ಕೇಂದ್ರ ಸರ್ಕಾರ ಕಳೆದ ವಾರ ಬೆಳಗಾವಿ ಗಡಿ ವಿಚಾರವಾಗಿ ಮಧ್ಯಸ್ಥಿಕೆ ವಹಿಸಿ, ದೆಹಲಿಯಲ್ಲಿ ಸಭೆ ಮಾಡಿತ್ತು. ಅಮಿತ್ ಷಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹಾಗು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಗೃಹ ಸಚಿವ ಆರಗ ಜ್ಞಾನೇಂದ್ರ ಭಾಗಿಯಾಗಿದ್ದರು. ಸಭೆ ಬಳಿಕ ಕೇಂದ್ರ ಗೃಹ ಸಚಿವ ಬೆಳಗಾವಿ ಗಡಿ ವಿಚಾರವಾಗಿ ಯಾರೂ ನಮ್ಮದೂ ಎಂದು ಹೇಳಿಕೊಳ್ಳಬಾರದು. ಕೋರ್ಟ್ ಆದೇಶ ಬರುವ ತನಕ ಶಾಂತಿ ಕಾಪಾಡಬೇಕು ಎಂದಿದ್ದರು. ಅಂದರೆ ಕರ್ನಾಟಕದ ಭಾಗವೇ ಆಗಿರುವ ಬೆಳಗಾವಿ ಕರ್ನಾಟಕದ್ದು ಎಂದು ಹೇಳಬಾರದು ಎಂದಿದ್ದನ್ನು ಪ್ರತಿಧ್ವನಿ ಅಂದೇ ಪ್ರಶ್ನಿಸಿತ್ತು. ಯಾವುದೇ ಮಾಧ್ಯಮಗಳಲ್ಲೂ ಅಮಿತ್ ಷಾ ಹೇಳಿದ್ದು ತಪ್ಪು ಅನ್ನೋದನ್ನು ಹೇಳಲಿಲ್ಲ. ಆದರೆ ಪ್ರತಿಧ್ವನಿ ಮಾತ್ರ ನಾಡು ನುಡಿ ವಿಚಾರವಾಗಿ ದನಿ ಎತ್ತುವ ಕೆಲಸ ಮಾಡಿತ್ತು.
ಸರ್ಕಾರದ ನಿರ್ಧಾರಕ್ಕೆ ಸದನದಲ್ಲಿ ಸಿದ್ದರಾಮಯ್ಯ ಅಸಮಾಧಾನ..!
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಗಡಿ ವಿಚಾರವಾಗಿ ಸರ್ಕಾರ ತೆಗೆದುಕೊಂಡ ನಿಲುವುಗಳನ್ನು ಪ್ರಶ್ನೆ ಮಾಡಿದ್ದಾರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ವಾಸ ಮಾಡುವ ಕನ್ನಡಿಗರಿಗೆ ಅಲ್ಲಿನ ಸರ್ಕಾರ ತೊಂದರೆ ಕೊಡುತ್ತಿದೆ. ಕುಡಿಯಲು ನೀರು ಕೊಟ್ಟಿಲ್ಲ, ಅಭಿವೃದ್ಧಿಗೆ ಹಣವನ್ನೂ ಕೊಟ್ಟಿಲ್ಲ. ಪರಿಸ್ಥಿತಿ ಈಗಿರುವಾಗ ಕೇಂದ್ರ ಗೃಹ ಸಚಿವ ಅಮಿತ್ ಷಾ ಕರೆದ ಸಭೆಗೆ ಹೋಗುವ ಅವಶ್ಯಕತೆ ಇರಲಿಲ್ಲ. ವಿವಾದ ಸುಪ್ರೀಂಕೋರ್ಟ್ನಲ್ಲಿ ಇರುವಾಗ ಕೇಂದ್ರ ಸರ್ಕಾರದ ಸಭೆ ಅಗತ್ಯತೆ ಏನಿತ್ತು..? ಎಂದು ಪ್ರಶ್ನಿಸಿದ್ದಾರೆ. ಅದರಲ್ಲೂ ಮೂರು ಕಡೆ ಒಂದೇ ಪಕ್ಷ ಅಧಿಕಾರದಲ್ಲಿ ಇರುವಾಗ ಸಮಸ್ಯೆಯನ್ನು ಸರಳವಾಗಿ ಬಗೆಹರಿಸಬಹುದಿತ್ತು ಅಲ್ಲವೇ..? ಎಂದಿರುವ ಸಿದ್ದರಾಮಯ್ಯ,. ಮಹಾರಾಷ್ಟ್ರ ಕಿತಾಪತಿ ಬಗ್ಗೆ ಕೇಂದ್ರ ಸರ್ಕಾರ ಮೌನ ವಹಿಸದೆ ಬಾಯಿ ಮುಚ್ಚಿಕೊಂಡು ಇರಯ್ಯ ಅಂತಾ ಮಹಾರಾಷ್ಟ್ರ ಹೇಳಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ರು.

ಬೆಳಗಾವಿ ಗಡಿ ವಿಚಾರ ಚರ್ಚೆಯೇ ಆಗಿಲ್ಲ – ಸಿಎಂ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತಿಗೆ ಉತ್ತರ ಕೊಟ್ಟಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಹಾರಾಷ್ಟ್ರದವರು ಮಾತಾಡಿದ ಕೂಡಲೇ ನಾನು ತೀಕ್ಷ್ಣವಾಗಿ ತಿರುಗೇಟು ಕೊಟ್ಟಿದ್ದೇನೆ. ಆ ಬಳಿಕ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಾರದಂತೆ, ನಿರ್ಬಂಧ ಕೂಡ ಹಾಕಿದ್ದೇವೆ. ಕಾನೂನು ಸುವ್ಯಸ್ಥೆ ಕಾಪಾಡಿದ್ದೇವೆ. ಕೇಂದ್ರ ಗೃಹ ಸಚಿವರು ಸಭೆ ಕರೆದಿದ್ದು, ಬೆಳಗಾವಿ ಗಡಿ ವಿಚಾರ ಚರ್ಚೆ ಮಾಡಲು ಅಲ್ಲಲೇ ಅಲ್ಲ. ಕೇವಲ ಲಾ ಅಂಡ್ ಆರ್ಡರ್ ನಿಯಂತ್ರಣ ಮಾಡುವ ಬಗ್ಗೆ ಚರ್ಚೆ ಮಾಡಲು ಹೋಮ್ ಮಿನಿಸ್ಟರ್ ನಮ್ಮನ್ನು ಕರೆದಿದ್ದರು, ನಾವು ಹೋಗಿದ್ದೆವು ಎಂದಿದ್ದಾರೆ. ಇನ್ನು ಸುಪ್ರೀಂಕೋರ್ಟ್ನಲ್ಲಿ ಕೇಸ್ ಇರುವಾಗ, ಎಲ್ಲರೂ ಶಾಂತಿಯನ್ನು ಕಾಪಾಡಿ, ಶಾಂತಿಯುತವಾಗಿ ನಡೆದಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಖಂಡನಾ ನಿರ್ಣಯ ಮಂಡಿಸಲು ನಿರ್ಧಾರ..!
ಕಾಂಗ್ರೆಸ್, ಜೆಡಿಎಸ್ ಸದಸ್ಯರೂ ಕೂಡ ಬೆಳಗಾವಿ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ಬೆಳಗಾವಿ ನಮ್ಮದು ಎಂದರು. ಈ ವಿಚಾರವಾಗಿ ಸರ್ಕಾರಕ್ಕೆ ಬೆಂಬ ಲವಾಗಿ ನಿಲ್ತೇವೆ. ಕಾನೂನು ಹೋರಾಟಕ್ಕೂ ಸೂಕ್ತ ವಕೀಲರ ನೇಮಕ ಮಾಡುವಂತೆ ಆಗ್ರಹ ಮಾಡಿದ್ರು. ಆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸದನದಲ್ಲಿ ಒಂದು ನಿರ್ಣಯ ಪಾಸ್ ಮಾಡಲು ತೀರ್ಮಾನಿಸಿದ್ರು. ಮಹಾರಾಷ್ಟ್ರ ಸರ್ಕಾರದ ನಡೆಯನ್ನು ವಿರೋಧಿಸಿ ಖಂಡನಾ ನಿರ್ಣಯ ಅಂಗೀಕಾರ ಮಂಡಿಸಿ ಅಂಗೀಕಾರ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ರು. ಈ ಮಾತಿಗೆ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಸಮ್ಮತಿ ಸೂಚಿಸಿದ್ರು. ಮಹಾರಾಷ್ಟ್ರ ಸರ್ಕಾರದ ವಿರುದ್ಧ ರಾಜ್ಯ ನಾಯಕರ ಒಗ್ಗಟ್ಟು ಪ್ರದರ್ಶನ ಮಾಡಿದ್ದು ಸೂಕ್ತ ಎನಿಸಿತು. ಈ ಕೆಲವನ್ನು ನಿಮ್ಮ ಪ್ರತಿಧ್ವನಿ ಅಂದೇ ಖಂಡಿಸಿತ್ತು ಅನ್ನೋದು ಕೂಡ ವಿಶೇಷ.


