
ತುಮಕೂರು ; ಜಿಲ್ಲೆಯ ಮಧುಗಿರಿಯ ಡಿವೈಎಸ್‌ಪಿ ರಾಮಚಂದ್ರಪ್ಪ ಅವರನ್ನು ಮಹಿಳೆಯೊಂದಿಗೆ ಲೈಂಗಿಕ ವರ್ತನೆ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ಈ ಸಂಬಂಧ ಡಿಜಿಪಿ ಅವರು ಶುಕ್ರವಾರ ಅಮಾನತು ಆದೇಶ ಹೊರಡಿಸಿದ್ದಾರೆ. ಪಾವಗಡ ಮೂಲದ ಮಹಿಳೆ ಜಮೀನು ವಿವಾದ ಸಂಬಂಧ ದೂರು ನೀಡಲು ಡಿವೈಎಸ್‌ಪಿಯ ಕಚೇರಿಗೆ ಭೇಟಿ ನೀಡಿದ್ದರು.ತನಿಖೆ ಹಾಗೂ ಮಾತುಕತೆಗೆ ಕರೆಸಿದ ಮಹಿಳೆಯನ್ನು ಪುಸಲಾಯಿಸಿ ಅಮಿಷವೊಡ್ಡಿ ರಾಮಚಂದ್ರಪ್ಪ ತಮ್ಮ ಕಚೇರಿಯೊಳಗೇ ಲೈಂಗಿಕ ದೌರ್ಜನ್ಯ ನಡೆಸಿದ್ದ.

ಈ ಘಟನೆಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಡಿಯೋ ಬಹಿರಂಗವಾಗುತ್ತಿದ್ದಂತೆಯೇ ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಡಿವೈಎಸ್‌ಪಿಯನ್ನು ಅಮಾನತು ಮಾಡಲು ತಕ್ಷಣ ಕ್ರಮ ಕೈಗೊಂಡಿದ್ದಾರೆ.
ಈ ಘಟನೆ ಪೊಲೀಸರಿಂದಲೇ ಕಾನೂನು ಪ್ರಕ್ರಿಯೆ ದುರುಪಯೋಗದ ಪ್ರಕರಣವಾಗಿ ಹೊರಹೊಮ್ಮಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಘಟನೆಗಳು ಪೊಲೀಸ್ ಇಲಾಖೆಯ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತವೆ ಎಂದು ಜನರು ಹೇಳಿದ್ದಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ನಡೆದ ಈ ಘಟನೆ ಪೋಲೀಸ್ ಇಲಾಖೆಯ ಘನತೆ ಗೌರವಕ್ಕೆ ಕುಂದುಂಟಾಗಿದೆ. ಈ ಘಟನೆಯ ವರದಿಯನ್ನು ಗುರುವಾರ ಪ್ರಕಟಿಸಿದ್ದ ಪ್ರತಿಧ್ವನಿ ಈ ಕಳಂಕಿತ ಅಧಿಕಾರಿಯನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಿ ಶುಕ್ರವಾರ ಆಮಾನತ್ತು ಮಾಡಲಿರುವುದಾಗಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.












