ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಪ್ಪಟ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಹೆಸರು ನಾಮಕರಣ ಮಾಡುವ ಕುರಿತು ನೈಜ ಹೋರಾಟಗಾರರ ವೇದಿಕೆಯ ಹೆಚ್. ಎಂ. ವೆಂಕಟೇಶ್ ಅವರು ಮುಖ್ಯಮಂತ್ರಿಗಳು ಯಡಿಯೂರಪ್ಪನವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಅವರ ಪತ್ರದಲ್ಲಿ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮಾಜಿ ಶಾಸಕರು ಮತ್ತು ವಿರೋಧ ಪಕ್ಷದ ನಾಯಕರು ಆದ ಸಮಾಜವಾದಿ, ಪ್ರಜಾಪ್ರಭುತ್ವದ ಅಪ್ಪಟ ಜನಪ್ರತಿನಿಧಿಯಾಗಿ ಸಾರ್ವಜನಿಕರ ಸೇವೆಯಲ್ಲಿ ತಮ್ಮನ್ನು ಕೊನೆಯವರೆಗೂ ತೊಡಗಿಸಿಕೊಂಡ ಶಾಂತವೇರಿ ಗೋಪಾಲಗೌಡರ ಬಗ್ಗೆ ಶಿವಮೊಗ್ಗ ಜಿಲ್ಲೆಯನ್ನು ಈವರೆವಿಗೂ ಪ್ರತಿನಿಧಿಸಿದ ಹಲವಾರು ರಾಜಕಾರಣಿಗಳಿಗೆ ತಮ್ಮನ್ನು ಸೇರಿಸಿದಂತೆ ಗೋಪಾಲಗೌಡರ ನೆನಪು ಇರಬಹುದು ಎಂದು ನಾನು ಭಾವಿಸಿದ್ದೇನೆ.
ಸಾರ್ವತ್ರಿಕಚುನಾವಣೆಯ ಸಂದರ್ಭದಲ್ಲಿ ಶಾಂತವೇರಿ ಗೋಪಾಲಗೌಡರ ಹೆಸರನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳದ ಯಾವರಾಜಕಾರಣಿಯೂ ಶಿವಮೊಗ್ಗ ಜಿಲ್ಲೆಯಲ್ಲಿ ಇರಲು ಸಾಧ್ಯವೇ ಇಲ್ಲ. ಅವರ ಹುಟ್ಟೂರಾದ ಶಾಂತವೇರಿ ಎಂಬ ಪುಟ್ಟ ಹಳ್ಳಿಯಲ್ಲಿ ಈವರೆಗೂ ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿರುವ ಹಳ್ಳಿಯಲ್ಲಿ ಕೆಲವೇ ಕೂಗಳತೆಯ ದೂರದಲ್ಲಿರುವ ಆರಗದಲ್ಲಿ ಶಾಂತವೇರಿ ಗೋಪಾಲಗೌಡ ಸಮುದಾಯಭವನ ಸರ್ಕಾರದ ಕೃಪಾಕಟಾಕ್ಷದಿಂದ ಅಸ್ತಿಪಂಜರವಾಗಿ ನಿರ್ಮಾಣಗೊಂಡಿದ್ದು, ಸದರಿ ಕಾಮಗಾರಿಯನ್ನು ಈವರೆಗೂ ಸರ್ಕಾರ ಪೂರ್ಣಗೊಳಿಸದೆ ಇರುವುದು ದುರದೃಷ್ಟಕರ ವಿಷಯವಾಗಿದೆ.
ಶಾಂತವೇರಿ ಗೋಪಾಲಗೌಡರ ಹುಟ್ಟೂರಿನಲ್ಲಿ ಅವರ ವಿಚಾರಧಾರೆಗಳು ಅಧ್ಯಯನ ಪೀಠವೊಂದು ಈಗಾಗಲೇ ನಿರ್ಮಾಣವಾಗ ಬೇಕಾಗಿತ್ತು ಹಾಗೂ ಆ ಹಳ್ಳಿಯನ್ನು ರಾಜ್ಯದಲ್ಲಿಯೇ ಒಂದು ಮಾದರಿಯ ಹಳ್ಳಿಯಾಗಿ ಅಭಿವೃದ್ಧಿಪಡಿಸುವಲ್ಲಿ ಈವರೆಗೆ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಮತ್ತು ಅಲ್ಲಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಆದರೆ ಅದೇ ತೀರ್ಥಹಳ್ಳಿ ತಾಲೂಕಿನಲ್ಲಿ ವಿವಿಧ ಜಾತಿ, ಸಮುದಾಯ, ಮಠ-ಮಾನ್ಯಗಳಿಗೆ ತಾವು ಸೇರಿದಂತೆ ಜನಪ್ರತಿನಿಧಿಗಳು ಸೇರಿ ಲಕ್ಷ, ಲಕ್ಷ ಕೋಟಿ, ಕೋಟಿ ರೂಪಾಯಿಗಳ ಅನುದಾನವನ್ನು ಅಭಿವೃದ್ಧಿಗೆ ವಿತರಣೆ ಮಾಡಿರುವುದು ನಾವು ಗಮನಿಸಿದ್ದರೆ ಶಾಂತವೇರಿ ಗೋಪಾಲಗೌಡರಿಗೆ ಸರ್ಕಾರ ಮಾಡಿರುವ ತಾರತಮ್ಯ ಮತ್ತು ಅನ್ಯಾಯವೆಂದು ನಾವು ಪರಿಗಣಿಸಬೇಕಾಗುತ್ತದೆ.
ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ಶಾಂತವೇರಿ ಗೋಪಾಲಗೌಡರು ರಾಜ್ಯಕ್ಕೆ ನೀಡಿದ ಸೇವೆಯನ್ನು ಸ್ಮರಿಸುವ ಒಂದು ಸುವರ್ಣಾವಕಾಶ ಈಗ ಸರ್ಕಾರದ ಮುಂದಿದೆ. ಅದೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಶಾಂತವೇರಿ ಗೋಪಾಲಗೌಡರ ಹೆಸರು ಇಡುವುದು.
ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಜನಪ್ರತಿನಿಧಿ ಯಾವ ರೀತಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು. ಜನಸಾಮಾನ್ಯರ ಬದುಕಿನ ಜೊತೆ ಯಾವರೀತಿ ಒಡನಾಟ ಮಾಡಬೇಕು ಮತ್ತು ಭ್ರಷ್ಟಾಚಾರರಹಿತ ಪ್ರಾಮಾಣಿಕವಾದ ಕೆಲಸಕಾರ್ಯಗಳಲ್ಲಿ ಸತ್ಯ,ನಿಷ್ಠೆಯಿಂದಹೇಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಮ್ಮ ಜೀವಿತಾವಧಿಯಲ್ಲಿ ರಾಜಕಾರಣಿಗಳಿಗೆ ಮತ್ತು ರಾಜಕೀಯ ರಂಗ ಪ್ರವೇಶ ಮಾಡುವವರಿಗೆ ಹೇಳಿಕೊಟ್ಟ ಅಭೂತಪೂರ್ವ ವ್ಯಕ್ತಿತ್ವವುಳ್ಳ ಸಮಾಜವಾದಿ ರಾಜಕಾರಣಿ ಶಾಂತವೇರಿ ಗೋಪಾಲಗೌಡರು
ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರಿಂದ ಯಾವ ರೀತಿ ನಾವು ಮತವನ್ನು ಅಪೇಕ್ಷಿಸ ಬೇಕು, ಒಂದು ಓಟು ಒಂದು ನೋಟು ಎಂಬ ಘೋಷವಾಕ್ಯದೊಂದಿಗೆ ನಾವು ಹೇಗೆ ಚುನಾವಣೆಯನ್ನು ನಡೆಸಬೇಕು ಎಂಬ ಪಾಠವನ್ನು ಕಲಿಸಿ ಕೊಟ್ಟು ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡರು.
ಉಳುವವನೇ ಹೊಲದೊಡೆಯ ರೈತರ ಪರವಾದ ಹೋರಾಟದಲ್ಲಿ ಗೇಣಿ ರೈತರಿಗೆ ಆಶಾಕಿರಣವಾಗಿ ಹೊರಹೊಮ್ಮಿದ ಧೀಮಂತ ರಾಜಕಾರಣಿ ಶಾಂತವೇರಿ ಗೋಪಾಲಗೌಡ ಇವರ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣ ಕ್ಕೆ ಇಡುವ ಮೂಲಕ ಶಿವಮೊಗ್ಗ ಜಿಲ್ಲೆ ಸಮಾಜವಾದದ ಹುಟ್ಟೂರು ಎಂಬುದನ್ನು ಶಾಶ್ವತವಾಗಿ ನೆಲೆಯೂರುವಂತೆ ಮಾಡಬೇಕಾಗಿದೆ.
ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ತಾವುಗಳು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಶಾಂತವೇರಿ ಗೋಪಾಲಗೌಡರ ಹೆಸರ ನ್ನು ಇಡುವ ಮೂಲಕ ರಾಜ್ಯದ ಜನತೆಗೆ ಶಾಂತವೇರಿ ಗೋಪಾಲಗೌಡರ ತತ್ವ, ಆದರ್ಶ ಜೀವನ ನಿರ್ವಹಣೆ, ಸಮಾಜವಾದ ರಾಜಕಾರಣ, ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆಯ ದ್ಯೋತಕವಾಗಿ ಶಿವಮೊಗ್ಗ ಜಿಲ್ಲೆಯನ್ನು ಗುರುತಿಸುವಂತಾಗಬೇಕು.
ದಯಮಾಡಿ ಈ ಪತ್ರ ತಲುಪಿದ ತಕ್ಷಣ ಕಾರ್ಯಪ್ರವೃತ್ತರಾಗಿ ಶಾಂತವೇರಿ ಗೋಪಾಲಗೌಡರ ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ಆದೇಶವನ್ನು ಸರಕಾರ ಹೊರಡಿಸಬೇಕೆಂದು ಈ ಮೂಲಕ ವಿನಂತಿಸುತ್ತೇವೆ ಎಂದಿದ್ದಾರೆ.

ಈಗಾಗಲೇ ವಿಮಾನ ನಿಲ್ದಾಣಕ್ಕೆ ಇದೇ ಹೆಸರು ಇಡಿ ಎಂದು ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದು, ಕೆಲವರು ರಾಷ್ಟ್ರ ಕವಿ ಕುವೆಂಪು ಹೆಸರು ಸೂಚಿಸಿದರೆ, ಇನ್ನೂ ಕೆಲವರು ತುಮಕೂರು ಮಠದ ಶಿವಕುಮಾರ ಸ್ವಾಮಿಗಳ ಹೆಸರು ಸೂಚಿಸೊದ್ದಾರೆ. ಈಗ ಶಾಂತವೇರಿ ಗೋಪಾಲಗೌಡರ ಹೆಸರು ಕೇಳಿ ಬರುತ್ತಿದೆ.
ಶಾಂತವೇರಿ ಗೋಪಾಲಗೌಡರ ಕುರಿತು ಚಿಕ್ಕ ವಿವರ:
ಕರ್ನಾಟಕದ ಪ್ರಪ್ರಥಮ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು, ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರಲ್ಲಿ ಒಬ್ಬರು.
1951 ರಲ್ಲಿ ಜಮೀನ್ದಾರಿ ಪದ್ಧತಿಯ ವಿರುದ್ಧ ನಡೆದ ಕಾಗೋಡು ಸತ್ಯಾಗ್ರಹದಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದ್ದ ಗೌಡರು ಅಂದು ರಾಮಮನೋಹರ ಲೋಹಿಯಾ ಹಾಗೂ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರನ್ನು ಕರ್ನಾಟಕಕ್ಕೆ ಕರೆಸಿ ಪ್ರತಿಭಟನೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದರಲ್ಲದೇ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅಂದು ಮೈಸೂರಿನ ರಾಜರ ವಿರುದ್ಧ ಸಿಡಿದೆದ್ದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದರು.
ಆದರೆ ದುರದೃಷ್ಟವಶಾತ್ ಲೋಹಿಯಾ ರಂತೆ ಗೋಪಾಲಗೌಡರೂ ಸಹಾ ಅಕಾಲಿಕ ಮರಣಕ್ಕೆ ತುತ್ತಾಗಿ ತಮ್ಮ 49 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಶಾಂತವೇರಿ ಗೋಪಾಲಗೌಡರ ಕುರಿತು ಕುವೆಂಪು ಅವರ ಮಾತು:
ನನ್ನ ದೃಷ್ಟಿಯಲ್ಲಿ ಅವರೊಬ್ಬರು ರಾಜಕೀಯ ಜೀವನದಲ್ಲಿ ಶ್ರದ್ಧಾ ಪೂರ್ಣ ತತ್ವನಿಷ್ಠ ಹೋರಾಟಗಾರರು . ಅವರೆಂದೂ ತಾವು ನಂಬಿದ ಧ್ಯೇಯ ಧೋರಣೆಗಳಿಂದ ವಿಮುಖರಾಗಲಿಲ್ಲ , ಆಸೆ- ಆಮಿಷಗಳಿಗೆ ಬಲಿಯಾಗಲಿಲ್ಲ. ಅವರೊಬ್ಬರು ಹುತಾತ್ಮರೆಂದರೂ ತಪ್ಪಾಗಲಾರದು. ರಾಜಕೀಯಕ್ಕಾಗಿ ಅವರು ತಮ್ಮ ಲೌಕಿಕವಾದವುಗಳನ್ನೆಲ್ಲ ಯಜ್ಞಮಾಡಿದ್ದಾರೆ.. ಅವರ ಸತ್ಯನಿಷ್ಠುರತೆ ಮತ್ತು ಪ್ರಾಮಾಣಿಕತೆಯನ್ನಾದರೂ ನಮ್ಮ ತರುಣರು ಅನುಸರಿಸಿ ನಡೆದರೆ ಈ ನಾಡಿನ ರಾಜಕೀಯ ಕ್ಷೇತ್ರ ಹೆಚ್ಚು ಪರಿಶುದ್ಧವಾದೀತು.