2014ರ ಲೋಕಸಭಾ ಚುನಾವಣೆಯ ವೇಳೆ ಪೆಟ್ರೋಲ್ ಬೆಲೆ 40 ರೂ.ಗೆ ಇಳಿಸುವ ಸರ್ಕಾರಕ್ಕೆ ಮತ ನೀಡಿ ಎಂದು ಬಿಜೆಪಿ ಪರ ವಕಾಲತ್ತು ವಹಿಸಿದ್ದ ಬಾಬಾ ರಾಮ್ ದೇವ್, ಈಗ ಪತ್ರಕರ್ತರ ಪ್ರಶ್ನಿಯೊಂದಕ್ಕೆ ತಾಳ್ಮೆ ಕಳೆದುಕೊಂಡಿದ್ದಾರೆ. ಮಾತ್ರವಲ್ಲದೇ, ಕ್ಯಾಮೆರಾ ಎದುರೇ ಪತ್ರಕರ್ತರಿಗೆ ಬೆದರಿಕೆಯನ್ನೂ ಹಾಕಿದ್ದಾರೆ.
ವಾರ್ಷಿಕ ಕೋಟ್ಯಾಂತರ ರೂ. ಆದಾಯ ಪಡೆಯುತ್ತಿರುವ ಪತಂಜಲಿ ಸಂಸ್ಥೆಯ ರಾಯಭಾರಿ ಆಗಿರುವ ಬಾಬಾ ರಾಮ್ ದೇವ್ ಅವರು ಹರಿಯಾಣದ ಕರ್ನಾಲ್’ನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಸತತ ಏರಿಕೆ ಕಾಣುತ್ತಿರುವ ತೈಲ ಬೆಲೆಯ ಕುರಿತು ಬಾಬಾಗೆ ಪ್ರಶ್ನೆ ಕೇಳಲಾಯಿತು. ಮೊದಮೊದಲು ಉಡಾಫೆಯ ಉತ್ತರ ನೀಡುತ್ತಿದ್ದ ಬಾಬಾ ರಾಮ್ ದೇವ್ ಏಕಾಏಕಿ ಪತ್ರಕರ್ತನ ಮೇಲೆ ಸಿಡುಕಿ ಬೆದರಿಕೆಯನ್ನು ಹಾಕುವ ಮಟ್ಟಕ್ಕೆ ಇಳಿದರು.
ಪೆಟ್ರೋಲ್ ಬೆಲೆ 40 ರೂ. ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ರೂ. 300 ಮಾಡುವ ಸರ್ಕಾರಕ್ಕೆ ಮತ ಹಾಕಿ ಎಂದು ಬಹಿರಂಗವಾಗಿ ನೀವು ಹೇಳಿಕೆ ನೀಡಿದ್ದೀರಲ್ಲವೇ? ಎಂಬ ಪ್ರಶ್ನೆಗೆ, ಹೌದು ನಾನು ಹೇಳಿದ್ದು. ಅದಕ್ಕೀಗ ನಿಮ್ಮಿಂದ ಏನು ಮಾಡಲು ಸಾಧ್ಯ? ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಗುತ್ತಿಗೆಯನ್ನು ನಾನು ತೆಗೆದುಕೊಂಡಿಲ್ಲ, ಎಂದು ಉಡಾಫೆಯ ಮಾತುಗಳನ್ನಾಡಿದರು.
ರಾಮ್ ದೇವ್ ಸಮರ್ಪಕ ಉತ್ತರ ನೀಡದ ಕಾರಣಕ್ಕಾಗಿ ಮತ್ತೆ ಅದೇ ಪ್ರಶ್ನೆಯನ್ನು ಪತ್ರಕರ್ತರು ಕೇಳಿದರು. ಈ ವೇಳೆ ತಾಳ್ಮೆ ಕಳೆದುಕೊಂಡ ಬಾಬಾ ರಾಮ್ ದೇವ್, “ನಾನು ಆ ಹೇಳಿಕೆಯನ್ನು ನೀಡಿದ್ದೆ. ಅದಕ್ಕೆ ಇವಾಗ ನೀನು ಏನು ಮಾಡ್ತೀಯಾ? ಬಾಯಿ ಮುಚ್ಚಿಕೊಂಡಿರು. ಇನ್ನೊಮ್ಮೆ ಇದೇ ಪ್ರಶ್ನೆ ಕೇಳಿದರೆ ಒಳ್ಳೆಯದಲ್ಲ. ಯೋಗ್ಯ ಪೋಷಕರ ಮಗ ನೀನಾಗಿದ್ದರೆ, ಈ ರೀತಿ ಮಾತನಾಡಬೇಡ,” ಎಂದು ಬೆದರಿಕೆ ಮಿಶ್ರಿತ ಉತ್ತರವನ್ನು ನೀಡಿದರು.
ಇದಕ್ಕೂ ಮುಂಚೆ, ಬೆಲೆ ಏರಿಕೆ ವಿರುದ್ದ ಹೋರಾಡಲು ಜನರು ಹೆಚ್ಚು ಪರಿಶ್ರಮ ಪಡಬೇಕು ಎಂದು ಬಾಬಾ ಸಲಹೆ ನೀಡಿದ್ದಾರೆ.
“ಸರ್ಕಾರ ಹೇಳುತ್ತದೆ, ತೈಲ ಬೆಲೆ ಇಳಿಸಿದರೆ ತೆರಿಗೆ ಬರುವುದಿಲ್ಲ. ತೆರಿಗೆ ಇಲ್ಲದೆ ಸರ್ಕಾರ ಹೇಗೆ ನಡೆಸುವುದು? ಸಂಬಳ ಹೇಗೆ ನೀಡುವುದು? ರಸ್ತೆ ಹೇಗೆ ನಿರ್ಮಿಸುವುದು? ಹಣದುಬ್ಬರ ಇಳಿಕೆಯಾಗಬೇಕು. ನಾನೂ ಒಪ್ಪುತ್ತೇನೆ. ಆದರೆ, ಇದಕ್ಕಾಗಿ ಜನರು ಪರಿಶ್ರಮ ಪಡಬೇಕು. ನಾನು ಕೂಡಾ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಕೆಲಸ ಮಾಡುತ್ತೇನೆ, ಜನರೂ ಮಾಡಬೇಕು,” ಎಂದು ಹೇಳಿದ್ದಾರೆ.
ಅಂದಹಾಗೆ, ಕಳೆದ ಹತ್ತು ದಿನಗಳಲ್ಲಿ ಒಂಬತ್ತು ಬಾರಿ ತೈಲ ಬೆಲೆ ಏರಿಕೆಯಾಗಿದೆ. ಗುರುವಾರದಂದು 80 ಪೈಸೆ ಏರಿಕೆಯಾಗಿದ್ದು, ಹತ್ತು ದಿನಗಳಲ್ಲಿ ಒಟ್ಟು ರೂ. 6.40ಯಷ್ಟು ಏರಿಕೆಯಾಗಿದೆ.