2014ರಲ್ಲಿ ನಡೆದ ಸುನಂದ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಸಂಸದ ಶಶಿ ತರೂರ್ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಶಿ ತರೂರ್ ಅವರು, ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕ್ರೌರ್ಯ ಮೆರೆದ ಅರೋಪವನ್ನು ಎದುರಿಸುತ್ತಿದ್ದರು.
ಜನವರಿ 17, 2014ರಲ್ಲಿ ದೆಹಲಿಯ ಐಶಾರಾಮಿ ಹೋಟೆಲ್ ಒಂದರ ಕೋಣೆಯಲ್ಲಿ ಸುನಂದ ಪುಷ್ಕರ್ ಅವರ ಮೃತದೇಹ ಪತ್ತೆಯಾಗಿತ್ತು. ಸಂಸದರ ನಿವಾಸದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣಕ್ಕೆ ಸುನಂದ ಅವರು ಖಾಸಗಿ ಹೋಟೆಲ್’ನಲ್ಲಿ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ಅವರ ಸಾವಾಗಿದ್ದು, ಇದರ ಆರೋಪ ನೇರವಾಗಿ ಶಶಿ ತರೂರ್ ಅವರ ಮೇಲೆ ಮಾಡಲಾಗಿತ್ತು.
ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ, ಶಶಿ ತರೂರ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ. ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಶಶಿ ತರೂರ್, “ತುಂಬಾ ಧನ್ಯವಾದಗಳು. ಕಳೆದ ಏಳೂವರೆ ವರ್ಷಗಳು ಜೀವನದ ಅತ್ಯಂತ ಕ್ರೂರ ಸಮಯವಾಗಿತ್ತು. ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ,” ಎಂದು ಹೇಳಿದ್ದಾರೆ.
“ಈಗ ನನ್ನ ಕುಟುಂಬ ನೆಮ್ಮದಿಯಿಂದ ಸುನಂದ ಅವರ ಆತ್ಮಕ್ಕೆ ಶಾಂತಿ ಲಭಿಸಲೆಂದು ಪ್ರಾರ್ಥಿಸಬಹುದು. ನನ್ನ ಜೀವನದ ಅತ್ಯಂತ ಕೆಟ್ಟ ದಿನಗಳಿಗೆ ಮಹತ್ತರವಾದ ಅಂತ್ಯ ಸಿಕ್ಕಿದೆ. ಹಲವು ಆರೋಪಗಳನ್ನು, ಮಾಧ್ಯಮಗಳ ಅಪವಾದವನ್ನು ಮೌನದಿಂದ ಸಹಿಸಿಕೊಂಡು ಬಂದಿದ್ದೆ. ನ್ಯಾಯಾಂಗದ ಮೇಲೆ ನನ್ನ ನಂಬಿಕೆ ಇರಿಸಿಕೊಂಡಿದ್ದೆ. ನನ್ನ ನಂಬಿಕೆ ಇಂದು ನಿಜವಾಗಿದೆ,” ಎಂದಿದ್ದಾರೆ.
ಮುಂದುವರೆದು, ಈಗಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಚಾರಣೆಯ ಅವಧಿಯು ಕೂಡಾ ಶಿಕ್ಷೆಯಂತೆ ಭಾಸವಾಗುತ್ತದೆ, ಎಂದಿದ್ದಾರೆ.
ತಮ್ಮ ಮೇಲಿನ ಆರೋಪಗಳನ್ನು ರದ್ದುಪಡಿಸಬೇಕೆಂದು ಕೊರ್ಟ್ ಮೊರೆ ಹೋಗಿದ್ದ ಶಶಿ ತರೂರ್, ಸುನಂದ ಪುಷ್ಕರ್ ಅವರ ಸಾವು ಆತ್ಮಹತ್ಯೆಯೂ ಅಲ್ಲ ಅಥವಾ ಕೊಲೆಯೂ ಅಲ್ಲ. ಅದೊಂದು ಆಕಸ್ಮಿಕವಾಗಿ ನಡೆದಂತಹ ಸಾವು. ಇದನ್ನು ಅಪಘಾತದಂತೆ ಭಾವಿಸಬೇಕು. ಸಾವಿನ ಸಂದರ್ಭದಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಯಿಂದ ಸುನಂದ ಅವರು ನರಳುತ್ತಿದ್ದರು, ಎಂದು ಹೇಳಿದ್ದರು.
ಇದರ ಹೊರತಾಗಿ, ಒಂದೇ ಒಂದು ಸಾಕ್ಷಿಯೂ ವರದಕ್ಷಿಣೆ, ಕಿರುಕುಳ ಹಾಗೂ ಕ್ರೌರ್ಯಕ್ಕೆ ಸಂಬಂಧಪಟ್ಟಂತೆ ಹೇಳಿಕೆಯನ್ನು ನೀಡಿಲ್ಲ, ಎಂದು ತರೂರ್ ಪರ ವಕೀಲ ವಿಕಾಸ್ ಪಹ್ವಾ ಅವರು ವಾದಿಸಿದ್ದರು.
ಸುನಂದ ಅವರು ಸಾವನ್ನಪ್ಪಿದಾಗ ಮೊದಲು ಅವರಿಗೆ ವಿಷ ನೀಡಲಾಗಿತ್ತು ಎಂದು ಪೊಲೀಸರು ಹೇಳಿದ್ದರು. ಆ ನಂತರ ಯಾವುದೇ ಸಂಶಯಾಸ್ಪದ ವ್ಯಕ್ತಿಗಳ ಹೆಸರು ಹೇಳದೇ ಕೊಲೆ ಪ್ರಕರಣವನ್ನು ದಾಖಲಿಸಲಾಗಿತ್ತು. ಈಗ ಎಲ್ಲಾ ರೀತಿಯ ಆರೋಪಗಳಿಂದ ತರೂರ್ ಅವರು ಮುಕ್ತರಾಗಿದ್ದಾರೆ.
ಈ ಪ್ರಕರಣ ರಾಜಕೀಯ ದಾಳವಾಗಿಯೂ ಹಲವು ಬಾರಿ ಬಳಕೆಯಾಗಿದೆ. ಪ್ರತಿಪಕ್ಷಗಳು ಸುನಂದ ಅವರ ಸಾವಿನ ಪ್ರಕರಣವನ್ನು ತರೂರ್ ವಿರುದ್ದ ರಾಜಕೀಯವಾಗಿ ಬಳಸಿ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವನ್ನೂ ಮಾಡಿದ್ದವು.