ರಾಜ್ಯದಲ್ಲಿ ಸದ್ಯ ಮೂರು ಬಲಾಢ್ಯ ಜಾತಿಗಳ ನಡುವೆ ಮೀಸಲಾತಿ ಪೈಪೋಟಿ ತಾರಕಕ್ಕೇರಿದೆ. ಈ ಮೀಸಲಾತಿ ಹೋರಾಟದ ಹಿಂದೆ ನಿಜವಾಗಿಯೂ ತಾವು ಹಿಂದುಳಿದಿದ್ದೇವೆ, ಮೀಸಲಾತಿಯ ಮೂಲಕ ಮುಂದೆ ಬರಬೇಕು ಎಂಬ ಕಾಳಜಿಯಷ್ಟೇ ಇದೆಯೇ? ಅಥವಾ ಬೇರೆ ಬೇರೆ ಹಿತಾಸಕ್ತಿಗಳು, ಆಸಕ್ತಿಗಳು ಅಡಗಿವೆಯೇ ಎಂಬ ಚರ್ಚೆಗಳೂ ಎದ್ದಿವೆ.
ಮುಖ್ಯವಾಗಿ ಲಿಂಗಾಯಿತ ಪಂಚಮಸಾಲಿಗೆ 2ಎ ಮೀಸಲಾತಿ ಹೋರಾಟದ ಹಿಂದೆ ಸಮುದಾಯಕ್ಕೆ ಸಿಗಬೇಕಾದ ಶೈಕ್ಷಣಿಕ ಮತ್ತು ಉದ್ಯೋಗ ಅವಕಾಶಗಳು ಸಿಕ್ಕಿಲ್ಲ. ಹಾಗಾಗಿ ಮೀಸಲಾತಿ ಬೇಕಿದೆ. ರಾಜಕೀಯ ಮೀಸಲಾತಿಗೆ ನಾವು ಕೇಳುತ್ತಿಲ್ಲ ಎಂದು ಹೋರಾಟಗಾರರು ಹೇಳಿದ್ದಾರೆ. ಆದರೆ, ಆ ಹೋರಾಟದ ಹಿಂದೆ ಆಡಳಿತರೂಢ ಬಿಜೆಪಿಯ ಹಿರಿಯ ನಾಯಕರು, ಸಚಿವರೂ ಇದ್ದಾರೆ ಮತ್ತು ಅವರು ಹಾಲಿ ಸಿಎಂ ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ ಎಂಬುದು ಗುಟ್ಟೇನಲ್ಲ. ಹಾಗಾಗಿ ಏನೇ ಹೇಳಿದರೂ, ಹೋರಾಟದ ಹಿಂದೆ ರಾಜಕೀಯ ನೆರಳು ಮುಚ್ಚಿಡಲಾಗದಷ್ಟು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಮತ್ತೊಂದು ಪ್ರಬಲ ಜಾತಿಯಾದ ಕುರುಬ ಸಮುದಾಯದ ಹೋರಾಟದ ಹಿಂದೆಯಂತೂ ಸಮುದಾಯದ ಹಿತಾಸಕ್ತಿಗಳೇನೇ ಇದ್ದರೂ ಅದು ಸದ್ಯ ಹೆಚ್ಚು ಸುದ್ದಿಯಾಗುತ್ತಿರುವುದು ರಾಜಕೀಯ ಕಾರಣಕ್ಕೇ. ತಮ್ಮ ಸಮುದಾಯವನ್ನು ಒಡೆಯುವ ತಂತ್ರವಾಗಿ ಆರ್ ಎಸ್ ಎಸ್ ಮತ್ತು ಬಿಜೆಪಿ ಈ ಮೀಸಲಾತಿ ಹೋರಾಟಕ್ಕೆ ಕುಮ್ಮಕ್ಕು ನೀಡುತ್ತಿವೆ. ಸಮುದಾಯ ಮೀಸಲಾತಿ ಕೇಳುವುದು ಸರಿ. ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕೆ ಸಂಬಂಧಿಸಿಂತೆ ಕುಲಶಾಸ್ತ್ರ ಅಧ್ಯಯನಕ್ಕೆ ತಾವೇ ಆದೇಶಿಸಿದ್ದು, ಆ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ ಹೀಗೆ ದಿಢೀರ್ ಹೋರಾಟ ನಡೆಸುತ್ತಿರುವುದರ ಹಿಂದೆ ಆರ್ ಎಸ್ ಎಸ್ ತಂತ್ರಗಾರಿಕೆ ಇದೆ ಎಂದು ಆ ಸಮುದಾಯದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಪದೇಪದೆ ಹೇಳುತ್ತಿದ್ದಾರೆ. ಜೊತೆಗೆ ತಮ್ಮದೆ ಸರ್ಕಾರಗಳಿರುವಾಗ, ತಾವೇ ಹಿರಿಯ ಸಚಿವರಾಗಿರುವಾಗ ಕೆ ಎಸ್ ಈಶ್ವರಪ್ಪ, ಸರ್ಕಾರದ ಮಟ್ಟದಲ್ಲಿ ಚರ್ಚೆ, ಮಾತುಕತೆ ಮೂಲಕ ತಮ್ಮ ಕಾರ್ಯಸಾಧನೆ ಮಾಡುವುದರ ಬದಲಾಗಿ ಬೀದಿಗಿಳಿದು ಬಲಪ್ರದರ್ಶನ ಮಾಡುತ್ತಿರುವುದು ಕೂಡ ಸಿದ್ದರಾಮಯ್ಯ ಅವರ ಹೇಳಿಕೆಗೆ ಪುಷ್ಟಿ ನೀಡುತ್ತಿದೆ.
ಇನ್ನು ಒಕ್ಕಲಿಗರು ಕೂಡ ಮೀಸಲಾತಿಗಾಗಿ ದನಿ ಎತ್ತಿದ್ದು, ತಮಗೂ 2 ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ಆರಂಭಿಸಿದ್ದಾರೆ.
ಆದರೆ, ಈ ಮೂರೂ ಬಲಾಢ್ಯ ಜಾತಿಗಳು ಹೀಗೆ ದಿಢೀರನೇ ಮೀಸಲಾತಿಗಾಗಿ ಎಚ್ಚೆತ್ತು ಪಟ್ಟು ಹಿಡಿದಿರುವುದರ ಹಿಂದೆ ಇರಬಹುದಾದ ರಾಜಕೀಯ ಕಾರಣಗಳ ಬಗ್ಗೆ ಸಿದ್ದರಾಮಯ್ಯ ಮಾತುಗಳಲ್ಲಿ ಸುಳಿವುಗಳಿವೆ. ಕಳೆದ ಒಂದು ದಶಕದ ಹಿಂದೆ ರಾಜ್ಯದಲ್ಲಿ ಬಹುತೇಕ ಲಿಂಗಾಯಿತರು ಮತ್ತು ಬ್ರಾಹ್ಮಣರ ಪಕ್ಷವಾಗಿ ಗುರುತಿಸಿಕೊಂಡಿದ್ದ ಬಿಜೆಪಿ ಈಗ ಒಕ್ಕಲಿಗ, ಬಂಟರು, ಈಡಿಗರು, ವಾಲ್ಮೀಕಿ ನಾಯಕ ಸೇರಿದಂತೆ ಬಹುತೇಕ ಹಿಂದುಳಿದ ವರ್ಗಗಳಲ್ಲಿ ಸಾಕಷ್ಟು ಬಲ ಹೊಂದಿದೆ. ಕರಾವಳಿ, ಮಲೆನಾಡಿನಂತಹ ಕಡೆ ಬಿಜೆಪಿಯ ದೊಡ್ಡ ಬಲವೇ ಬಂಟರು, ಈಡಿಗರು ಮುಂತಾದ ಸಣ್ಣಪುಟ್ಟ ಸಮುದಾಯಗಳು. ಆದರೆ, ಬಿಜೆಪಿ ಮತ್ತು ಆರ್ ಎಸ್ ಎಸ್ ಮತ್ತಿತರ ಬಲಪಂಥೀಯ ಸಂಘಟನೆಗಳಿಗೆ ಈಗಲೂ ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಮ್ಮೋಹಗೊಳಿಸಲಾಗದೇ ಉಳಿದಿರುವ ಸಮುದಾಯ ಕುರುಬರದ್ದು!

ಆ ಸಮುದಾಯವನ್ನು ತಮ್ಮ ಧರ್ಮ, ದೇವರು, ಹುಸಿ ದೇಶಭಕ್ತಿಯಂತಹ ಅಮಲು ಮದ್ದಿಗೆ ಮರುಳು ಮಾಡಲಾಗದಿರುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು, ಆ ಸಮುದಾಯಕ್ಕೆ ಇರುವ ತನ್ನದೇ ಆದ ಪ್ರಬಲ ಧಾರ್ಮಿಕ ನಂಬಿಕೆ ಮತ್ತು ಸಾಂಸ್ಕೃತಿಕ ಚಹರೆ ಕಾರಣವಾದರೆ, ಮತ್ತೊಂದು ಸಿದ್ದರಾಮಯ್ಯ ಅವರಂಥ ವರ್ಚಸ್ಸಿ ಜನನಾಯಕನ ಬಗೆಗೆ ಆ ಸಮುದಾಯಕ್ಕಿರುವ ನಂಬಿಕೆ. ಈ ಸೂಕ್ಷ್ಮ ಬಿಜೆಪಿಗೆ ತಡವಾಗಿ ಅರಿವಾಗಿದೆ. ಆರ್ ಎಸ್ ಎಸ್ ಮತ್ತು ಸಂಘಪರಿವಾರ ನಡೆಸಿದ ಸಂಶೋಧನೆಗಳು ತಡವಾಗಿ ಫಲ ಕೊಟ್ಟಿವೆ.
ಈ ನಡುವೆ, ಕಳೆದ ಒಂದೂವರೆ ದಶಕದಿಂದ ಲಿಂಗಾಯತರ ಪ್ರಶ್ನಾತೀತ ನಾಯಕನಾಗಿ ಬಿಂಬಿಸಿಕೊಂಡುಬಂದ ಬಿ ಎಸ್ ಯಡಿಯೂರಪ್ಪ, ಬೇರೆ ಬೇರೆ ಕಾರಣಕ್ಕೆ ಈಗ ಬಿಜೆಪಿ ಮತ್ತು ಸಂಘಪರಿವಾರದ ಅಚ್ಚುಮೆಚ್ಚಿನ ನಾಯಕನಾಗಿ ಉಳಿದಿಲ್ಲ ಮತ್ತು ಅವರ ವಯಸ್ಸು ಕೂಡ ಭವಿಷ್ಯದ ಹೊಣೆಗಾರಿಕೆಗಳಿಗೆ ಪೂರಕವಾಗಿಲ್ಲ. ಆ ಹಿನ್ನೆಲೆಯಲ್ಲಿ ಲಕ್ಷ್ಮಣ ಸವಧಿಯಂಥವರಿಗೆ ಉಪ ಮುಖ್ಯಮಂತ್ರಿ ಮಾಡಿ ಪರ್ಯಾಯ ಲಿಂಗಾಯತ ನಾಯಕತ್ವ ಬೆಳೆಸುವ ಸಂಘಪರಿವಾರದ ತಂತ್ರ ಕೂಡ ನಿರೀಕ್ಷಿತ ಫಲ ಕೊಟ್ಟಿಲ್ಲ. ಈ ನಡುವೆ ಮೀಸಲಾತಿ ಮತ್ತು ಈ ಹಿಂದೆ ಸಿದ್ದರಾಮಯ್ಯ ಸಿಎಂ ಅವಧಿಯಲ್ಲಿ ಚಾಲ್ತಿಗೆ ಬಂದಿದ್ದ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಳು ಕೂಡ ಬಿಜೆಪಿ ಎಡೆಗಿನ ಲಿಂಗಾಯತ ಒಲವನ್ನು ಘಾಸಿಗೊಳಿಸಿವೆ. ಹಾಗಾಗಿ ದಿನದಿಂದ ದಿನಕ್ಕೆ ಬಿಜೆಪಿ ಮತ್ತು ಲಿಂಗಾಯತರ ನಡುವೆ ಬಿರುಕು ಹೆಚ್ಚಾಗುತ್ತಿದೆ. ಐದಾರು ವರ್ಷಗಳ ಹಿಂದೆ ಇದ್ದ; ಬಿಜೆಪಿ ಎಂದರೆ ಲಿಂಗಾಯತರು, ಲಿಂಗಾಯತರು ಎಂದರೆ ಬಿಜೆಪಿ ಎಂಬ ಪರಿಸ್ಥಿತಿಯಂತೂ ಸದ್ಯಕ್ಕಿಲ್ಲ.
ಈ ಬದಲಾವಣೆ ಮುಂದಿನ ತರಬಹುದಾದ ನಷ್ಟವನ್ನು ಊಹಿಸಿರುವ ಬಿಜೆಪಿಯ ತಂತ್ರಗಾರ ಆರ್ ಎಸ್ ಎಸ್, ಲಿಂಗಾಯತರ ವಲಯದಲ್ಲಿ ಕಳಚುವ ನೆಲೆಯನ್ನು ಮತ್ತೊಂದು ಪ್ರಬಲ ಸಮುದಾಯ ಕುರುಬರಲ್ಲಿ ತುಂಬಿಕೊಳ್ಳುವ ತಂತ್ರ ಹೂಡಿದೆ. ಅಂತಹ ತಂತ್ರಗಾರಿಕೆಯ ಭಾಗವಾಗಿಯೇ ಸಮುದಾಯದ ಹೊಸ ಹೋರಾಟ ಇರಬಹುದೆ? ಎಂಬ ಅನುಮಾನಗಳು ಎದ್ದಿರುವ ಹೊತ್ತಿಗೇ ಸಿದ್ದರಾಮಯ್ಯ ಹೋರಾಟದ ಹಿಂದೆ ಆರ್ ಎಸ್ಎಸ್ ಇದೆ ಎಂದಿದ್ದಾರೆ. ಹಾಗೊಂದು ವೇಳೆ ಅಂತ ತಂತ್ರಗಾರಿಕೆ ನಿಜವೇ ಆಗಿದ್ದರೆ, ಅದು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಲೆಕ್ಕಾಚಾರವೇ ಸರಿ. ಏಕೆಂದರೆ, ಸದ್ಯ ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ನೊಂದಿಗೆ ಬಹುತೇಕ ಇರುವ ಆ ಸಮುದಾಯ ಮೀಸಲಾತಿ ಹೋರಾಟ ಮತ್ತು ಬಿಜೆಪಿಯ ಬೆಂಬಲದ ಕಾರಣಕ್ಕೆ ಆ ಕಡೆ ಒಲಿದರೆ, ಅತ್ತ ಸಮುದಾಯವನ್ನು ಬಿಜೆಪಿಗೆ ತಿರುಗಿಸುವುದೂ, ಅದೇ ಹೊತ್ತಿಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಗೆ ಪೆಟ್ಟು ಕೊಡುವುದೂ ಒಂದೇ ಏಟಿಗೆ ಆಗಿಹೋಗುತ್ತದೆ.
ಆ ತಂತ್ರಗಾರಿಕೆಯ ಸುಳಿವು ಸಿಕ್ಕಿಯೇ ಸಿದ್ದರಾಮಯ್ಯ ಈಗ ಕುರುಬ ಸಮುದಾಯದ ಬೃಹತ್ ಸಮಾವೇಶದ ಬಳಿಕ ಪ್ರತಿ ತಂತ್ರ ಜಾರಿಗೆ ತರತೊಡಗಿದ್ದಾರೆ. ಆದರೆ, ಆ ತಂತ್ರವನ್ನು ಕೇವಲ ಒಂದು ಸಮುದಾಯವನ್ನು ಮುಂದಿಟ್ಟುಕೊಂಡು ಮಾಡಿದರೆ, ಅದು ತಮ್ಮ ಹಿಂದುಳಿದ ಸಮುದಾಯಗಳ ನಾಯಕ, ಅಹಿಂದ ನಾಯಕ ಎಂಬ ವರ್ಚಸ್ಸಿಗೆ ಪೆಟ್ಟು ಕೊಡಲಿದೆ ಎಂಬ ಲೆಕ್ಕಾಚಾರದಲ್ಲಿ ಮತ್ತೆ ಅಹಿಂದ ಹೆಸರಿನಲ್ಲಿಯೇ ಬಿಜೆಪಿಗೆ ತಿರುಗೇಟು ಕೊಡಲು ಹೊರಟಿದ್ಧಾರೆ. ಈ ಹಿಂದೆ 90ರ ದಶಕದಿಂದಲೂ ತಮ್ಮ ರಾಜಕೀಯ ಭವಿಷ್ಯ ಮಂಕಾದಾಗೆಲ್ಲಾ ಅಹಿಂದ ಸಮಾವೇಶಗಳ ಮೂಲಕ ಶಕ್ತಿ ಪ್ರದರ್ಶನ ಮಾಡಿ ಯಶಸ್ಸು ಕಂಡಿರುವ ಸಿದ್ದರಾಮಯ್ಯ, ಈಗಲೂ ಬಿಜೆಪಿಯ ತಂತ್ರಗಾರಿಕೆಗೆ ಪ್ರತ್ಯಾಸ್ತ್ರವಾಗಿ ಅಹಿಂದ ಪ್ರಯೋಗಕ್ಕೆ ಮುಂದಾಗಿದ್ಧಾರೆ.
ಆದರೆ, ಈ ಹಿಂದಿನಂತೆ ಅವರು ಪ್ರಾದೇಶಿಕ ಪಕ್ಷದಲ್ಲಿಲ್ಲ. ಈಗಿರುವುದು ರಾಷ್ಟ್ರೀಯ ಪಕ್ಷದಲ್ಲಿ. ಕಾಂಗ್ರೆಸ್ ತನ್ನ ಮುಂಚೂಣಿ ನಾಯಕರೊಬ್ಬರು ಹೀಗೆ ಪಕ್ಷದ ವೇದಿಕೆಯ ಹೊರಗೆ ರಾಜಕೀಯ ಸಂಘಟನೆ ನಡೆಸಲು ಅವಕಾಶ ನೀಡುವುದೆ? ಅಂತಹ ಪ್ರಯತ್ನಗಳು ಪಕ್ಷದ ಮೇಲೆ ಬೀರುವ ಪರಿಣಾಮಗಳ ಸಾಧಕ ಬಾಧಕ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಅಡ್ಡಗಾಲಾಗುವುದೇ ಎಂಬ ಪ್ರಶ್ನೆಗಳೂ ಇವೆ. ಹೊಸ ಅಹಿಂದ ಸಮಾವೇಶಗಳ ಯೋಜನೆಯ ಸುದ್ದಿ ಹೊರಬೀಳುತ್ತಿದ್ದಂತೆ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದೆ. ಜಿಲ್ಲಾ ಪಂಚಾಯ್ತಿ ಚುನಾವಣೆ ಮತ್ತು ಉಪ ಚುನಾವಣೆಗಳ ಹಿನ್ನೆಲೆಯಲ್ಲಿ ಎಚ್ಚರಿಕೆ ಹೆಜ್ಜೆ ಇಡುವಂತೆ ತಾಕೀತು ಮಾಡಿದೆ ಎನ್ನಲಾಗಿದೆ. ಈ ನಡುವೆ, ತಮ್ಮ ಮಿತ್ರ ಮತ್ತು ಅಹಿಂದ ಚಳವಳಿಯ ಮುಂಚೂಣಿ ನಾಯಕ ಎಚ್ ಸಿ ಮಹದೇವಪ್ಪ ಅವರನ್ನು ಬಹಳ ದಿನಗಳ ನಂತರ ದಿಢೀರನೇ ಭೇಟಿ ಮಾಡಿರುವ ಸಿದ್ದರಾಮಯ್ಯ, ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಯಾವುದೇ ಸಂಘಟನೆಯ ಕುರಿತು ಮಾತನಾಡಲು ಬಂದಿಲ್ಲ ಎಂದಿದ್ದಾರೆ. ಆದರೆ, ಅದೇ ಹೊತ್ತಿಗೆ ಪಂಚಾಯ್ತಿಗಳಲ್ಲಿ ಗೆದ್ದಿರುವ ಸಮುದಾಯದ ಪ್ರತಿನಿಧಿಗಳಿಗೆ ಸನ್ಮಾನಿಸಲು ಕುರುಬ ಸಂಘದವರು ಸಮಾವೇಶ ನಡೆಸುತ್ತಿದ್ದಾರೆ ಎಂದಿದ್ಧಾರೆ. ಈ ನಡುವೆ, ಮಡಿಕೇರಿ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಹಿಂದ ನಾಯಕರು ವರ್ಷಗಳ ಬಳಿಕ ಸಭೆ-ಸಂವಾದಗಳಿಗೆ ದಿಢೀರ್ ಚಾಲನೆ ನೀಡಿದ್ದಾರೆ.
ಅಂದರೆ; ಸಿದ್ದರಾಮಯ್ಯ ತಂತ್ರಗಾರಿಕೆಯಲ್ಲಿ ಚಿಕ್ಕ ಬದಲಾವಣೆಯಾಗಿದೆ. ತಾವೇ ನೇರವಾಗಿ ಮುಂದಾಳತ್ವ ವಹಿಸಿ ಅಹಿಂದ ಮಾದರಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಮತ್ತಿತರ ವಿಚಾರ ಮುಂದಿಟ್ಟುಕೊಂಡು ಸಮಾವೇಶಗಳನ್ನು ನಡೆಸುವುದು ಕಾಂಗ್ರೆಸ್ ಪಕ್ಷದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ, ಅಹಿಂದ ಸಂಘಟನೆಯ ಹೆಸರಿನಲ್ಲಿಯೇ ಅದನ್ನು ಮಾಡಿ, ಬಿಜೆಪಿಗೆ ತಿರುಗೇಟು ನೀಡುವ ಸಾಧ್ಯತೆಗಳ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ. ನೇರವಾಗಿ ತಾವಿಲ್ಲದೆಯೂ ತಾವು ಅಂದುಕೊಂಡಿದ್ದನ್ನು ಎಚ್ ಸಿ ಮಹದೇವಪ್ಪ ಮತ್ತಿತರ ನಾಯಕರ ಮೂಲಕ ಸಾಧಿಸುವುದು ಸದ್ಯ ಸಿದ್ದರಾಮಯ್ಯ ಅವರ ಯೋಚನೆ. ಆ ಮೂಲಕ ಒಂದು ಕಡೆ ತಮ್ಮನ್ನು ಹಣಿಯುವ ಬಿಜೆಪಿ-ಆರ್ ಎಸ್ ಎಸ್ ತಂತ್ರಕ್ಕೂ ತಿರುಗೇಟು ನೀಡಬಹುದು. ಜೊತೆಗೆ ಅಹಿಂದ ವಲಯದಲ್ಲಿ ತಮ್ಮ ಬೆಂಬಲ ವೃದ್ಧಿಸಿಕೊಳ್ಳುವ ಮೂಲಕ ಪಕ್ಷದಲ್ಲಿ ಆಂತರಿಕವಾಗಿಯೂ ಶಕ್ತಿ ವೃದ್ಧಿಸಿಕೊಳ್ಳಬಹುದು ಎಂಬುದು ಈಗಿನ ಹೊಸ ಲೆಕ್ಕಾಚಾರ ಎನ್ನಲಾಗುತ್ತಿದೆ!
ಹಾಗಾಗಿ, ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಹೊಸ ಅಲೆ ಏಳಲಿದೆ. ಪರಿಷ್ಕೃತ ಆವೃತ್ತಿಯ ಅಹಿಂದ ಹೋರಾಟದ ದನಿ ಮತ್ತೆ ಮೊಳಗಲಿದೆ ಎಂಬ ನಿರೀಕ್ಷೆ ಸಿದ್ದರಾಮಯ್ಯ ಅಭಿಮಾನಿಗಳದ್ದು!