ಹಿಂದುಳಿದ ಸಮುದಾಯಗಳ ರಾಜಕೀಯ ಮೀಸಲಾತಿ ಬಗೆಗಿನ ರಾಜ್ಯ ಬಿಜೆಪಿ ಸರ್ಕಾರದ ನಿರ್ಲಕ್ಷದಿಂದಾಗಿ ಆ ಸಮುದಾಯಕ್ಕೆ ಅನ್ಯಾಯವಾಗಿರುವುದು ಮಾತ್ರವಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ನಿಗದಿತ ಕಾಲಕ್ಕೆ ನಡೆಯದಂತಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳ ರಾಜಕೀಯ ಮೀಸಲಾತಿಯನ್ನು ಅಂತಿಮಗೊಳಿಸಲು ರಾಜ್ಯ ಸರ್ಕಾರ ವಿಳಂಬ ನೀತಿಯನ್ನು ಅನುಸರಿಸಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಉದಾರವಾಗಿ ಮತ್ತೆ ಮಾರ್ಚ್ 31ರ ಗಡುವು ನೀಡಿದೆ. ರಾಜ್ಯ ಸರ್ಕಾರದ ನಡೆನುಡಿಗಳನ್ನು ಗಮನಿಸುತ್ತಾ ಬಂದರೆ ಒಬಿಸಿಗಳಿಗೆ ಮೀಸಲಾತಿ ಕಲ್ಪಿಸುವ ಉದ್ದೇಶವೇ ಸರ್ಕಾರಕ್ಕೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಮೀಸಲಾತಿ ನೀಡುವಾಗ ಮೂರು ಹಂತದ ಪರಿಶೀಲನೆ ನಡೆಸಬೇಕು ಎಂದು ಕಳೆದ ಮೇ ತಿಂಗಳಲ್ಲಿಯೇ ಸುಪ್ರೀಂ ಕೋರ್ಟ್ ನೀಡಿದ್ದ ಸ್ಪಷ್ಟವಾದ ಆದೇಶವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಸ್ವೀಕರಿಸದೆ ಇದ್ದದ್ದೇ ಈಗಿನ ಬಿಕ್ಕಟ್ಟಿಗೆ ಕಾರಣ. ವಿಶ್ವಾಸಾರ್ಹ ಅಂಕಿ ಅಂಶಗಳಿಂದ ಕೂಡಿದ ಮಾಹಿತಿಯನ್ನು ಆಧರಿಸಿ ಮೀಸಲಾತಿ ನೀತಿಯನ್ನು ರೂಪಿಸಬೇಕೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದ್ದರೂ ರಾಜ್ಯ ಸರ್ಕಾರ ಮಾತ್ರ ಅವಸರದಲ್ಲಿ ನಿವೃತ್ತ ನ್ಯಾ ಯಮೂರ್ತಿ ಎಂ.ಕೆ. ಭಕ್ತವತ್ಸಲ ಸಮಿತಿ ನೇಮಿಸಿ ಅಷ್ಟೇ ಅವಸರದಲ್ಲಿ ಶಿಫಾರಸುಗಳನ್ನು ಪಡೆದು ಮೀಸಲಾತಿಯನ್ನು ರೂಪಿಸಿದೆ.
ನ್ಯಾ,ಭಕ್ತವತ್ಸಲ ಸಮಿತಿ ಶಿಫಾರಸು ಆಧರಿತ ಮೀಸಲಾತಿಯನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿದ ನಂತರವೂ ತಪ್ಪನ್ನು ಸರಿಪಡಿಸಿಕೊಳ್ಳದೆ ಇರುವ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ರಾಜ್ಯ ಸರ್ಕಾರದ ವೈಫಲ್ಯವನ್ನು ತರಾಟೆಗೆ ತೆಗೆದುಕೊಂಡಿದೆ. ನಿಖರವಾದ ಅಂಕಿ-ಅಂಶಗಳು ಮತ್ತು ವಿಶ್ವಾಸಾರ್ಹ ಮಾಹಿತಿಯೊಡನೆ ವೈಜ್ಞಾನಿಕವಾಗಿ ನಡೆಸಿದ ಸಮೀಕ್ಷೆಯ ಆಧಾರದಲ್ಲಿ ಮೀಸಲಾತಿ ನೀತಿಯನ್ನು ರೂಪಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳುತ್ತಲೇ ಬಂದಿದೆ.
ಕರ್ನಾಟಕದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಅತ್ಯಂತ ವೈಜ್ಞಾನಿಕವಾಗಿ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಸಿದ್ದವಾಗಿದೆ. ಇದರ ಆಧಾರದಲ್ಲಿಯೇ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿಯನ್ನು ರೂಪಿಸಿದರೆ ಸುಪ್ರೀಂ ಕೋರ್ಟ್ ಕೂಡಾ ಒಪ್ಪುವ ಸಾಧ್ಯತೆ ಇದೆ. ಕಳೆದ ಮೇ ತಿಂಗಳಿನಲ್ಲಿಯೇ ನಾನು ಈ ಸಲಹೆ ನೀಡಿದ್ದರೂ ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. ಬಹಳ ಮುಖ್ಯವಾಗಿ ಸೋಲಿನ ಭಯದಲ್ಲಿರುವ ರಾಜ್ಯ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸುವ ಧೈರ್ಯವೂ ಇಲ್ಲ, ಹಿಂದುಳಿದ ಜಾತಿಗಳಿಗೆ ಮೀಸಲಾತಿಯನ್ನು ಕೊಡುವ ಮನಸ್ಸು ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಚಾಟಿ ಬೀಸಿದ್ದಾರೆ.
ಸುಪ್ರೀಂ ಕೋರ್ಟ್ ನಿರೀಕ್ಷಿಸಿದ ರೀತಿಯಲ್ಲಿ ಮುಂದಿನ ಮೂರು ತಿಂಗಳೊಳಗೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ವಿಶ್ವಾಸಾರ್ಹ ಅಂಕಿ ಅಂಶಗಳನ್ನು ಕಲೆ ಹಾಕಿ ಮೀಸಲಾತಿ ನೀತಿಯನ್ನು ರೂಪಿಸುವುದು ಅಸಾಧ್ಯವಾದ ಕೆಲಸ. ಈ ಹಿನ್ನೆಲೆಯಲ್ಲಿ ಕಾಂತರಾಜ್ ಆಯೋಗ ನಡೆಸಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡು ಅದರ ಆಧಾರದಲ್ಲಿಯೇ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ನೀತಿಯನ್ನು ರೂಪಿಸಿ ಸುಪ್ರೀಂ ಕೋರ್ಟ್ ಗೆ ಸಲ್ಲಿಸಬೇಕೆಂದು ರಾಜ್ಯ ಸರ್ಕಾರವನ್ನ ಒತ್ತಾಯಿಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್ ನಲ್ಲಿ ನೀಡಿರುವ ಆದೇಶದಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಲು ಆಯೋಗ ರಚಿಸಲು ಹೇಳಿರುವ ಸುಪ್ರೀಮ್ ಕೋರ್ಟ್ ರಾಜ್ಯ ಸರ್ಕಾರಗಳು ಈಗಾಗಲೇ ನಡೆಸಿರುವ ಸಮೀಕ್ಷೆಯ ಅಂಕಿ-ಅಂಶ ಮತ್ತು ಮಾಹಿತಿಯನ್ನು ಹೊಸ ಆಯೋಗಕ್ಕೆ ನೀಡಬಹುದು. ಆ ಮಾಹಿತಿಯನ್ನು ಆಧರಿಸಿ ಎರಡು ವಾರಗಳ ಅವಧಿಯೊಳಗೆ ಆಯೋಗ ಹಿಂದುಳಿದ ಜಾತಿಗಳ ಮೀಸಲಾತಿ ಬಗ್ಗೆ ಮಧ್ಯಂತರ ವರದಿಯನ್ನು ನೀಡಬಹುದು ಎಂದು ಕೂಡಾ ಹೇಳಿದ್ದನ್ನು ರಾಜ್ಯ ಸರ್ಕಾರಕ್ಕೆ ತಮ್ಮ ಪತ್ರಿಕಾ ಹೇಳಿಕೆ ಮೂಲಕ ನೆನಪಿಸಿದ್ದಾರೆ.