
ಕೇಂದ್ರ ಸರ್ಕಾರದಿಂದ ನಬಾರ್ಡ್ ಹಣ ಕಡಿತ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಆರೋಪ ಮಾಡಿದ್ದಾರೆ. ರಾಜ್ಯಕ್ಕೆ ಬರಬೇಕಿದ್ದ ಹಣವನ್ನು ಅನಗತ್ಯವಾಗಿ ಶೇಕಡ 58ರಷ್ಟು ಕಡಿತ ಮಾಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಹಣಕಾಸು ಸಚಿವೆ ಆಗಿರುವ ನಿರ್ಮಲ ಸೀತಾರಾಮನ್ ಕಡಿತ ಮಾಡಿದ್ದಾರೆ. ನಮಗೆ ನಬಾರ್ಡ್ ಹಣ ಕೊಡಲಿಲ್ಲ ಅಂದ್ರೆ ನಾವು ಬ್ಯಾಂಕ್‌ಗಳಿಗೆ ಹೋಗಬೇಕಾಗುತ್ತದೆ. ಆದರೆ ಬ್ಯಾಂಕ್‌ಗಳಲ್ಲಿ ಬಡ್ಡಿ ಜಾಸ್ತಿ ಆಗುತ್ತದೆ. 9,012 ಕೋಟಿ ಕೊಡಿ ಎಂದು ಕೇಳಿದ್ದೆವು. ಆದರೆ ಕೇಂದ್ರ ಸರ್ಕಾರ ಜವಾಬ್ದಾರಿ ಮರೆತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಅನರ್ಹರ ರೇಷನ್ ಕಾರ್ಡ್ ರದ್ದು ಟೀಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ದೇಶದಲ್ಲಿ ಫುಡ್ ಸೆಕ್ಯೂರಿಟಿ ಆ್ಯಕ್ಟ್ ಮಾಡಿದ್ದು ನಾವು. ಫುಡ್ ಸೆಕ್ಯೂರಿಟಿ ಆ್ಯಕ್ಟ್ ಜಾರಿಗೆ ಬಿಜೆಪಿಯ ಮುರಳಿ ಮನೋಹರ ಜೋಷಿ ವಿರೋಧಿಸಿದ್ರು. ಬಡವರಿಗೆ ಅಕ್ಕಿ ಕೊಡಬೇಕು ಅಂತ ನಾವು ಮಾಡಿದ ಯೋಜನೆ ಆಹಾರ ಭದ್ರತೆ. ನಾನು ಸಿಎಂ ಆದಾಗ 7 ಕೆಜಿ ಅಕ್ಕಿ ಕೊಡ್ತಿದ್ದೆ. ಆದರೆ ಅದನ್ನು 5 ಕೆಜಿ ಮಾಡಿದ್ದು ಯಾರು..? ಎನ್ನುವ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ವಿಜಯೇಂದ್ರ ರೇಷನ್ ಕಾರ್ಡ್ ಬಗ್ಗೆ ಹೇಳ್ತಾನೆ. ಅವನಿಗೆ ಏನು ರೈಟ್ಸ್ ಇದೆ. ಅವರಪ್ಪ ಯಡಿಯೂರಪ್ಪ ಅಕ್ಕಿ ಕಡಿತ ಮಾಡಿದ್ರು. ಈಗ ವಿಜಯೇಂದ್ರ ನನ್ನ ಪ್ರಶ್ನೆ ಮಾಡ್ತಾನೆ ಎಂದು ವ್ಯಂಗ್ಯವಾಡಿದ್ದಾರೆ.
