ಶಿವಮೊಗ್ಗ: ಸೋಗಾನೆಯಲ್ಲಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು(Shivamogga Airport) ಸೋಮವಾರ ಪ್ರಧಾನಮಂತ್ರಿ(Prime Minister) ನರೇಂದ್ರ ಮೋದಿ(Narendra Modi) ಉದ್ಘಾಟಿಸಲಿದ್ದು, ಕ್ಷಣಗಣನೆ ಆರಂಭವಾಗಿದೆ.
ಬೆಳಿಗ್ಗೆ 11.30ಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.
ಪ್ರಧಾನಿ ಅವರ ಕಾರ್ಯಕ್ರಮಕ್ಕೆ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ಮುಂಭಾಗದಲ್ಲಿ ಸಜ್ಜುಗೊಂಡಿರುವ ಬೃಹತ್ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ.

1 ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಭದ್ರತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬೆಳಿಗ್ಗೆ 10 ಗಂಟೆಯೊಳಗೆ ಕಾರ್ಯಕ್ರಮದ ಸ್ಥಳಕ್ಕೆ ಬರಲು ಜಿಲ್ಲಾಡಳಿತ ಸೂಚಿಸಿದೆ. ಹೀಗಾಗಿ ಮುಂಜಾನೆಯಿಂದಲೇ ಶಿವಮೊಗ್ಗ, ಭದ್ರಾವತಿ, ನರಸಿಂಹರಾಜಪುರ ಭಾಗದಿಂದ ಸೋಗಾನೆಯತ್ತ ವಾಹನಗಳು ಸಾಲುಗಟ್ಟಿವೆ.
ಕಾರ್ಯಕ್ರಮಕ್ಕೆ ಬರುವವರಿಗೆ ಸಮಾರಂಭದ ಸ್ಥಳದ ಆಸುಪಾಸಿನಲ್ಲಿ ವಾಹನ ನಿಲುಗಡೆಗೆ ಪಾರ್ಕಿಂಗ್ ಸ್ಥಳ ನಿಗದಿಗೊಳಿಸಲಾಗಿದೆ. 200 ಕೌಂಟರ್’ಗಳಲ್ಲಿ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿದೆ.
ಹೆಜ್ಜೆ ಹೆಜ್ಜೆಗೂ ನಿಂತಿರುವ ಪೊಲೀಸರು ಸಂಚಾರ ವ್ಯವಸ್ಥೆ ನಿಭಾಯಿಸುತ್ತಿದ್ದಾರೆ.
ಕಾರ್ಯಕ್ರಮ ಜಿಲ್ಲಾಡಳಿತ ಆಯೋಜಿಸಿದ್ದರೂ ಇಡೀ ನಗರ ಕೇಸರಿಮಯವಾಗಿ ಮಾರ್ಪಟ್ಟಿದೆ. ಬಿಜೆಪಿಯ ಧ್ವಜಗಳು, ನಾಯಕರ ಕಟೌಟ್, ಫ್ಲೆಕ್ಸ್’ಗಳು ರಾರಾಜಿಸುತ್ತಿವೆ. ಇಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ 80ನೇ ಜನ್ಮದಿನವಾಗಿದ್ದು, ಅವರಿಗೆ ಶುಭಾಶಯ ಕೋರುವ ಫ್ಲೆಕ್ಸ್’ಗಳು ರಸ್ತೆಯ ನಡುವೆ ಕಾಣ ಸಿಗುತ್ತಿವೆ.