ಮೈಸೂರುನಲ್ಲಿ ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ಹುಟ್ಟುಹಬ್ಬವಿದ್ದು ಈ ಹಿನ್ನೆಲೆ ಅರಮನೆ ಆವರಣದಲ್ಲಿ ಮಾವುತರಿಗೆ ಹಾಗೂ ಕಾವಾಡಿಗರಿಗೆ ವಿಶೇಷ ಉಪಹಾರ ಏರ್ಪಡಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಮೈಸೂರಿನ ದಸರಾ ಮಹೋತ್ಸವಕ್ಕೆ ಬಂದಿರುವ ಮಾವುತರು ಮತ್ತು ಕಾವಾಡಿಗಳಿಗೆ ಸ್ವತಃ ಶೋಭಾ ಕರಂದ್ಲಾಜೆ ಉಪಾಹಾರ ಬಡಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದು ವಿಶೇಷ.
ಈ ವೇಳೆ ಮಾಧ್ಯಮಗಳಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟ ಹತ್ತಿ ತಾಯಿಯ ದರ್ಶನ ಪಡೆದೆನು.
ರಾಜ್ಯ, ದೇಶದ ಸಮೃದ್ಧಿ, ರಕ್ಷಣೆ ಹಾಗೂ ಮೋದಿ ಅವರ ಆರೋಗ್ಯ ವೃದ್ಧಿಗೆ ಪ್ರಾರ್ಥನೆ. ಮಾವುತರು, ಕಾವಾಡಿಗಳಿಗೆ ಉಪಹಾರ ನೀಡುವ ಪರಿಪಾಠ ಈ ವರ್ಷವೂ ಮುಂದುವರಿದಿದೆ ಎಂದು ಹೇಳಿದರು.

2008ರಲ್ಲಿ ಬಿಜೆಪಿ ಸರ್ಕಾರ ಬರುವ ಮೊದಲು ಪ್ರತಿ ವರ್ಷ ಮಾವುತರು ಕಾವಾಡಿಗರ ಧರಣಿ ನಡೆಯುತ್ತಿತ್ತು. ಸಂಬಳ, ವಿದ್ಯಾಭ್ಯಾಸ, ಆರೋಗ್ಯ ತಪಾಸಣೆ ವ್ಯವಸ್ಥೆ ಅವರಿಗೆ ಇರಲಿಲ್ಲ.ನಾನು ಜಿಲ್ಲಾ ಉಸ್ತುವಾರಿ ಸಚಿವೆ ಆಗಿದ್ದ ವೇಳೆ ಅವರ ಸಮಸ್ಯೆ ಆಲಿಸಿದೆ. ಸರ್ಕಾರಿ ಸಂಬಳ ಕೊಡಿಸುವಂತೆ ಮನವಿ ಮಾಡಿದ್ದರು. ಆದರೆ ಸರ್ಕಾರಿ ಸಂಬಳ ಪಡೆಯಲು 7ನೇ ತರಗತಿ ಪಾಸ್ ಆಗಿರಬೇಕೆಂಬ ನಿಯಮವಿತ್ತು. ಮಾವುತರು, ಕಾವಾಡಿಗಳು ಯಾರು ಸಹ 7ನೇ ತರಗತಿ ಪಾಸ್ ಆಗಿರಲಿಲ್ಲ. ಯಡಿಯೂರಪ್ಪ ಅವರು ಹೆಚ್ಚಿನ ವಿದ್ಯಾಭ್ಯಾಸ ಪಡೆಯದ ಮಾವುತ ಕಾವಾಡಿಗಳನ್ನ ಸರ್ಕಾರಿ ನೌಕರರನ್ನಾಗಿ ಮಾಡಿದರು. ಇವತ್ತು ಮಾವುತರು, ಕಾವಾಡಿಗಳು ಖುಷಿಯಿಂದ ಇದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ಮದ್ಯಪಾನ ಮಾಡದಂತೆ ಅವರಿಂದ ನಾನು ಪ್ರಮಾಣ ಮಾಡಿಸಿದ್ದೆ. ತಮ್ಮ ತಮ್ಮ ಮಕ್ಕಳಿಗೆ ಇಂದು ಶಿಕ್ಷಣ ಕೊಡಿಸುತ್ತಿದ್ದಾರೆ. ಬಹಳ ಖುಷಿಯಿಂದ ಅವರಿಗೆಲ್ಲಾ ಉಪಹಾರ ಕೊಟ್ಟಿದ್ದೇನೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.