ಧರಣೀಶ್ ಬೂಕನಕೆರೆ
ರಾಜಕೀಯ ವಿಶ್ಲೇಷಕರು
ಸಿದ್ದರಾಮಯ್ಯ 2013ರ ಮೇ 13ರಂದು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ಅನ್ನಭಾಗ್ಯ ಯೋಜನೆ ಘೋಷಿಸಿದರು. ಹೈಕಮಾಂಡ್ ನಾಯಕರಿಂದ ಹಿಡಿದು ಅಧಿಕಾರಿಗಳವರೆಗೆ ಯಾರ ಜೊತೆಯೂ ಚರ್ಚಿಸದೆ ಘೋಷಿಸಿದ ಯೋಜನೆ ಅದಾಗಿತ್ತು. ಇಂಥ ನಡೆ ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ ಎನ್ನುವಂತಿತ್ತು. ಅದರಿಂದಾಗಿ ಅವರು ಅನ್ನರಾಮಯ್ಯ ಆದರು. ಆಮೇಲೆ ಯಾವ್ಯಾವುದೋ ರಾಮಯ್ಯಗಳಾದರೂ ಅವಕ್ಕೆಲ್ಲಾ ಮುನ್ನುಡಿ ಬರೆದದ್ದು ಅನ್ನರಾಮಯ್ಯ.
ಇದಾದ ಕೆಲವೇ ದಿನಗಳಲ್ಲಿ ಜಾತಿವಾರು ಸಾಮಾಜಿಕ- ಆರ್ಥಿಕ ಸಮೀಕ್ಷೆ ಮಾಡುವ ನಿರ್ಧಾರ ಪ್ರಕಟಿಸಿದರು. ಇದು ಕೂಡ ಯಾರ ಜೊತೆಯೂ ಚರ್ಚಿಸದೆ ಘೋಷಿಸಿದ ನಿರ್ಧಾರವಾಗಿತ್ತು. ಸಿದ್ದರಾಮಯ್ಯ ಇಂಥ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಂತೆ ಅಹಿಂದ ವರ್ಗಗಳಲ್ಲಿ ಮುಖ್ಯವಾಗಿ ಹಿಂದುಳಿದವರಲ್ಲಿ ದಶಕಗಳಿಂದ ಆಗಿರುವ ದ್ರೋಹಕ್ಕೆ ಪರಿಹಾರ ಸಿಗಬಹುದೆಂಬ ಕನಸೊಂದು ಚಿಗುರಿತು. ಈ ವರ್ಗಗಳು ಜಾತಿವಾರು ಸಾಮಾಜಿಕ- ಆರ್ಥಿಕ ಸಮೀಕ್ಷಾ ವರದಿ ಬಹಿರಂಗವಾಗಲೆಂದು-ಜಾರಿಯಾಗಲೆಂದು ಕಾಯುತ್ತಾ ಕುಳಿತಿವೆ.
2015ರಲ್ಲಿ ಆರಂಭವಾದ ಸಮೀಕ್ಷೆ 2019ರಲ್ಲಿ ಮುಗಿಯಿತು. ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಮೀಕ್ಷೆ ಮಾಡಿದ್ದ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವರದಿ ಸಲ್ಲಿಸಿತು. ಜೊತೆಗೆ ಸಮೀಕ್ಷೆಗೆ ಅಂಕಿ-ಅಂಶಗಳನ್ನು ಸಂಗ್ರಹಿಸಿದ ವಿಧಾನವನ್ನು ತಜ್ಞರ ಸಮಿತಿ ಮತ್ತು ಐಐಎಂ ಸಂಸ್ಥೆಗಳು ಅನುಮೋದಿಸಿವೆ ಎಂಬ ಸಂಗತಿಯನ್ನು ತಿಳಿಸಿತು. ಆದರೆ ಅವರಾಗಲಿ, ಅನಂತರ ಬಂದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರಾಗಲಿ ವರದಿಯನ್ನು ಕಣ್ಣೆತ್ತಿಯೂ ನೋಡಲಿಲ್ಲ. ಇವರ ಬಗ್ಗೆ ಯಾರಿಗೂ ಅಂತಹ ಆಶಾಭಾವನೆ ಇರಲಿಲ್ಲ. ಆದರೆ ಸಿದ್ದರಾಮಯ್ಯ ಅವರ ಮೇಲೆ ಅಪಾರವಾದ ನಿರೀಕ್ಷೆಗಳಿವೆ.
ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬಂದ ಮೇಲೆ ಜನರಿಟ್ಟಿರುವ ನಿರೀಕ್ಷೆ ದುಪ್ಪಟ್ಟಾಗಿದೆ. ಪರಿಸ್ಥಿತಿಯೂ ಈಗ ಜಾತಿ ಜನಗಣತಿ ವರದಿ ಜಾರಿ ಮಾಡಲು ಪೂರಕವಾಗಿದೆ. ಜಾತಿ ಜನಗಣತಿ ವರದಿ ಜಾರಿಗೆ ವಿಪಕ್ಷಗಳು ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದೊಳಗೂ ಅಪಸ್ವರಗಳಿವೆ ಎಂಬುದು ನಿಜವಾದರೂ ಅದಕ್ಕೂ ಮೀರಿ ವರದಿ ಜಾರಿಗೆ ಕಾಲ ಪಕ್ವವಾಗಿದೆ.
ಒಂದೊಂದೇ ಅಂಶಗಳನ್ನು ನೋಡುವುದಾದರೆ… ರಾಜ್ಯ ಕಾಂಗ್ರೆಸ್ ತನ್ನ ಪ್ರಣಾಳಿಕೆಯ ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಶೀರ್ಷಿಕೆಯ ಅಡಿ ಜಾತಿ ಜನಗಣತಿ ವರದಿ ಜಾರಿ ಮಾಡುವುದಾಗಿ ಹೇಳಿತ್ತು. ಅಖಿಲ ಭಾರತ ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಜಾತಿ ಜನಗಣತಿ ವರದಿ ಜಾರಿಯ ವಾಗ್ದಾನವಿದೆ. ಕಾಂಗ್ರೆಸ್ ಮತಗಳಿಂದ ಗೆದ್ದು ಜಾತಿಯ ಪರ ವಕಾಲತ್ತು ವಹಿಸುತ್ತಿರುವ ಸ್ವಪಕ್ಷೀಯರ ಬಾಯಿಗೆ ಬೀಗ ಹಾಕಲು ಇಷ್ಟು ಸಾಕು. ಸಾಲದೆಂದರೆ ಅವರ ಅಗ್ರ ನಾಯಕ ರಾಹುಲ್ ಗಾಂಧಿ ಅವರು ‘ಭಾರತ್ ಜೋಡೋ ಯಾತ್ರೆ’ ಮತ್ತು ಕಳೆದ ಲೋಕಸಭಾ ಚುನಾವಣೆ ವೇಳೆ ಜಾತಿ ಜನಗಣತಿ ವರದಿ ಜಾರಿಯ ಬಗ್ಗೆ ಮಾಡಿರುವ ಭಾಷಣದ ತುಣುಕುಗಳನ್ನು ಒಮ್ಮೆ ತೋರಿಸಿದರೆ ಆಗಲಾದರೂ ಮುದುರಿ ಕುಳಿತುಕೊಳ್ಳುತ್ತಾರೆ.
ಜಾತಿ ಜನಗಣತಿ ಜಾರಿ ವಿರೋಧಿಸಿ ವೀರಾವೇಶದ ಭಾಷಣ ಮಾಡಬಹುದೇ ಹೊರತು ಯಾವ ಸಚಿವ-ಶಾಸಕರೂ ರಾಜೀನಾಮೆ ನೀಡುವ ಧೈರ್ಯ ತೋರಲಾರರು. 137 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ಬಿದ್ದುಹೋಗುತ್ತೆ ಎನ್ನುವ ಭಯ ಇರಲೇಬೇಕಾಗಿಲ್ಲ. ವರದಿ ಬಹಿರಂಗಗೊಂಡ ಬಳಿಕ ಆಗುವ ‘ಸಣ್ಣಪುಟ್ಟ’ ತಲ್ಲಣಗಳನ್ನು ತಣ್ಣಗೆ ಮಾಡಲು ಸಾಕಷ್ಟು ಸಮಯವಿದೆ, ವಿಧಾನಸಭಾ ಚುನಾವಣೆ ದೂರ ಇದೆ.
ಪ್ರತಿಕೂಲ ಅಂಶಗಳು
ಕಾಂಗ್ರೆಸ್ ದೃಷ್ಟಿಯಲ್ಲಿ ಮೇಲೆ ಹೇಳಿದಂತೆ ಎಲ್ಲಾ ರೀತಿಯಲ್ಲೂ ಇದು ಸಕಾಲ ಅನಿಸಬಹುದು. ಆದರೆ ಸಿದ್ದರಾಮಯ್ಯ ಅವರ ದೃಷ್ಟಿಯಲ್ಲಿ ಪರಿಸ್ಥಿತಿ ತುಸು ಭಿನ್ನವಾಗಿದೆ. ಜಾತಿ ಜನಗಣತಿ ವಿರೋಧಿಸುವವರು ಪ್ರತಿದಿನವೂ ಒಂದಿಲ್ಲೊಂದು ರೀತಿಯಲ್ಲಿ ಒತ್ತಡ ಹೇರುತ್ತಿದ್ದಾರೆ. ಪರ ನಿಲ್ಲಬೇಕಾದ ಅಹಿಂದ ವರ್ಗಗಳ ನಾಯಕರು ತುಟಿ ಬಿಚ್ಚುತ್ತಿಲ್ಲ. ಇದಕ್ಕಿಂತಲೂ ಮುಖ್ಯವಾಗಿ ಸಿದ್ದರಾಮಯ್ಯಗೆ ಸಮಸ್ಯೆಯಾದಾಗ ಅಹಿಂದ ಮಂತ್ರ ಪಠಿಸುವ ಕುರುಬ ನಾಯಕರು ಜಾತಿ ಜನಗಣತಿ ಜಾರಿ ಬಗ್ಗೆ ಒಂದಕ್ಷರ ಮಾತನಾಡಿಲ್ಲ. ವರದಿ ಬಹಿರಂಗವಾದರೆ ಪ್ರವರ್ಗ 2Aನಲ್ಲಿ ತಾವು ಪಡೆಯುತ್ತಿರುವ ಬಹುದೊಡ್ಡ ಪಾಲಿಗೆ ಪೆಟ್ಟು ಬೀಳಬಹುದೆಂಬ ಭಯ ಕುರುಬ ನಾಯಕರನ್ನು ಕಾಡುತ್ತಿರಬಹುದು. ಅವರು ಸಿದ್ದರಾಮಯ್ಯ ಮೇಲೆ ಒತ್ತಡ ಹೇರುತ್ತಿರಬಹುದು.
ಹಿಂದೊಮ್ಮೆ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕಾಗಿನೆಲೆ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸಿದ್ದರಾಮಯ್ಯ ಮೇಲೆ ಕುಲಬಾಂಧವರು ಭಾರೀ ಒತ್ತಡ ಹೇರಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿದ್ದರೆ ಸ್ವಜಾತಿಯವರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ರವಾನಿಸಿದ್ದರು. ‘ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬುದು ನಮ್ಮಲ್ಲಿ ಒಡಕುಂಟು ಮಾಡಲು ಆರ್ ಎಸ್ ಎಸ್ – ಬಿಜೆಪಿ ಮಾಡಿರುವ ಷಡ್ಯಂತ್ರ’ ಎಂದು ಹೇಳಿ ಜನಾಂಗದ ಎಲ್ಲಾ ಒತ್ತಡವನ್ನು ಮೀರಿ ಸಿದ್ದರಾಮಯ್ಯ ದೂರ ಉಳಿದಿದ್ದರು. ಆದರೆ ಕಳೆದ ವಿಧಾನಸಭಾ, ಲೋಕಸಭಾ ಮತ್ತು ಇತ್ತೀಚೆಗಿನ ಉಪ ಚುನಾವಣೆಗಳಲ್ಲಿ ‘ಕುರುಬರು ಕೈ ಹಿಡಿಯದಿದ್ದರೆ ಕಷ್ಟವಾಗುತ್ತದೆ’ ಎಂದು ಕೇಳಿಕೊಂಡಿದ್ದರಂತೆ. ಈಗ ಅವರು ಜಾತಿ ಜನಗಣತಿ ವರದಿ ಜಾರಿ ಮಾಡಲು ಸ್ವಜಾತಿಯ ಒತ್ತಡವನ್ನು ಮೆಟ್ಟಿ ನಿಲ್ಲಬೇಕಾಗಿದೆ.
ಮೂಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ರಾಜ್ಯ ಹೈಕೋರ್ಟಿನಲ್ಲಿ ದಾಖಲಾಗಿರುವ ಅರ್ಜಿಯ ವಿಚಾರಣೆ ಬಾಕಿ ಇದೆ. ಈ ಅರ್ಜಿಯನ್ನು ‘ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಕೇಳಿರುವ ಕ್ರಮ ಸರಿಯಾಗಿದೆ, ತನಿಖೆಯಾಗಲಿ’ ಎಂದು ತೀರ್ಪು ನೀಡಿರುವ ನ್ಯಾ. ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸುತ್ತಿದೆ. ಒಂದೊಮ್ಮೆ ‘ಸಿಬಿಐ ತನಿಖೆಯೂ ಆಗಲಿ’ ಎಂಬ ಆದೇಶ ನೀಡಿದರೆ ಸಿದ್ದರಾಮಯ್ಯ ಅವರಿಗಾಗಿಯೇ ಹೆಣೆದಿರುವ ವಿಶೇಷ ಕಾನೂನಿನ ಕುಣಿಕೆ ಇನ್ನಷ್ಟು ಬಿಗಿಯಾಗಬಹುದು. ಅಂಥ ಕಡುಕಷ್ಟದ ಸಮಯದಲ್ಲಿ ಜಾತಿ ಜನಗಣತಿ ವರದಿ ಜಾರಿ ಎಂಬ ಆಪತ್ಕಾಲದ ಅಸ್ತ್ರ ಪ್ರಯೋಗಿಸಿ ಜನಾಭಿಪ್ರಾಯ ಗೆಲ್ಲುವ ಆಲೋಚನೆಯೂ ಇದ್ದಿರಬಹುದು.
ದಿಲ್ಲಿಯಲ್ಲಿ ಏನಾಯ್ತು? ಇದ್ದಕ್ಕಿದ್ದಂತೆ ಮುಂದೂಡಿದ್ದೇಕೆ?
ಕಳೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ಸಮೀಕ್ಷಾ ವರದಿಯನ್ನು ಮಂಡಿಸುವುದಾಗಿ ಹೇಳಿ ದೆಹಲಿ ವಿಮಾನ ಹತ್ತಿದ್ದ ಸಿದ್ದರಾಮಯ್ಯ ದೆಹಲಿಯಲ್ಲಿ ‘ಮುಂದಿನ ಸಂಪುಟ ಸಭೆಯಲ್ಲಿ ಮಂಡಿಸುತ್ತೇನೆ’ ಎಂದು ಮುಂದೂಡಿದರು. ಸಿದ್ದರಾಮಯ್ಯ ನಡೆಗೆ ಹೈಕಮಾಂಡ್ ತಡೆ ನೀಡಿದೆ ಅಂತಾ, ಡಿಕೆ ಶಿವಕುಮಾರ್ ದೂರು ನೀಡಿ ತಡೆಯಾಜ್ಞೆ ತಂದಿದ್ದಾರೆ ಅಂತಾ ನಾನಾ ರೀತಿಯಲ್ಲಿ ಈ ದಿಢೀರ್ ಬೆಳವಣಿಗೆಯನ್ನು ವ್ಯಾಖ್ಯಾನಿಸಲಾಗುತ್ತಿದೆ. ನಿಜವಾದ ಕಾರಣ ಸಿದ್ದರಾಮಯ್ಯ ಅವರಿಗೆ ಮಾತ್ರ ಗೊತ್ತು.
ನಾಯಕನಾಗುವರೋ? ಖಳನಾಯಕನಾಗುವರೋ?
ಜಾತಿ ಜನಗಣತಿ ವರದಿ ಜಾರಿಗೆ ಕೆಲವು ಪ್ರತಿಕೂಲ ಅಂಶಗಳಿದ್ದರೂ ಅದಕ್ಕೂ ಮೀರಿ ಪೂರಕವಾದ ವಾತಾವರಣ ಇದೆ ಎನ್ನುವುದನ್ನು ಅಲ್ಲಗೆಳೆಯಲಾಗದು. ಎಲ್ಲಾ ಕಾಲಕ್ಕೂ ಸುಧಾರಣೆಯ ಹೆಜ್ಜೆ ಇಟ್ಟಾಗ ತೀವ್ರವಾದ ವಿರೋಧ ವ್ಯಕ್ತವಾಗಿದೆ. ಮಂಡಲ್ ಆಯೋಗದ ವರದಿ ಜಾರಿಯಿಂದ ಹಿಡಿದು ಜಾತಿಗೆ, ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ಬೆಳವಣಿಗೆಯಲ್ಲೂ ಪ್ರತಿರೋಧ ಇದ್ದೇ ಇತ್ತು.
ಬುದ್ಧ, ಬಸವಣ್ಣ, ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್, ದೇವರಾಜ ಅರಸು, ಡಾ. ಮನಮೋಹನ್ ಸಿಂಗ್ ಆದಿಯಾಗಿ ಎಲ್ಲರೂ ಅವರವರ ವರ್ತಮಾನದಲ್ಲಿ ಅವಮಾನ-ಅಪಮಾನ, ವಿರೋಧ-ವಿರೋಧಾಭಾಸಗಳನ್ನು ಎದುರಿಸಿ ಇತಿಹಾಸದಲ್ಲಿ ಸ್ಮರಣೀಯರಾಗಿದ್ದಾರೆ. ಸಿದ್ದರಾಮಯ್ಯ ಅವರ ಮುಂದಿರುವುದು ಅಂತಹುದೇ ಎರಡು ಆಯ್ಕೆಗಳು. ಮೊದಲನೆಯದು, ಜಾತಿ ಜನಗಣತಿ ವರದಿ ಜಾರಿ ಮಾಡಿ ಶಾಶ್ವತವಾಗಿ ಅಹಿಂದ ವರ್ಗದ ಅಗ್ರ ನಾಯಕನಾಗಿ ಉಳಿಯುವುದು. ದೇವರಾಜು ಅರಸು ಅವರ ಸಾಲಿನಲ್ಲಿ ನಿಲ್ಲುವುದು. ಎರಡನೆಯದು, ಜನಗಣತಿ ವರದಿ ಜಾರಿ ಮಾಡದೆ ಅಹಿಂದ ವರ್ಗಗಳ ಪಾಲಿಗೆ ಶಾಶ್ವತ ಖಳನಾಯಕನಾಗುವುದು.