ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿಕೊಡುವ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಸೂಚನೆಯನ್ನು ಜಾರಿ ಮಾಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವ ಶಕ್ತಿ ಯೋಜನೆ (Shakthi Yojane) ಜಾರಿಗೊಳಿಸುವ ಅಧಿಸೂಚನೆಯನ್ನು ಕಾಂಗ್ರೆಸ್ ಸರ್ಕಾರ (Karnataka Govt) ಇಂದು ಪ್ರಕಟಿಸಿದೆ.
ಕಾಂಗ್ರೆಸ್ ಸರ್ಕಾರದ ಅಧಿಸೂಚನೆಯ ಪ್ರಕಾರ, ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣಿಸಬೇಕಾದರೆ ʻಶಕ್ತಿ ಸ್ಮಾರ್ಟ್ ಕಾರ್ಡ್ʼ (Shakti Smart Card) ಹೊಂದುವುದು ಕಡ್ಡಾಯ. ಕರ್ನಾಟಕ ರಾಜ್ಯದ ನಗರ, ಸಾಮಾನ್ಯ ಹಾಗೂ ವೇಗದೂತ (ಐ/65) ಬಸ್ಸುಗಳಲ್ಲಿ ವಿದ್ಯಾರ್ಥಿನಿಯರು ಸೇರಿ ಎಲ್ಲ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸಬಹುದು ಎಂದು ಅಧಿಸೂಚನೆ ತಿಳಿಸಿದೆ. ಸಿಎಂ ಸಿದ್ದರಾಮಯ್ಯ ಜೂನ್ 2ರಂದು ಸಚಿವ ಸಂಪುಟ ಸಭೆಯ ಬಳಿಕ ಶಕ್ತಿ ಯೋಜನೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಶಕ್ತಿ ಯೋಜನೆಯನ್ನು ಜೂನ್ 11ರಿಂದ ಶುರುಮಾಡುವುದಾಗಿ ಹೇಳಿದ್ದರು.
ನಿಗಮದ ನಾಲ್ಕು ಸಂಸ್ಥೆಗಳ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ಸಂಸ್ಥೆಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಆದರೆ, ಕೆಲವು ಷರತ್ತುಗಳನ್ನು ಅನ್ವಯಿಸಲಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ನಾಲ್ಕು ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆ೦ಗಳೂರು ಮಹಾನಗರ ಸಾರಿಗೆ ಸ೦ಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸ೦ಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಸಾರಿಗೆಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು.
ಶಕ್ತಿ ಸ್ಮಾರ್ಟ್ ಕಾರ್ಡ್ ದೊರೆಯುವವರೆಗೆ ಉಚಿತ ಪ್ರಯಾಣ ಹೇಗೆ? : ಶಕ್ತಿ ಸ್ಮಾರ್ಟ್ಕಾರ್ಡ್ ಅನ್ನು ವಿತರಿಸುವವರೆಗೆ ಭಾರತ ಸರ್ಕಾರ/ ಕರ್ನಾಟಕ ಸರ್ಕಾರದ ಇಲಾಖೆ / ಸರ್ಕಾರಿ ಸ್ವಾಮ್ಯದ ಕಛೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಉಚಿತ ಟಿಕೆಟ್ ವಿತರಿಸುವ ಸ೦ದರ್ಭದಲ್ಲಿ ಪರಿಗಣಿಸಬೇಕು.