ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಿಂದ ಪ್ರಕ್ಷುಬ್ಧಗೊಂಡಿದ್ದ ಶಿವಮೊಗ್ಗದಲ್ಲಿ ಮಂಗಳವಾರ ಸಂಜೆಯ ಹೊತ್ತಿಗೆ ಪರಿಸ್ಥಿತಿ ಹತೋಟಿಗೆ ಬಂದಿದೆ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ನಗರ ವ್ಯಾಪ್ತಿಯಲ್ಲಿ ಕರ್ಫ್ಯೂ ಮುಂದುವರಿಸಿದೆ. ಈ ನಡುವೆ ಕೊಲೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿರುವ ಜಿಲ್ಲಾ ಪೊಲೀಸರು, ವಿಚಾರಣೆ ಮುಂದುವರಿಸಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಕಳೆದ ಭಾನುವಾರದಿಂದ 19 ಬೇರೆಬೇರೆ ಘಟನೆಗಳು ನಡೆದಿವೆ. ನಗರದಲ್ಲಿ ನಡೆದ ಗಲಾಟೆಯಿಂದ ಆಟೋ, ಕಾರು, ಬೈಕ್ ಸೇರಿದಂತೆ 18 ವಾಹನಗಳನ್ನು ಜಖಂ ಮಾಡಲಾಗಿದೆ. ಗಲಭೆಯಲ್ಲಿ 8 ಜನ ಗಾಯಗೊಂಡಿದ್ದಾರೆ. ಸದ್ಯ ಸೂಕ್ಷ್ಮ ಪ್ರದೇಶಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ಹೆಚ್ಚುವರಿ ಪೊಲೀಸ್ ಬಿಗಿ ಬಂದೋಬಸ್ತ್ ಹಾಕಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಯುವಕನ ಕೊಲೆಯಲ್ಲಿ ಬಂಧಿತರ ಪಾತ್ರವೇನು? ಕೊಲೆಯ ಉದ್ದೇಶ ಮತ್ತು ಪ್ರಚೋದನೆಗಳೇನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಸದ್ಯ ಪ್ರತ್ಯಕ್ಷದರ್ಶಿಗಳು, ಅಕ್ಕಪಕ್ಕದ ಜನರು ಮತ್ತು ಬಂಧಿತರ ಚಲನವಲನಗಳ ಆಧಾರದ ಮೇಲೆ 13 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆ ಪೈಕಿ ಆರು ಮಂದಿಯನ್ನು ಅಧಿಕೃತವಾಗಿ ಬಂಧಿಸಲಾಗಿದೆ. ಇನ್ನೂ ಕೆಲವರ ಬಂಧನ ಸಾಧ್ಯತೆ ಇದೆ ಎಂದು ಎಸ್ಪಿ ಹೇಳಿದ್ದಾರೆ.
ಈ ನಡುವೆ, ನಿಷೇಧಾಜ್ಞೆಯ ನಡುವೆಯೂ ಯುವಕನ ಶವ ಮೆರವಣಿಗೆಯ ವೇಳೆ ನೂರಾರು ಜನರು ಭಾಗಿಯಾಗಲು ಮತ್ತು ಮಾರಕಾಸ್ತ್ರಗಳೊಂದಿಗೆ ಬೀದಿಯಲ್ಲಿ ಠಳಾಯಿಸಲು ಜಿಲ್ಲಾಡಳಿತ ಮತ್ತು ಪೊಲೀಸರು ಹೇಗೆ ಅವಕಾಶ ನೀಡಿದರು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಅದರಲ್ಲೂ ಸ್ವತಃ ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ಶಿವಮೊಗ್ಗ ಶಾಸಕ ಕೆ ಎಸ್ ಈಶ್ವರಪ್ಪ ಮತ್ತು ಸಂಸದ ಬಿ ವೈ ರಾಘವೇಂದ್ರ ಅವರುಗಳೇ ಸ್ವತಃ ಮೆರವಣಿಗೆಯ ನೇತೃತ್ವ ವಹಿಸಿ ತಮ್ಮದೇ ಸರ್ಕಾರ ಹೇರಿದ್ದ ನಿಷೇಧಾಜ್ಞೆಯನ್ನು ಗಾಳಿಗೆ ತೂರಿದ್ದೇ ಅಲ್ಲದೆ, ಆ ಮೆರವಣಿಗೆಯ ವೇಳೆ ನೇರವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕೊಲೆಗೆ ಆ ಸಮುದಾಯವೇ ಕಾರಣ ಎಂದು ಹೇಳಿಕೆ ನೀಡುವ ಮೂಲಕ ಹಿಂಸಾಚಾರ ಮತ್ತು ಸಂಘರ್ಷಕ್ಕೆ ಪರೋಕ್ಷ ಕುಮ್ಮಕ್ಕು ನೀಡಿದ್ದರೂ ಜಿಲ್ಲಾ ಪೊಲೀಸರು ಆ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ ಎಂಬ ಪ್ರಶ್ನೆ ಕೂಡ ಕೇಳಿಬಂದಿದೆ.
ಆ ಹಿನ್ನೆಲೆಯಲ್ಲಿ ಮಂಗಳವಾರ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಡಾ ಸೆಲ್ವಮಣಿ, ಕೊಲೆಯಾದ ಯುವಕನ ಮೃತದೇಹದ ಮೆರವಣಿಗೆಗೆ ಯಾವುದೇ ಅನುಮತಿ ಪಡೆದಿರಲಿಲ್ಲ ಮತ್ತು ಜಿಲ್ಲಾಡಳಿತ ಕೂಡ ಯಾವುದೇ ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಸ್ವತಃ ಜಿಲ್ಲಾಧಿಕಾರಿಗಳೇ ಮೆರವಣಿಗೆಗೆ ಅನುಮತಿ ಪಡೆದಿರಲಿಲ್ಲ ಎಂದು ಅಧಿಕೃತವಾಗಿಯೇ ಹೇಳಿರುವಾಗ, ನಿಷೇಧಾಜ್ಞೆಯ ನಡುವೆ ಅನುಮತಿ ಇಲ್ಲದೆ ಕಾನೂನು ಉಲ್ಲಂಘಿಸಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಭಾಷಣ ಮಾಡುತ್ತಾ ಉದ್ರಿಕ್ತ ಗುಂಪಿನ ನೇತೃತ್ವ ವಹಿಸಿ ಮೆರವಣಿಗೆ ನಡೆಸಿ ಅಶಾಂತಿ ಮತ್ತು ವೈಷಮ್ಯಕ್ಕೆ ಕುಮ್ಮಕ್ಕು ನೀಡಿದ ನಾಯಕರ ವಿರುದ್ಧ ಯಾವ ಕ್ರಮಕೈಗೊಳ್ಳಲಾಗಿದೆ ಎಂಬುದು ಈಗ ನಾಗರಿಕರ ಪ್ರಶ್ನೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಇದೇ ಪ್ರಶ್ನೆಯನ್ನು ಎತ್ತಿದ್ದು, “ಶವಯಾತ್ರೆಯಲ್ಲಿ ಸಚಿವ ಈಶ್ವರಪ್ಪ, ಸ್ಥಳೀಯ ಸಂಸದ ರಾಘವೇಂದ್ರ ಕೂಡ ಭಾಗವಹಿಸಿದ್ದರು. ಅಂದರೆ ಈ ಶವಯಾತ್ರೆ ರಾಜ್ಯ ಸರ್ಕಾರದ ಪ್ರಾಯೋಜಿತ ಶವಯಾತ್ರೆ ಎನ್ನಬೇಕಾಗುತ್ತದೆ. ತಮ್ಮದೇ ಸರ್ಕಾರ 144 ಸೆಕ್ಷನ್ ನಡಿ ನಿಷೇಧಾಜ್ಞೆ ಹಾಕಿದೆ. ಆದರೂ ಸರ್ಕಾರದ ಭಾಗವಾದ ಸಚಿವರೇ ಅದನ್ನು ಉಲ್ಲಂಘಿಸಿ ಮೆರವಣಿಗೆ ನಡೆಸುತ್ತಾರೆ ಮತ್ತು ಅವರ ಎದುರೇ ಕಲ್ಲುತೂರಾಟ ನಡೆದಿದೆ, ಅಂಗಡಿ, ವಾಹನಗಳಿಗೆ ಬೆಂಕಿ ಹಾಕಲಾಗಿದೆ. ಜನ ಗುಂಪು ಗುಂಪಾಗಿ ಕತ್ತಿ, ತಲ್ವಾರ್ ಹಿಡಿದು ಓಡಾಡ್ತಾರೆ. ಇಂತಹ ಮೆರವಣಿಗೆಯನ್ನು ಈಶ್ವರಪ್ಪ ಮುಂದೆ ನಿಂತು ನಡೆಸಿದ್ದಾರೆ ಎಂದರೆ ಇದು ನಾಗರೀಕ ಸರ್ಕಾರವ? ಇವತ್ತು ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ, ಆಸ್ತಿ ಪಾಸ್ತಿ ನಷ್ಟವಾಗಿದ್ದರೆ ಅದಕ್ಕೆ ಸಚಿವ ಈಶ್ವರಪ್ಪ ಅವರೇ ಹೊಣೆ” ಎಂದು ನೇರ ಆರೋಪ ಮಾಡಿದ್ದಾರೆ.
ಕಳೆದ ಹದಿನೈದು ದಿನಗಳಿಂದಲೇ ಶಿವಮೊಗ್ಗ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಎರಡು ಕೋಮುಗಳ ನಡುವೆ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇತ್ತು. ನಗರದ ಮೂರು ಕಾಲೇಜು ಸೇರಿದಂತೆ ಜಿಲ್ಲೆಯ ಸಾಗರ, ಶಿಕಾರಿಪುರ ಮತ್ತು ಶಿರಾಳಕೊಪ್ಪ ಸೇರಿದಂತೆ ಹಲವು ಕಡೆ ವಿದ್ಯಾರ್ಥಿಗಳ ಗುಂಪುಗಳ ನಡುವೆ ಸಂಘರ್ಷ, ಹಿಂಸಾಚಾರ ನಡೆದಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸ್ ಲಾಠಿ ಚಾರ್ಜ್ ಕೂಡ ಆಗಿತ್ತು. ಅಂತಹ ಸೂಕ್ಷ್ಮ ಪರಿಸ್ಥಿತಿಯ ನಡುವೆಯೇ ಒಂದು ಕೋಮುವಾದಿ ಸಂಘಟನೆಯ ಕಾರ್ಯಕರ್ತ ಮತ್ತು ಸ್ವತಃ ಹಿಜಾಬ್ ವಿವಾದದ ಸಂದರ್ಭದಲ್ಲಿ ಕೇಸರಿ ಶಾಲು ಹಂಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾದ ಯುವಕನೊಬ್ಬನ ಕೊಲೆಯಾದಾಗ ಅದು ಕೋಮು ಬಣ್ಣ ಪಡೆಯುವುದು ನಿರೀಕ್ಷಿತ. ಆ ಹಿನ್ನೆಲೆಯಲ್ಲಿಯೇ ಘಟನೆ ಬೆಳಕಿಗೆ ಬರುತ್ತಲೇ ನಗರವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.
ಆ ನಿಷೇಧಾಜ್ಞೆಯ ಉದ್ದೇಶವೇ ಯುವಕನ ಸಾವನ್ನು ಮುಂದಿಟ್ಟುಕೊಂಡು ಯಾವುದೇ ಅಹಿತಕರ ಘಟನೆಗಳು ನಡೆಯಬಾರದು, ಕೋಮು ದಳ್ಳುರಿಗೆ ಕಾರಣವಾಗಬಾರದು ಎಂಬುದಾಗಿತ್ತು ಎನ್ನುವುದೇ ಆದರೆ, ಆ ಉದ್ದೇಶವನ್ನೇ ವಿಫಲಗೊಳಿಸಿದ ಸರ್ಕಾರದ ಭಾಗವಾದ ಸಚಿವರು ಮತ್ತು ಸಂಸದರ ವಿರುದ್ಧವಾಗಲೀ ಅಥವಾ ಅವರೊಂದಿಗೆ ಶವಯಾತ್ರೆಯಲ್ಲಿ ಪಾಲ್ಗೊಂಡು ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧವಾಗಲೀ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂಬುದು ಇಡೀ ಪ್ರಕರಣದಲ್ಲಿ ಜಿಲ್ಲಾಡಳಿತದ ವೈಫಲ್ಯಗಳನ್ನು ಸಾರಿ ಹೇಳುತ್ತಿದೆ.
ಹಾಗೇ ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಪ್ರಕರಣದ ಕುರಿತು ತನಿಖೆಗೂ ಮುನ್ನವೇ ತನಿಖೆಯ ಲೀಡಿಂಗ್ (ನಿರ್ದೇಶಿತ) ಹೇಳಿಕೆಗಳನ್ನು ನೀಡುವ ಮೂಲಕ ತಾವೊಬ್ಬ ಗೃಹ ಸಚಿವ ಎಂಬುದನ್ನು ಮರೆತು ಈ ಹಿಂದಿನಂತೆಯೇ ಹಿಂದುತ್ವವಾದಿ ಕಾರ್ಯಕರ್ತರಂತೆ ಮಾತನಾಡುತ್ತಿರುವುದು ಕೂಡ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅದರಲ್ಲೂ ಸ್ವತಃ ತಮ್ಮದೇ ತವರು ಜಿಲ್ಲೆಯಲ್ಲಿ ಮೇಲಿಂದ ಮೇಲೆ ಕೋಮು ವೈಷಮ್ಯ ಮತ್ತು ಸಾಮರಸ್ಯ ಕದಡುವ ಪ್ರಯತ್ನಗಳು ಪರೋಕ್ಷವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಯಬೇಕಾದ ಸರ್ಕಾರ ಮತ್ತು ಸರ್ಕಾರದ ಭಾಗವಾದವರಿಂದಲೇ ನಡೆಯುತ್ತಿರುವುದು ಮಲೆನಾಡಿಗರಲ್ಲಿ ಆತಂಕ ಮೂಡಿಸಿದೆ. ನಾಳೆಯ ದಿನಗಳ ಬಗ್ಗೆ ಜನಸಾಮಾನ್ಯರು ಚಿಂತೆಗೀಡಾಗಿದ್ದಾರೆ!