ಬೆಂಗಳೂರು : ತೀವ್ರ ಚರ್ಚಿತವಾಗಿರುವ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವ ಹೊತ್ತಿನಲ್ಲಿಯೇ ಡಿಸಿಎಂ ಡಿಕೆ ಶಿವಕುಮಾರ್ ಯೋಜನೆ ಜಾರಿಯ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಕರಾವಳಿ ಉತ್ಸವದಲ್ಲಿ ಭಾಗಿಯಾಗಲು ಕಾರವಾರಕ್ಕೆ ಆಗಮಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ವೇಳೆ “ನಾನು ಈ ಹಿಂದೆ ಇಂಧನ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೆ ಆಗ ಜರ್ಮನಿ ಹಾಗೂ ಸ್ವಿಜರ್ಲ್ಯಾಂಡ್‌ಗಳಿಗೆ ತೆರಳಿ ಈ ರೀತಿಯ ಯೋಜನೆಯ ಬಗ್ಗೆ ನೋಡಿಕೊಂಡು ಬಂದಿರುವೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಯಾರಿಗೂ ತೊಂದರೆಯಿಲ್ಲ. ಕೇವಲ 100-200 ಎಕರೆ ಜಮೀನಿನಲ್ಲಿ ಈ ಯೋಜನೆ ನಡೆಯಲಿದ್ದು, ಇದಕ್ಕಾಗಿ 20 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ. ಶರಾವತಿಯಿಂದ ಪಂಪ್ ಮಾಡಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಅಲ್ಲಿಂದ ಈಗ ಮಾಡುತ್ತಿರುವ ಪ್ರಮಾಣದಷ್ಟೇ ವಿದ್ಯುತ್ ಉತ್ಪಾದನೆಯಾಗಲಿದೆ. ಶರಾವತಿ ಯೋಜನೆ ರಾಜ್ಯಕ್ಕೆ ದೊಡ್ಡ ಆಸ್ತಿಯಾಗುತ್ತದೆ. ಇದಕ್ಕೆ ವಿರೋಧ ಮಾಡುವ ಅವಶ್ಯಕತೆಯಿಲ್ಲ ಎಂದು ಹೇಳಿದ್ದಾರೆ.
ಪ್ರಮುಖವಾಗಿ ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಕೈಗೊಳ್ಳಲಾಗುತ್ತಿದೆ. ಶರಾವತಿ ನದಿಗೆ ಅಡ್ಡಲಾಗಿ ತಲಕಳಲೆ ಡ್ಯಾಮ್ ಇದೆ. ಇಲ್ಲಿ 0.51 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇದೆ. ಹಾಗೆಯೇ, ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯ ಇದೆ. ಇಲ್ಲಿ ಹೆಚ್ಚುವರಿಯಾಗುವ ವಿದ್ಯುತ್ ಬಳಸಿಕೊಂಡು 0.51 ಟಿಎಂಸಿ ನೀರನ್ನು ಎತ್ತರ ಪ್ರದೇಶದಲ್ಲಿರುವ ತಲಕಳಲೆ ಡ್ಯಾಮ್ಗೆ ಹರಿಯಿಸಲಾಗುತ್ತದೆ.
2,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ..
ಗೇರುಸೊಪ್ಪದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆ ಆದಾಗ ತಲಕಳಲೆ ಡ್ಯಾಮ್ನಿಂದ ನೀರನ್ನು ಗೇರುಸೊಪ್ಪ ಜಲಾಶಯಕ್ಕೆ ಹರಿಸುವ ಬಹು ನಿರೀಕ್ಷಿತ ಯೋಜನೆಯಾಗಿದೆ. ಈ ಪ್ರಕ್ರಿಯೆಯಲ್ಲಿ 2,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಗೇರುಸೊಪ್ಪದಿಂದ ತಲಕಳಲೆಗೆ ನೀರು ಹರಿಸಲು 2,500 ಮೆಗಾವ್ಯಾಟ್ ವಿದ್ಯುತ್ ಬೇಕಾಗುತ್ತದೆ. ವಾಪಸ್ ಹರಿಸಿದಾಗ 2,000 ಮೆ.ವ್ಯಾ. ವಿದ್ಯುತ್ ಶಕ್ತಿ ತಯಾರಾಗುತ್ತದೆ. ಇಲ್ಲಿ ವಿದ್ಯುತ್ ಸಂಗ್ರಹ ವ್ಯವಸ್ಥೆ ನಿರ್ಮಾಣವಾಗುತ್ತದೆ ಎಂಬುದು ಗಮನಾರ್ಹ. ಇನ್ನೂ ಇದಕ್ಕೆ ಸಂಬಂಧಿಸಿದಂತೆ ಪಂಪ್ಡ್ ಸ್ಟೋರೇಜ್ ಯೋಜನಾ ಸ್ಥಳ ಪರಿಶೀಲನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸದಸ್ಯರಾದ ಡಾ. ಹರಿಶಂಕರ್ ಸಿಂಗ್, ರಮಣ್ ಸುಕುಮಾರ್ ಮತ್ತು ಐಜಿಎಫ್ ( ರಾಷ್ಟ್ರೀಯ ಹುಲಿ ಪ್ರಾಧಿಕಾರ ) ಸಿ.ಎಂ. ಶಿವಕುಮಾರ್ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಯೋಜನೆ ಕೈಗೆತ್ತಿಕೊಳ್ಳಲು ಕಟಿಬದ್ಧವಾಗಿರುವ ರಾಜ್ಯ ಸರ್ಕಾರವು ವನ್ಯ ಜೀವಿಗಳ ಸಂರಕ್ಷಣಾ ನಿಯಮಗಳ ಚೌಕಟ್ಟಿಗೆ ಅನುಮೋದನೆ ನೀಡಿರುವ ಪರಿಣಾಮ ಈ ಮಂಡಳಿಯಿಂದ ಸ್ಥಳ ಪರಿಶೀಲನೆ ಸಾಧ್ಯವಾಗಿದೆ.
ಈ ಮಹತ್ವದ ಯೋಜನೆಗೆ 352 ಎಕರೆ ಭೂಮಿಯ ಅಗತ್ಯತೆಯಿದ್ದು, 131 ಎಕರೆ ಭೂಮಿಯು ಮೀಸಲು ಅರಣ್ಯ ಪ್ರದೇಶದ ವ್ಯಾಪ್ರಿಯಲ್ಲಿ ಬರುತ್ತದೆ. ಹೀಗಾಗಿ ಇದಕ್ಕೆ ರಾಜ್ಯ ಹಾಗೂ ಕೇಂದ್ರ ವನ್ಯಜೀವಿ ಮಂಡಳಿಯ ಅನುಮೋದನೆ ನೀಡಬೇಕಾಗುತ್ತದೆ. ಕೆಪಿಸಿಎಲ್ ಪ್ರಕಾರ 54.155 ಹೆಕ್ಟೆರ್ ಅರಣ್ಯಭೂಮಿ ಪೈಕಿ ಭೂಮಿಯ ಒಳಭಾಗದಲ್ಲಿ 19.982 ಹೆಕ್ಟೆರ್ ಬರುತ್ತದೆ. ಮೇಲ್ಮೈನಲ್ಲಿ 43.173 ಹೆಕ್ಟೆರ್ ಮಾತ್ರ ಬಳಸಿಕೊಳ್ಳಲಾಗುತ್ತದೆ. ಆದರೆ ಇದೇ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಸಿಂಗಳೀಕ ಅಭಯಾರಣ್ಯದಲ್ಲಿನ 16 ಸಾವಿರ ಮರಗಳಿಗೆ ಕೊಡಲಿ ಏಟು ಬೀಳುತ್ತದೆ ಎಂದು ಪರಿಸರವಾದಿಗಳು, ಪ್ರಗತಿಪರರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಮುಖ್ಯವಾಗಿ ಇದರಿಂದ ಜನಜೀವನ, ಪರಿಸರ, ವನ್ಯಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಮಾರ್ಗಸೂಚಿ ಅನ್ವಯವೇ ಯೋಜನೆ ಜಾರಿ ಮಾಡಲಾಗುತ್ತಿದೆ. ಪ್ರಸ್ತುತ ಇರುವ ಶರಾವತಿ ಜಲವಿದ್ಯುತ್ ಯೋಜನೆ ವ್ಯಾಪ್ತಿಯೊಳಗಡೆಯೇ ಈ ಯೋಜನೆಯೂ ಬರುತ್ತದೆ. ನೂತನ ಜಲಾಶಯಗಳ ನಿರ್ಮಾಣ ಅವಶ್ಯಕತೆ ಇಲ್ಲದ್ದರಿಂದ ನದಿಯ ಹರಿವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪರಿಸರ ಸೂಕ್ಷ್ಮ ಪ್ರದೇಶದ ಮೇಲೆ ಪ್ರತಿಕೂಲ ಪರಿಣಾಮದ ಪ್ರಶ್ನೆಯೇ ಬರುವುದಿಲ್ಲ. ಕೇಂದ್ರ ವಿದ್ಯುತ್ ಪ್ರಾಧಿಕಾರ ಈ ಯೋಜನೆಗೆ ಅನುಮತಿ ನೀಡುವ ಮೊದಲೇ 13 ನಿರ್ದೇಶನಾಲಯಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡಿತ್ತು.
ವದಂತಿಗಳನ್ನು ನಂಬಬೇಡಿ ಎಂದಿದ್ದ ಜಾರ್ಜ್..
ಇನ್ನೂ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಇಂಧನ ಭವಿಷ್ಯವಾಗಿದೆ. ಇದರಿಂದ ಪಶ್ಚಿಮಘಟ್ಟದ ಪರಿಸರ ನಾಶವಾಗುತ್ತದೆ ಎಂಬ ವದಂತಿಗಳನ್ನು ನಂಬದೆ ಯೋಜನೆಗೆ ಸಹಕರಿಸುವಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ ರಾಜ್ಯದ ಜನರಲ್ಲಿ ಕಳೆದ ಕೆಲ ಹಿಂದಷ್ಟೇ ಮನವಿ ಮಾಡಿದ್ದರು.
ಅಲ್ಲದೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಪರಿಸಕ್ಕೆ ಹಾನಿ ಇಲ್ಲ. ಅಲ್ಲಿ ಈಗಾಗಲೇ ಇರುವ ಎರಡು ಜಲಾಶಯಗಳನ್ನು ಬಳಸಿಕೊಂಡು ಯೋಜನೆ ಜಾರಿಗೊಳಿಸಲಾಗುತ್ತದೆ. ಹೊಸ ಜಲಾಶಯ ನಿರ್ಮಿಸುವ ಅಗತ್ಯ ಇಲ್ಲ. ಜತೆಗೆ, ಮೂಲ ಸೌಕರ್ಯವೂ ಲಭ್ಯವಿರುವುದರಿಂದ ಹೆಚ್ಚುವರಿ ಭೂಮಿಯ ಅವಶ್ಯಕತೆ ಇಲ್ಲ. ಯೋಜನೆಗೆ ಎಷ್ಟು ಅರಣ್ಯಭೂಮಿ ಬಳಸಿಕೊಳ್ಳಲಾಗುತ್ತದೆಯೋ ಅದಕ್ಕೆ ಪರ್ಯಾಯವಾಗಿ ಬೇರೆ ಕಡೆ ಅರಣ್ಯೀಕರಣಕ್ಕೆ ಭೂಮಿಯನ್ನು ನೀಡಲಾಗುತ್ತದೆ ಎಂದು ಹೇಳಿದ್ದರು.
ಅದೇ ರೀತಿ ಸ್ವಾಧೀನಪಡಿಸಿಕೊಂಡ ಖಾಸಗಿ ಭೂಮಿಗೂ ಸೂಕ್ತ ಪರಿಹಾರ ವಿತರಿಸಲಾಗುತ್ತದೆ ಎಂದು ತಿಳಿಸಿದ್ದರು. ಈ ಯೋಜನೆಯಿಂದ ಪರಿಸರ ನಾಶವಾಗುತ್ತದೆ, ಸಮುದ್ರದ ಉಪ್ಪು ನೀರು ನದಿಗೆ ಸೇರುತ್ತದೆ, ವ್ಯಜೀವಿಗಳು ನಾಶವಾಗುತ್ತವೆ ಎಂದು ಆ ಭಾಗದ ಜನರಲ್ಲಿ ಕೆಲವರು ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಆದರೆ, ಪರಿಸರದ ಮಲೆ ಅಂತಹ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ಯೋಜನೆ ಅನುಷ್ಠಾನಗೊಂಡ ಬಳಿಕ ಆರಂಭದಲ್ಲಿ ಒಂದು ಬಾರಿ 0.37 ಟಿಎಂಸಿ ನೀರನ್ನು ಪಡೆದುಕೊಂಡು ಅದನ್ನೇ ಪಂಪಿಂಗ್ ಮೂಲಕ ಮರುಬಳಕೆ ಮಾಡಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಉಳಿದಂತೆ ಹೆಚ್ಚುವರಿ ನೀರು ಬಳಸುವುದಿಲ್ಲ ಎಂದಿದ್ದರು.
ಇದರಿಂದಾಗಿ ಶರಾವತಿ ನದಿಯಲ್ಲಿ ಈಗಿರುವ ನೀರಿನ ಹರಿವಿನಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಹೀಗಾಗಿ ಯೋಜನೆ ಜಾರಿಯಾದರೆ ಸಮುದ್ರದ ಉಪ್ಪು ನೀರು ನದಿ ಸೇರುತ್ತದೆ ಎಂಬುದು ತಪ್ಪು ಕಲ್ಪನೆ ಎಂದು ಸಚಿವ ಜಾರ್ಜ್ ಯೋಜನೆಯಿಂದ ಹಾನಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಇದೀಗ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಇದ್ದ ಎಲ್ಲ ಅಡಚಣೆಗಳು ಒಂದೊಂದಾಗಿ ನಿವಾರಣೆಯಾಗುತ್ತಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರ ಕಾಮಗಾರಿ ಪ್ರಾರಂಭಿಸುವ ಸುಳಿವನ್ನು ಡಿಕೆ ಶಿವಕುಮಾರ್ ನೀಡಿದ್ದಾರೆ.











