ಗಂಡ ಹೆಂಡತಿ ಜಗಳ ಸುದ್ದಿ ಮಾಡ್ತೀರಲ್ಲಾ ಅದರಿಂದ ಸಮಾಜಕ್ಕೆ ಏನು ಪ್ರಯೋಜನ? ಇಂಥದ್ದನ್ನೆಲ್ಲಾ ಸುದ್ದಿ ಮಾಡಿದರೆ ಮಾಧ್ಯಮಗಳ ಬಗ್ಗೆ ಜನರು ಆಸಕ್ತಿ ಕಳೆದುಕೊಳ್ಳುತ್ತಾರೆ ಎಂದು ಪತ್ರಕರ್ತರಿಗೆ ಸಿದ್ದರಾಮಯ್ಯ ತಿಳಿ ಹೇಳಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಪತ್ರಿಕಾ ಭವನ ಮತ್ತು ತರಬೇತಿ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದನ್ನೂ ಸುದ್ದಿ ಮಾಡ್ತೀರಿ, ಚರ್ಚೆ ಮಾಡ್ತೀರಿ. ಕಾಗೆ ಕುಳಿತರೆ ನಿಮಗೇನು ನಷ್ಟ? ಸಮಾಜಕ್ಕೇನು ನಷ್ಟ. ಓದುಗರು ಮಾಧ್ಯಮಗಳ ಬಗ್ಗೆ ಕುತೂಹಲ, ಆಸಕ್ತಿ ಕಳೆದುಕೊಂಡರೆ ಅದಕ್ಕೆ ವೃತ್ತಿಪರತೆ ಇಲ್ಲವಾಗಿದ್ದೇ ಕಾರಣ ಎಂದು ಹೇಳಿದ್ದಾರೆ.
ಸಂವಿಧಾನ ವಿರೋಧಿಗಳನ್ನೂ ಪ್ರಶ್ನಿಸದೇ, ಗೌರವದಿಂದ ನಡೆಸಿಕೊಂಡರೆ ನಿಮ್ಮನ್ನು ಸಮಾಜದ ನಾಲ್ಕನೇ ಅಂಗ ಅಂತ ಕರೆಯೋಕೆ ಆಗುತ್ತ? ವಸ್ತುನಿಷ್ಠ ಸುದ್ದಿ-ಸತ್ಯದ ವರದಿ ಮಾತ್ರ ಸಮಾಜಮುಖಿಯಾಗಿರುತ್ತದೆ ಎಂದು ಹೇಳಿದರು.

ನಾನು ಶಂಕುಸ್ಥಾಪನೆ ಮಾಡಿದ ಪತ್ರಿಕಾ ಭವನ ಮತ್ತು ತರಬೇತಿ ಕೇಂದ್ವವನ್ನು ನಾನೇ ಉದ್ಘಾಟಿಸುತ್ತೇನೆ, ಅದಕ್ಕೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.