ಕರ್ನಾಟಕದ ಸಿಎಂ ಸಿದ್ದರಾಮಯ್ಯ ಕೆಲವೊಮ್ಮೆ ಒರಟು ಒರಟಾಗಿ ಮಾತನಾಡ್ತಾರೆ ಅನ್ನೋದು ಕೆಲವರ ಆರೋಪ. ಆದರೆ ಸಿದ್ದರಾಮಯ್ಯ ಹೇಳುವ ಮಾತುಗಳಲ್ಲಿ ಸತ್ಯಾಂಶ ಹೆಚ್ಚಾಗಿಯೇ ಇರುತ್ತೆ ಅನ್ನೋದನ್ನು ಯಾರೇ ಆದರೂ ಒಪ್ಪಿಕೊಳ್ಳಲೇಬೇಕು. ಯಾಕಂದ್ರೆ ಎದುರಿಗೆ ಯಾರು ಇದ್ದಾರೆ ಅನ್ನೋದನ್ನು ನೋಡದೆ, ಏನನ್ನು ಹೇಳಬೇಕೋ ಅದನ್ನು ನೇರವಾಗಿ ಹೇಳುವುದು ಸಿದ್ದರಾಮಯ್ಯ ಜಾಯಮಾನ. ಅದೇ ರೀತಿ ಇತ್ತೀಚಿಗೆ ಸಿದ್ದರಾಮಯ್ಯ ಮಾಧ್ಯಮಗಳ ಎದುರಲ್ಲಿ ನೇರವಾಗಿ ಒಂದು ಆರೋಪ ಮಾಡಿದ್ದರು. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಗೆ ನಮ್ಮ ಸಚಿವರು ಯತ್ನಿಸಿದರೂ ಅವಕಾಶ ಸಿಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಸಾಕಷ್ಟು ಭಾರೀ ಮನವಿ ಮಾಡಿದರೂ ಭೇಟಿ ಆಗಲು ಸಮಯ ಕೊಟ್ಟಿಲ್ಲ ಎಂದು ಜನತೆ ಎದುರಲ್ಲೇ ಬಹಿರಂಗ ಮಾಡಿದ್ದರು. ಇದೀಗ ಭೇಟಿಗೆ ಅವಕಾಶ ಸಿಕ್ಕಿದೆ.
ಬೆಳಗ್ಗೆ 11 ಗಂಟೆಗೆ ಸಿದ್ದರಾಮಯ್ಯಗೆ ಮೋದಿ ಟೈಂ..
ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಗೆ ಸಮಯ ಕೊಡ್ತಿಲ್ಲ ಅನ್ನೋ ಆರೋಪವನ್ನು ಸುಳ್ಳು ಮಾಡಲು ಪ್ರಧಾನಿ ಮೋದಿ ನಿರ್ಧಾರ ಮಾಡಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯಗೆ ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಸಮಯಾವಕಾಶ ನೀಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ – ಸಿಎಂ ಸಿದ್ದರಾಮಯ್ಯ ಭೇಟಿ ನಡೆಯಲಿದೆ. ರಾಜ್ಯದಲ್ಲಿ ಬರದಿಂದ ಆಗಿರುವ ಅನಾಹುತ ಹಾಗು ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿ ತಯಾರು ಮಾಡಿರುವ ರಿಪೋರ್ಟ್ ಬಗ್ಗೆ ಚರ್ಚೆ ನಡೆಸಲಿದ್ದು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿರುವ ಬಾಕಿ ಹಣದ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲಿದ್ದಾರೆ ಎನ್ನಲಾಗಿದೆ.
ಅನ್ನ ಭಾಗ್ಯಕ್ಕೆ ಅಡ್ಡಿ ಮಾಡಿದ್ದರ ಬಗ್ಗೆ ಚರ್ಚೆ ಸಾಧ್ಯತೆ!
ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ್ದ ಅನ್ನಭಾಗ್ಯ ಅಕ್ಕಿಗೆ ಕೇಂದ್ರ ಸರ್ಕಾರ ಅಕ್ಕಿ ಕೊಡಲು ಒಪ್ಪಿಕೊಂಡು ಆ ಬಳಿಕ ಅಕ್ಕಿ ಕೊಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದು ದಾಖಲೆ ಸಮೇತ ಅನಾವರಣ ಆಗಿತ್ತು. ಒಂದೇ ದಿನದಲ್ಲಿ ಕೇಂದ್ರದ ನಿರ್ಧಾರ ಬದಲಾಗಿತ್ತು. ಈ ಬಗ್ಎಯೂ ಮೋದಿಗೆ ಮಾಹಿತಿ ನೀಡಲಿದ್ದು, ಮುಂದಿನ ದಿನಗಳಲ್ಲಾದರೂ ಕೇಂದ್ರ ಸರ್ಕಾರದ ದರದಲ್ಲೇ ಅಕ್ಕಿ ಕೊಡುವಂತೆ ಮತ್ತೊಮ್ಮೆ ಮನವರಿಕೆ ಮಾಡಲಿದ್ದಾರೆ. ಒಂದು ವೇಳೆ ನರೇಂದ್ರ ಮೋದಿ ಅವರನ್ನೇ ಅಕ್ಕಿ ಕೇಳಿದರೂ ಅಕ್ಕಿ ಕೊಡದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಒಂದು ಅಸ್ತ್ರ ಸಿಕ್ಕಂತೂ ಆಗಲಿದೆ. ಬಡವರ ಬಗ್ಗೆ ಕಾಳಜಿ ಇಲ್ಲದೆ ಮೋದಿ ಚುನಾವಣೆಯಲ್ಲಿ ಪ್ರಚಾರಕ್ಕೆ ಬರ್ತಾರೆ, ಬಡವರ ಬಗ್ಗೆ ಮೊಸಳೆ ಕಣ್ಣೀರು ಸುರಿಸ್ತಾರೆ ಎಂದು ಅಬ್ಬರಿಸಲು ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಂತೆ ಆಗಲಿದೆ ಎನ್ನಬಹುದು.
ಮುಖ್ಯಮಂತ್ರಿ ಆದ ಬಳಿಕ 2ನೇ ಸಲ ಪ್ರಧಾನಿ ಭೇಟಿ
3 ದಿನ ದೆಹಲಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನ ಮಂತ್ರಿ ಮೋದಿ ಜೊತೆಗೆ ಚರ್ಚೆ ನಡೆಸಲಿದ್ದು, ಬರ ಪರಿಹಾರ, ಜಿಎಸ್ಟಿ ಬಾಕಿಗೂ ಮನವಿ ಮಾಡಲಿದ್ದಾರೆ. ಈ ಹಿಂದೆ ಆಗಸ್ಟ್ 3ರಂದು ಪ್ರಧಾನಿ ಭೇಟಿಯಾಗಿದ್ದ ಸಿದ್ದರಾಮಯ್ಯ ದಸರಾ ಏರೋಶೋಗೆ ಮನವಿ ಮಾಡಿದ್ದರು. ಆ ಬಳಿಕ ಭೇಟಿ ಆಗಲು ಸಾಧ್ಯ ಆಗಿರಲಿಲ್ಲ. ಅಕ್ಟೋಬರ್ 20 ನಮ್ಮೋ ಮೆಟ್ರೋ ವಿಸ್ತೃತ ಮಾರ್ಗ ಉದ್ಘಾಟನೆ ವೇಳೆಯಲ್ಲಿ ವರ್ಚುವಲ್ ಸಭೆಯಲ್ಲಿ ಭಾಗಿಯಾಗಿದ್ದರು. ಇನ್ನೊಮ್ಮೆ ಬೆಂಗಳೂರಿಗೆ ಬಂದಿದ್ದ ಮೋದಿ ಸಿಎಂ ಹಾಗು ಡಿಸಿಎಂ ಭೇಟಿಗೆ ಬರುವುದು ಬೇಡ ಎಂದಿದ್ದರು. ಆ ಬಳಿಕ ಭೇಟಿ ಸಾಧ್ಯವೇ ಆಗಿರಲಿಲ್ಲ. ಯಾವಾಗ ಮೋದಿಯನ್ನು ಭೇಟಿ ಮಾಡಲು ಸಮಯ ಸಿಗಲಿಲ್ಲವೋ ನೇರವಾಗಿ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು.
ಬಿಜೆಪಿ ನಾಯಕರಿಗೂ ಸಿದ್ದರಾಮಯ್ಯಗೆ ಇಷ್ಟೇ ವ್ಯತ್ಯಾಸ..
ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಚುನಾವಣೆಯಲ್ಲಿ ಸೋತ ಬಳಿಕ ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕ ಹಾಗು ರಾಜ್ಯಾಧ್ಯಕ್ಷ ಆಯ್ಕೆ ವಿಚಾರವಾಗಿ ಚರ್ಚೆ ಮಾಡಲು ದೆಹಲಿಗೆ ತೆರಳಿದ್ದರು. ಆದರೆ ಮೂರು ಮೂರು ದಿನಗಳ ಕಾಲ ಅಲ್ಲೇ ಉಳಿದರೂ ಪ್ರಧಾನಿ ನರೇಂದ್ರ ಮೋದಿ ಭೇಟಿ ಅಲ್ಲ, ಬೇರೆ ನಾಯಕರ ಭೇಟಿಯೂ ಆಗಿರಲಿಲ್ಲ. ಸಂಸದರಂತು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ದೂರದ ಮಾತು. ಆದರೆ ಭೇಟಿಗೆ ಸಮಯ ಸಿಗಲಿಲ್ಲ ಎನ್ನುವುದನ್ನೇ ಬಹಿರಂಗವಾಗಿ ಹೇಳುವ ಮೂಲಕ ವ್ಯಕ್ತಿ ಎಷ್ಟೇ ದೊಡ್ಡವರಾದರೂ ರಾಜ್ಯದ ಸಮಸ್ಯೆ ಕೇಳಲು ಹಿಂಜರಿದಾಗ ಚಾಟಿ ಬೀಸಿ ಭೇಟಿಗೆ ಹೋಗ್ತಿರೋದು ಮೆಚ್ಚಬೇಕಾದ ಸಂಗತಿ ಅಲ್ಲವೇ..?
ಕೃಷ್ಣಮಣಿ