ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ವರ್ಷ ತುಂಬಿದ್ದಕ್ಕಾಗಿ ಜನಸ್ಪಂದನ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕೆ “ಜನಸ್ಪಂದನ” ಅಲ್ಲ ‘ಜನ ಮರ್ದನ” ಎಂದು ಹೆಸರಿಡಬೇಕಾಗಿತ್ತು. ಕಳೆದ ಮೂರು ವರ್ಷಗಳ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಮತ್ತು ಸುಳ್ಳು ಹೇಳಿಕೆಗಳಿಂದಾಗಿ ಜನ ನಲುಗಿಹೋಗಿದ್ದಾರೆ.
ಸ್ಪಂದನ ಮಾಡಲು ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ? ವಿರೋಧ ಪಕ್ಷಗಳು ಇವರನ್ನು ಪ್ರಶ್ನೆ ಮಾಡಿದರೆ ಸಿಬಿಐ, ಇಡಿ, ಐಟಿ ದಾಳಿ ನಡೆಸಿ ಬೆದರಿಸುತ್ತಾರೆ. ನಾಗರಿಕರು ಪ್ರಶ್ನೆ ಮಾಡಿದರೆ ಸುಳ್ಳು ಕೇಸ್ ಗಳನ್ನು ಹಾಕಿ ಜೈಲಿಗೆ ಹಾಕುತ್ತಾರೆ. ಜನ ಸ್ಪಂಧಿಸುವುದಾದರೂ ಹೇಗೆ?
ಜನತೆಗೆ ಮುಕ್ತವಾಗಿ ಮಾತನಾಡಲು ಅವಕಾಶ ಕೊಟ್ಟರೆ ಜನಾಕ್ರೋಶದಲ್ಲಿ ಇವರ ಜನಸ್ಪಂದನ ಕೊಚ್ಚಿಹೋಗಬಹುದು. ಬಿಜೆಪಿಯ ಮೂರು ವರ್ಷಗಳ ಸಾಧನೆ ಎಂದರೆ ಸುಳ್ಳು, ಭ್ರಷ್ಟಾಚಾರ ಮತ್ತು ದುರಾಡಳಿತ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ ಎಂದು ಅವರ ಪಕ್ಷದ ಸಚಿವರು ಮತ್ತು ಶಾಸಕರು ಹೇಳುತ್ತಿದ್ದಾರೆ. ಇನ್ನೊಂದೆಡೆ ಗುತ್ತಿಗೆದಾರರ ಸಂಘ, ಶಿಕ್ಷಣ ಸಂಸ್ಥೆಗಳ ಒಕ್ಕೂಟ ನೇರವಾಗಿ ಪ್ರಧಾನಿ ಮೋದಿಗೆ ಪತ್ರ ಬರೆಯುತ್ತಿಸಡ. ರಾಜ್ಯ ಹೈಕೋರ್ಟ್ ಒಂದಲ್ಲ ಎರಡಲ್ಲ ಹಲವು ಬಾರಿ ನೇರವಾಗಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳಕ್ಕೆ ಭ್ರಷ್ಟಾಚಾರವೇ ದಂಧೆಯಾಗಿದೆ, ಸ್ವಯಂ ಸಿಸಿಬಿಯೇ ಅತೀ ದೊಡ್ಡ ಭ್ರಷ್ಟರ ಕೂಪವಾಗಿದೆ, ಅದರ ಮುಖ್ಯಸ್ಥ ಎಡಿಜಿಪಿಯೇ ಕಳಂಕಿತ ಅಧಿಕಾರಿ. ಎಸಿಬಿ ಕಚೇರಿಯೇ ಕಲೆಕ್ಷನ್ ಸೆಂಟರ್ ಆಗಿವೆ ಎಂದು ಹೇಳಿದ್ದು ನಾವಲ್ಲ ರಾಜ್ಯ ಹೈಕೋರ್ಟ್ ನ್ಯಾಯಾಧೀಶರು.
ಹೈಕಮಾಂಡ್ ಗೆ 2000 ಕೋಟಿ ರೂಪಾಯಿ ಕೊಟ್ಟರೆ ಮುಖ್ಯಮಂತ್ರಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಮಗ ಲಂಚ ಹೊಡೆಯುತ್ತಿದ್ದಾರೆ ಎಂದು ಹೇಳುತ್ತಿರುವುದು ಅವರದ್ದೇ ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಎಂದು ಬಿಜೆಪಿಗೆ ನೆನಪಿಸಿದದಾರೆ.
ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಅವರ ಪಕ್ಷದ ಶಾಸಕರು, ಸಚಿವರೇ ಸಾಕ್ಷಿ ನೀಡುತ್ತಿದ್ದಾರೆ. ಇವರನ್ನು ಸಾಲಾಗಿ ವೇದಿಕೆಯಲ್ಲಿ ನಿಲ್ಲಿಸಿ ಜನಸ್ಪಂದನ ಮಾಡಿದರೆ ಕಾರ್ಯಕ್ರಮ ಯಶಸ್ವಿಯಾಗಬಹುದು ಎಂದಿದ್ದಾರೆ.