ಮಲೆನಾಡಿನಾದ್ಯಂತ ಕಳೆದ 48 ಗಂಟೆಗಳಿಂದ ಎಡಬಿಡದೆ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು, ಉಡುಪಿ, ಮಡಿಕೇರಿ, ದಕ್ಷಿಣ ಕನ್ನಡ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಜನಜೀವನ ಅಸ್ತವ್ಯವಸ್ಥವಾಗಿದೆ.
ಭತ್ತದ ನಾಟಿ ಸಂದರ್ಭದಲ್ಲಿಯೇ ಭೀಕರ ಮಳೆಯಾಗಿರುವುದರಿಂದ ಮಲೆನಾಡಿನಾದ್ಯಂತ ಹೊಸದಾಗಿ ನಾಟಿ ಮಾಡಿದ ಲಕ್ಷಾಂತರ ಎಕರೆ ಭತ್ತದ ಗದ್ದೆಗಳು ಜಲಾವೃತವಾಗಿವೆ.
ಅಲ್ಲಲ್ಲಿ ಹೆದ್ದಾರಿ ಕುಸಿತ, ಕೆರೆ ಕಟ್ಟೆ ಒಡೆದಿರುವುದು, ಸಂಪರ್ಕ ರಸ್ತೆಗಳು ಕೊಚ್ಚಿಕೊಂಡು ಹೋಗಿರುವುದು, ಮನೆ ಕುಸಿತ ಮುಂತಾದ ಅನಾಹುತಗಳು ವರದಿಯಾಗಿವೆ.
ಉ.ಕ, ದ.ಕ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತಿತರ ಮಲೆನಾಡು ಪ್ರದೇಶಗಳಲ್ಲಿ ಎಲ್ಲೊ ಅಲರ್ಟ್ ಘೋಷಿಸಲಾಗಿದೆ. ಜು.27ರವರೆಗೆ ಭೀಕರ ಮಳೆ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.