ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣದಿಂದ ಇಡೀ ಕರುನಾಡ ಜನ ನೋವಲ್ಲಿ ಮರುಗುತ್ತಿದ್ದಾರೆ. ದಿನ ಕಳೆದರೂ ಅಪ್ಪು ಸಮಾಧಿಯ ಮುಂದೆ ಕಣ್ಣೀರು ಹಾಕಿ ದುಃಖ ತೋಡಿಕೊಳ್ಳುತ್ತಿದ್ದಾರೆ. ಹೌದು, ಈ ರೋಧನೆಯ ಜೊತೆಗೆ ಅಗಲಿದ ರಾಜಕುಮಾರನ ನೆನಪಿಗೋಸ್ಕರ ಅಭಿಮಾನಿಗಳು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಡಾ. ರಾಜ್ ಕುಮಾರ್ ಸ್ಮರಣಾರ್ಥವಾಗಿ ಅಭಿಮಾನಿಗಳ ಸಂಘ ಅವರ ನೆನಪಿಗೋಸ್ಕರ ಬೆಂಗಳೂರಿನಲ್ಲಿ ಡಾ. ರಾಜ್ ಕುಮಾರ್ ರಸ್ತೆ ಎಂದು ಹೆಸರಿಟ್ಟಿರೋದು ಗೊತ್ತೇ ಇದೆ. ಅಂತಹ ಮಹಾನ್ ಕಲಾವಿದನಿಗೆ ಸಲ್ಲಲೇ ಬೇಕಾದ ಗೌರವ ಅದಾಗಿತ್ತು. ಇದಲ್ಲದೆ ಕೆಲವು ಹಿರಿಯ ಕಲಾವಿದರ ಹೆಸರುಗಳನ್ನೂ ರಸ್ತೆಗಳಿಗೆ ಹೆಸರಿಡಲಾಗಿದೆ. ಇಂತಹ ಗೌರವಗಳ ಸಾಲಿನಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಹೆಸರೂ ಕೇಳಿಬರುತ್ತಿದೆ.
ನಟಸಾರ್ವಭೌಮನ ಅಭಿಮಾನಿಗಳು ಈಗಾಗಲೇ ಪುನೀತ್ ಅವರ ಹೆಸರನ್ನು ಸುಮಾರು ಒಂದು ಕಿ.ಮೀ ಉದ್ದದ ರಸ್ತೆಗೆ ನಾಮಕರಣ ಮಾಡಲು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ಈಗಾಗಲೇ ಕಳೆದ ನವೆಂಬರ್ 1 ರಂದೇ ಶಿವಮೊಗ್ಗದ ಆಯನೂರ್ ಗೇಟ್ ನಿಂದ ಲಕ್ಷ್ಮಿ ಚಲನಚಿತ್ರ ಮಂದಿರದವರೆಗಿನ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರಿಡಲಾಗಿದೆ.
ಈ ಬಗ್ಗೆ ಮಾತನಾಡಿದ ಮೇಯರ್ ಸುನೀತಾ ಅಣ್ಣಪ್ಪ, ಪುನೀತ್ ಅವರ ಅಭಿಮಾನಿಗಳು ಸರ್ಕಾರದ ಮುಂದೆ ಈ ಬೇಡಿಕೆಯಿಟ್ಟಿದ್ದರು. ನಾಮಕರಣ ಅಧಿಕೃತಗೊಳಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ, ಇನ್ನು ಸರ್ಕಾರ ಅಧಿಕೃತಗೊಳಿಸುವುದು ಬಾಕಿ ಇದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನೂ ಬಾಳಿ ಬೆಳಕಾಗಬೇಕಾದ ಸರಳ ವ್ಯಕ್ತಿಯನ್ನು ಕಳೆದುಕೊಂಡ ಬೇಸರ ಕನ್ನಡಿಗರಲ್ಲಿದೆ. ಬದುಕಿದ್ದಾಗ ಸಾವಿರಾರು ಜನರಿಗೆ ದಾನಧರ್ಮ ಇತ್ಯಾದಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಪ್ರತಿಯೊಬ್ಬರ ಮನಸ್ಸಿನಲ್ಲಿ ಅಚ್ಚಳಿಯಾಗಿ ಉಳಿದ ಇವರು ಇಹಲೋಕ ತ್ಯಜಿಸಿದ್ದಾರೆ. ಇವರ ಹೆಸರು ನೆನಪಾಗಿ ಉಳಿಯಲಿ ಎನ್ನುವುದು ಅಭಿಮಾನಿಗಳ ಒತ್ತಾಯವಾಗಿದೆ.