ಮಾತನಾಡಿ ಪ್ರಚೋದಿಸಿದ್ದಾರೆ.
ದೇಶದಲ್ಲಿ ಸರ್ಕಾರವನ್ನು ಟೀಕಿಸಿದ ವ್ಯಕ್ತಿಗಳ ಮೇಲೆಲ್ಲಾ ರಾಷ್ಟ್ರ ದ್ರೋಹದ ಪ್ರಕರಣವನ್ನು ದಾಖಲಿಸುತ್ತಿರುವ ಸಂದರ್ಭದಲ್ಲಿ ರಾಷ್ಟ್ರದೋಹದ ಹೇಳಿಕೆ ಕೊಟ್ಟಿರುವ ಕೆ.ಎಸ್. ಈಶ್ವರಪ್ಪನವರ ಮೇಲೆ ಸರ್ಕಾರ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಆಶ್ಚರ್ಯಕರವಾಗಿದೆ. ದೇಶಪ್ರೇಮವೇ ತಮ್ಮ ಉಸಿರು ಎಂದು ಹೇಳುತ್ತಿರುವ ಭಾರತೀಯ ಜನತಾ ಪಕ್ಷ ಕನಿಷ್ಠ ಈಶ್ವರಪ್ಪನವರ ಹೇಳಿಕೆಯನ್ನು ಖಂಡಿಸಬಹುದಿತ್ತು. ಅದು ಸಚಿವರ ವೈಯಕ್ತಿಕ ಹೇಳಿಕೆ ಎಂದಾದರೂ ಹೇಳಬಹುದಿತ್ತು. ಪಕ್ಷದ ಮೌನದ ಮೂಲಕ ಈಶ್ವರಪ್ಪನವರ ಹೇಳಿಕೆಗೆ ಸಮ್ಮತಿ ಇದೆ ಎಂದು ಹೇಳಿದಂತಾಗುವುದಿಲ್ಲವೇ?
ಬಿಜೆಪಿ ಅದರ ಪೂರ್ವಾಶ್ರಮದ ಜನಸಂಘ ಮತ್ತು ಆರ್ ಎಸ್ ಎಸ್ ರಾಷ್ಟ್ರಧ್ವಜವನ್ನು ಎಂದೂ ಒಪ್ಪಿಕೊಂಡಿರಲಿಲ್ಲ. ಭಗವಾಧ್ವಜವನ್ನೇ ರಾಷ್ಟ್ರಧ್ವಜ ಮಾಡುವುದೇ ಅವರ ಮೂಲ ಅಜೆಂಡಾ ಆಗಿದೆ.
ನಾಗಪುರದ ಆರ್ ಎಸ್ ಎಸ್ ಕಚೇರಿ ಮೇಲೆ ಭಾರತ ಗಣರಾಜ್ಯವಾದ 52 ವರ್ಷಗಳವರೆಗೆ ರಾಷ್ಟ್ರಧ್ವಜ ಆರೋಹಣ ಮಾಡಿರಲಿಲ್ಲ. ಕೊನೆಗೆ ಒಲ್ಲದ ಮನಸ್ಸಿನಿಂದ 2002 ಆಗಸ್ಟ್ 15ರಂದು ರಾಷ್ಟ್ರಧ್ವಜಾರೋಹಣ ಮಾಡಿದರೂ ಅಂತರಂಗದ ವಿರೋಧ ಇದ್ದೇ ಇದೆ. ಅದು ಈಶ್ವರಪ್ಪನಂತಹವರ ಬಾಯಿಯಿಂದ ಆಗಾಗ ಹೊರಬರುತ್ತದೆ. ದೇಶಾದ್ಯಂತ ಆರ್ ಎಸ್ ಎಸ್ ನಡೆಸುವ ಬೈಠಕ್ ಗಳಲ್ಲಿ ಅವರು ಭಗವಾದ್ವಜವನ್ನಷ್ಟೇ ಹಾರಿಸುತ್ತಿದ್ದಾರೆಯೇ ವಿನಹ ರಾಷ್ಟ್ರಧ್ವಜವನ್ನು ಹಾರಿಸುತ್ತಿರಲಿಲ್ಲ. ಈಗಲೂ ಆರ್ ಎಸ್ ಎಸ್ ಬೈಠಕ್ ಗಳಲ್ಲಿ ನನಗೆ ತಿಳಿದ ಹಾಗೆ ರಾಷ್ಟ್ರಧ್ವಜವನ್ನು ಹಾರಿಸುತ್ತಿಲ್ಲ.
ಸಂವಿಧಾನದ ಪರಿಚ್ಛೇದ-51 (ಎ) ರಲ್ಲಿ ಮೂಲಭೂತ ಕರ್ತವ್ಯಗಳನ್ನು ವಿವರಿಸಲಾಗಿದೆ. ಅದರಲ್ಲಿ ಮೊದಲನೆ ಕರ್ತವ್ಯವೇ ಸಂವಿಧಾನಕ್ಕೆ ಬದ್ಧವಾಗಿರುವುದು ಹಾಗೂ ಅದರ ಆದರ್ಶಗಳನ್ನು ಮತ್ತು ಸಂಸ್ಥೆಗಳನ್ನು, ರಾಷ್ಟ್ರ ಧ್ವಜ ಹಾಗೂ ರಾಷ್ಟ್ರ ಗೀತೆಯನ್ನು ಗೌರವಿಸುವುದಾಗಿದೆ ಎಂದು ಹೇಳಿದೆ.
ರಾಷ್ಟ್ರಧ್ವಜ, ರಾಷ್ಟ್ರ ಗೀತೆ ಮತ್ತು ಸಂವಿಧಾನ ರಾಷ್ಟ್ರದ ಪ್ರಮುಖ ಸಂಕೇತಗಳು, ರಾಜರ ಕಾಲದಲ್ಲಿ ಬೆಳ್ಗೊಡೆ ಮತ್ತು ಸಿಂಹಾಸನಗಳು ರಾಜ ಪ್ರಭುತ್ವಗಳ ಲಾಂಛನಗಳಾದರೆ, ಹೊಸ ರಾಷ್ಟ್ರದಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ಸಂವಿಧಾನ ಮೂರು ಲಾಂಛನಗಳು. ಇವುಗಳಿಗೆ ಅವಮಾನ ಎಸಗುವ ಯಾವುದೆ ವ್ಯಕ್ತಿಯು ಕೃತ್ಯ ರಾಷ್ಟ್ರದ್ರೋಹದ್ದು.
ಕಾಲಕಾಲಕ್ಕೆ ರಾಜಕೀಯದ ಲಾಭ ಪಡೆಯಲು ಇಲ್ಲವೇ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಜನರ ಗಮನ ಬೇರೆ ಕಡೆ ಸೆಳೆಯಲು ರಾಷ್ಟ್ರಧ್ವಜದಂತಹ ವಿವಾದವನ್ನು ಬಿಜೆಪಿ ಹುಟ್ಟು ಹಾಕುತ್ತದೆ.
ಸಂವಿಧಾನವನ್ನು ವಿರೋಧಿಸುವವರು, ರಾಷ್ಟ್ರಧ್ವಜವನ್ನು ಒಪ್ಪದವರು ಎಂದೂ ದೇಶಪ್ರೇಮಿಯಾಗಲು ಸಾಧ್ಯವಿಲ್ಲ. ಮೂಲಭೂತವಾಗಿ ಬಿಜೆಪಿ ನಾಯಕರು ಸಂವಿಧಾನವನ್ನಾಗಲೀ, ರಾಷ್ಟ್ರಧ್ವಜವನ್ನಾಗಲಿ ಒಪ್ಪುವುದಿಲ್ಲ. ಇವರೇನಿದ್ದರೂ ನಕಲಿ ದೇಶಪ್ರೇಮಿಗಳು, ಇವರದ್ದೇನಿದ್ದರೂ ನಕಲಿ ದೇಶಪ್ರೇಮ ಎಂದು ಕಿಡಿಕಾರಿದ್ದಾರೆ.