ಮಲೆನಾಡಿನಲ್ಲಿ ಒಂದು ಕಡೆ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಗಳ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳಿಗೆ ಇನ್ನಿಲ್ಲದ ಜನಪರ ಕಾಳಜಿ ಉಕ್ಕಿ ಹರಿಯತೊಡಗಿದೆ. ಮತ್ತೊಂದು ಕಡೆ ಅಭಯಾರಣ್ಯ, ಮೀಸಲು ಅರಣ್ಯದ ಹೆಸರಿನಲ್ಲಿ ಅರಣ್ಯ ಇಲಾಖೆ ಬಡ ರೈತರ ಬದುಕಿನ ಮೇಲೆ ಗರಗಸವಿಡತೊಡಗಿದೆ.
ಅದರಲ್ಲೂ ಜನ ವಿರೋಧಿ ಅರಣ್ಯ ಕಾಯ್ದೆಗಳು ಮತ್ತು ತಲೆಮಾರುಗಳು ಮುಳುಗಡೆ ಸಂತ್ರಸ್ತರ ನಡುವಿನ ಸಂಘರ್ಷದ ನೆಲೆಯಾಗಿರುವ ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆಯಲ್ಲಿ ಇದೀಗ ಸಂಘರ್ಷ ತಾರಕಕ್ಕೇರಿದೆ.
ಒಂದು ಕಡೆ ಅರಣ್ಯ ಇಲಾಖೆಯ ಅಭಯಾರಣ್ಯ, ಮೀಸಲು ಅರಣ್ಯ, ಡೀಮ್ಡ್ ಫಾರೆಸ್ಟ್ ಮತ್ತಿತರ ಕಾನೂನುಗಳ ಕಾರಣದಿಂದಾಗಿ ವಿದ್ಯುತ್, ರಸ್ತೆ, ಶಾಲೆ ಮತ್ತು ಮೊಬೈಲ್ ನೆಟ್ವರ್ಕ್ ನಂತಹ ಮೂಲಭೂತ ಸೌಕರ್ಯಗಳಿಂದಲೇ ವಂಚಿತವಾಗಿರುವ ನೂರಾರು ಹಳ್ಳಿಗಳಿರುವ ಶರಾವತಿ ನದಿ ಕಣಿವೆಯಲ್ಲಿ ಇದೀಗ, ‘ನೋ ನೆಟ್ವರ್ಕ್, ನೋ ವೋಟಿಂಗ್’ ಅಭಿಯಾನ ಕಾವೇರಿದೆ. ಮತ್ತೊಂದು ಕಡೆ, ಅದೇ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಅದೇ ಶರಾವತಿ ಕಣಿವೆಯಲ್ಲಿ ನೂರಾರು ವರ್ಷಗಳಿಂದ ಬದುಕು ನಡೆಸುತ್ತಿರುವ ಬಡಪಾಯಿ ರೈತರ ಮೇಲೆ ಪ್ರಹಾರ ಆರಂಭಿಸಿದ್ದಾರೆ.
ತಾಲೂಕು ಕೇಂದ್ರ ಸಾಗರದಿಂದ ಸುಮಾರು 70-80 ಕಿ.ಮೀ ದೂರದಲ್ಲಿರುವ ದಟ್ಟ ಕಾಡಿನ ನಡುವಿನ ಈ ಕುಗ್ರಾಮಗಳಲ್ಲಿ ದಿಢೀರನೇ, ಯಾವುದೇ ತೆರವು ನೋಟೀಸ್ ನೀಡದೆ, ಎಚ್ಚರಿಕೆ ನೀಡದೆ, ಮಾಹಿತಿ ನೀಡದೆ, ಪೊಲೀಸರನ್ನು ಕರೆದುಕೊಂಡು ಒಂಟಿ ಮನೆಗಳ ರೈತರ ಮೇಲೆ ದಾಳಿ ನಡೆಸಲಾಗುತ್ತಿದೆ. ಒಂಟಿ ಮನೆಯ ಸುತ್ತಮುತ್ತ ಒಂದೆರಡು ಎಕರೆ ಜಮೀನು ಸಾಗುವಳಿ ಮಾಡಿಕೊಂಡು ಕನಿಷ್ಟ 60-70 ವರ್ಷಗಳಿಂದ ಬದುಕುತ್ತಿರುವ ಕುಟುಂಬಗಳನ್ನೇ ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು, ದಾಳಿ ನಡೆಸಿ ಅವರ ಅಡಿಕೆ ತೋಟ, ಬಾಳೆ ತೋಟಗಳನ್ನು ಕಡಿದು ನಾಶ ಮಾಡಲಾಗುತ್ತಿದೆ. ಜೊತೆಗೆ, ಬೆಳೆ ನಾಶ ತಡೆಯಲು ಬಂದ ಅವರ ಮೇಲೆ ಪೊಲೀಸರನ್ನು ಬಿಟ್ಟು ಹೆದರಿಸಲಾಗುತ್ತಿದೆ.
ಕಳೆದ ಹದಿನೈದು ದಿನಗಳಲ್ಲಿ ಭಾನುಕುಳಿ ಪಂಚಾಯ್ತಿ ವ್ಯಾಪ್ತಿಯ ಕಣಪಗಾರು ಮತ್ತು ಆಸುಪಾಸಿನ ಕುಗ್ರಾಮಗಳಲ್ಲೇ ಇಂತಹ ಮೂರ್ನಾಲ್ಕು ಪ್ರಕರಣಗಳು ನಡೆದಿವೆ. ಕಣಪಗಾರು ಹಳ್ಳಿಯ ಬೋಳಪ್ಪ ಮತ್ತು ನಾರಾಯಣಪ್ಪ ಲಚ್ಚಮ್ಮಯ್ಯ ಎಂಬುವರ ಮನೆಗಳ ಮೇಲೆ ನಾಲ್ಕಾರು ದಿನಗಳ ಅಂತರದಲ್ಲಿ ದಾಳಿ ನಡೆಸಿದ ಕಾರ್ಗಲ್ ವನ್ಯಜೀವಿ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಆ ರೈತರಿಗೆ ಯಾವುದೇ ನೋಟೀಸ್ ಕೊಡದೆ, ಅವರಿಗೆ ಮಂಜೂರಾದ ಕಂದಾಯ ಜಮೀನಿನಲ್ಲಿ ಬೆಳೆದಿದ್ದ ತಲಾ ನೂರಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಾರೆ. ಒಂದು, ಎರಡು ಎಕರೆ ಜಮೀನು ಹೊಂದಿರುವ ಈ ಕಡುಬಡವರು, ನಾಲ್ಕೈದು ವರ್ಷಗಳ ಹಿಂದೆ, ತಲೆಮಾರುಗಳಿಂದ ತಮ್ಮ ಸ್ವಾಧೀನದಲ್ಲಿರುವ ಜಮೀನಿನಲ್ಲಿ ಅಡಿಕೆ ನೆಟ್ಟು ಬೆಳೆಸಿದ್ದರು. ಆದರೆ, ಇದೀಗ ಇಲಾಖೆಯವರು ದಿಢೀರನೇ ನುಗ್ಗಿ ತೋಟ ನಾಶ ಮಾಡಿದ್ದಾರೆ. ಜೊತೆಗೆ ಆ ಕೃತ್ಯವನ್ನು ತಡೆಯಲು ಹೋದ ತಮ್ಮ ಮೇಲೆ ಕೇಸು ಹಾಕಿ ಜೈಲಿಗೆ ಕಳಿಸುವ ಬೆದರಿಕೆ ಹಾಕಿದ್ದಾರೆ ಎಂದು ರೈತರು ಗೋಳಿಟ್ಟಿದ್ದಾರೆ.
ಕೆಲವು ದಿನಗಳ ಹಿಂದೆ ಅದೇ ಗ್ರಾಮದ ದೇವೇಂದ್ರ ಎಂಬ ಅಮಾಯಕ ರೈತನ ಜಮೀನಿನ ಮೇಲೆ ಕೂಡ ಹೀಗೆ ದಾಳಿ ಮಾಡಿದ್ದ ವನ್ಯಜೀವಿ ವಲಯದವರು, ರೈತರನ್ನು ಹೆದರಿಸಿ ಬೆದರಿಸಿ, ಅವರು ನೆಟ್ಟಿದ್ದ ಹೊಸ ಅಡಿಕೆ ತೋಟದ ಸಸಿಗಳನ್ನು ಪೂರ್ತಿಯಾಗಿ ಅವರಿಂದಲೇ ಕೀಳಿಸಿ ಹಾಕಿ ಹೋಗಿದ್ದರು. ಜೊತೆಗೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ನಿಮ್ಮ ಮನೆಮಠ ಎಲ್ಲವನ್ನೂ ಕೆಡವಿ, ಇಲ್ಲಿಂದಲೇ ನಿಮ್ಮನ್ನು ಎತ್ತಂಗಡಿ ಮಾಡುತ್ತೇವೆ ಎಂದು ಬೆದರಿಸಿ ಹೋಗಿದ್ದರು ಎಂದು ರೈತರು ನೋವು ತೋಡಿಕೊಂಡಿದ್ದಾರೆ.
ಕಣಪಗಾರು, ಉರುಳುಗಲ್ಲು, ಚೀಕನಹಳ್ಳಿ, ಸಾಲ್ಕೊಡ್ಲು, ಹೆಬ್ಬಯ್ಯನಕೆರೆ ಸೇರಿದಂತೆ ಕೇವಲ ಭಾನುಕುಳಿ ಪಂಚಾಯ್ತಿ ವ್ಯಾಪ್ತಿಯೊಂದರಲ್ಲೇ ಏಳೆಂಟು ಕುಗ್ರಾಮಗಳಲ್ಲಿ ಬಹುತೇಕ ಶರಾವತಿ ನದಿಯ ಮೊದಲ ಅಣೆಕಟ್ಟು ಹಿರೇಭಾಸ್ಕರದಲ್ಲಿ ಮುಳುಗಡೆಯಾದವರು, ಆ ಬಳಿಕ ಮತ್ತೆ ಎರಡನೇ ಅಣೆಕಟ್ಟು ಲಿಂಗನಮಕ್ಕಿಯಲ್ಲಿ ಮುಳುಗಡೆಯಾಗಿ ಎತ್ತಂಗಡಿಯಾದವರೇ ಹೆಚ್ಚಿದ್ದಾರೆ. ಅವರಿಗೆ ಇಂದಿಗೂ ಬಹುತೇಕ ಒಂದು ಶತಮಾನದಿಂದ ಸಾಗುವಳಿ ಮಾಡುತ್ತಿರುವ ಭೂಮಿಯ ಹಕ್ಕು ಸಿಕ್ಕಿಲ್ಲ. ಮನೆ ಕಟ್ಟಲು ಕೂಡ ಇದೀಗ ವನ್ಯಜೀವಿ ವಲಯ ಅಧಿಕಾರಿಗಳು ಬಿಡುತ್ತಿಲ್ಲ. ರಸ್ತೆಯಂತೂ ಇಲ್ಲವೇ ಇಲ್ಲ. ವಿದ್ಯುತ್ ಇಲ್ಲ. ಮೊಬೈಲ್ ನೆಟ್ವರ್ಕ್ ಇಲ್ಲ. ಅಂಗನವಾಡಿ, ಶಾಲೆ ಇಲ್ಲ. ಆಸ್ಪತ್ರೆ ಸೌಲಭ್ಯವಿಲ್ಲ.
ಹೀಗೆ “ಇಂದಿಗೂ ಇತರೆ ಮುಂದುವರಿದ ಗ್ರಾಮಗಳಿಗೆ ಹೋಲಿಸಿದರೆ ಸರಿಸುಮಾರು ಒಂದು ಶತಮಾನ ಕಾಲ ಹಿಂದುಳಿದ ಸ್ಥಿತಿಯಲ್ಲೇ ಅಂಗೈ ಅಗಲದ ಜಾಗದಲ್ಲಿ ಭತ್ತ, ಅಡಿಕೆ ಬೆಳೆದುಕೊಂಡು ಬದುಕು ಸಾಗಿಸುತ್ತಿರುವ, ನಾಡಿಗೆ ಬೆಳಕು ಕೊಡಲು ಬದುಕು ತ್ಯಾಗ ಮಾಡಿದ ಆ ಅಮಾಯಕರ ಮೇಲೆ ನಿರಂತರವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ. ಅಲ್ಲಿನ ಜನರಿಗೆ ಯಾವುದೇ ಮೂಲಸೌಕರ್ಯ ಸಿಗದಂತೆ ಅಡ್ಡಗಾಲು ಹಾಕುತ್ತಿದ್ದಾರೆ. ಇದೀಗ ಇರುವ ತುಂಡು ಭೂಮಿಯ ತೋಟಗಳನ್ನು ಕಡಿದು ರೈತರು ತಾವಾಗಿಯೇ ಬರಿಗೈಯಲ್ಲಿ ಆ ಜಾಗ ತೊರೆದು ಓಡಿಹೋಗುವಂತೆ ಬೆದರಿಸುವ ಅಮಾನುಷ ಕೃತ್ಯವನ್ನು ಇಲಾಖೆ ಮಾಡುತ್ತಿದೆ. ಇಲಾಖೆಯ ಇಂತಹ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ವಿರೋಧಿಸಿ ಸೋಮವಾರ (ಆ.23) ಕಾರ್ಗಲ್ ವನ್ಯಜೀವಿ ವಲಯ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ” ಎಂದು ಭಾನುಕುಳಿ ಪಂಚಾಯ್ತಿ ಅಧ್ಯಕ್ಷ ಸೋಮರಾಜ್ ಜೈನ್ ಹೇಳಿದ್ದಾರೆ.
ರೈತರು ಈಗಾಗಲೇ ವರ್ಷಗಳ ಹಿಂದೆಯೇ ಬಗರ್ ಹುಕುಂ ಅರ್ಜಿ ಸಲ್ಲಿಸಿದ್ದಾರೆ. ಕೆಲವರಿಗೆ ಹತ್ತಾರು ವರ್ಷಗಳ ಹಿಂದೆಯೇ ಬಗರ್ ಹುಕುಂ ಸಾಗುವಳಿ ಚೀಟಿ ಕೂಡ ನೀಡಲಾಗಿದೆ. ಅಲ್ಲದೆ ಅರಣ್ಯ ಹಕ್ಕು ಕಾಯ್ದೆಯಡಿ ಕೂಡ ಸಲ್ಲಿಸಿರುವ ಅರ್ಜಿಗಳು ಇನ್ನೂ ಬಾಕಿ ಇವೆ. ಈ ಎಲ್ಲಾ ವಿಷಯ ತಿಳಿದಿದ್ದರೂ ಜನರನ್ನು ಹೆದರಿಸಿ, ಬೆದರಿಸಿ ಒಕ್ಕಲೆಬ್ಬಿಸುವ ಏಕೈಕ ಉದ್ದೇಶದಿಂದ ವನ್ಯಜೀವಿ ವಲಯದ ಅಧಿಕಾರಿಗಳು ಜನರ ಮೇಲೆ ಹೀಗೆ ದಾಳಿ ನಡೆಸುತ್ತಿದ್ದಾರೆ ಎಂಬುದು ಅವರ ಆರೋಪ.
ಈಗಾಗಲೇ ದಾಳಿಗೊಳಗಾದ ರೈತರು ಅರಣ್ಯಾಧಿಕಾರಿಗಳ ವಿರುದ್ದ ಕಾರ್ಗಲ್ ಪೊಲೀಸರಿಗೆ ದೂರು ನೀಡಿದ್ದು, ಸ್ಥಳೀಯ ಭಾನುಕುಳಿ ಪಂಚಾಯ್ತಿಗೂ ದೂರು ಸಲ್ಲಿಸಿದ್ದಾರೆ. ಈ ನಡುವೆ ಸ್ಥಳೀಯ ಶರಾವತಿ ಕಣಿವೆ ಅಭಯಾರಣ್ಯ ವಿರೋಧಿ ಜನ ಹೋರಾಟ ಸಂಘಟನೆಯ ನೇತೃತ್ವದಲ್ಲಿ ಭಾನುಕುಳಿ ಗ್ರಾಮದಿಂದ ಕಾರ್ಗಲ್ ವರೆಗೆ ಪಾದಯಾತ್ರೆ ಮತ್ತು ವನ್ಯಜೀವಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಈ ಹೋರಾಟಕ್ಕೆ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಕೂಡ ಬೆಂಬಲ ನೀಡಿದ್ದು, ಶರಾವತಿ ಕಣಿವೆಯಲ್ಲಿ ಮತ್ತೊಂದು ಸುತ್ತಿನ ಹೋರಾಟದ ಕೂಗು ಮೊಳಗಲಿದೆ. ಕಾಡಿನ ಹೆಸರಿನಲ್ಲಿ ಜನರ ಮೇಲೆ ನಡೆಯುವ ದಬ್ಬಾಳಿಕೆ ವಿರೋಧಿಸಿ ಜನ ಸಂಘರ್ಷ ಆರಂಭವಾಗಲಿದೆ