ಆಯವ್ಯದಲ್ಲಿ ಸ್ಟಾರ್ಟಪ್ ಉತ್ತೇಜನಕ್ಕೆ ಹಲವಾರು ಕ್ರಮಗಳನ್ನು ಪ್ರಕಟಿಸಲಾಗಿದ್ದು, ವಿಶ್ವದರ್ಜೆಯ ಪರಿಪೋಷಣ ಕೇಂದ್ರ (ಇನ್ಕ್ಯುಬೇಷನ್ ಕೇಂದ್ರ) ಇನೋವರ್ಸ್ (INNOVERSE) ಸ್ಥಾಪನೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 50 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸ್ಥಾಪನೆಯಾಗಲಿದ್ದು, ಇದು ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ಅತ್ಯುನ್ನತ ತಾಂತ್ರಿಕ ನೆರವು ನೀಡುವ ಗುರಿಯನ್ನು ಹೊಂದಿದೆ.
ಕರ್ನಾಟಕವು ಭಾರತದ ನಾವೀನ್ಯತೆಯ ಕೇಂದ್ರವಾಗಿದ್ದು, ಬ್ಲಾಕ್ ಚೈನ್, ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಕೃತಕ ಬುದ್ಧಿಮತ್ತೆ, ನ್ಯಾನೋ ತಂತ್ರಜ್ಞಾನ, ಯಂತ್ರ ಕಲಿಕೆ, ಸೈಬರ್ ಭದ್ರತೆ, ರೊಬೊಟಿಕ್ಸ್, ಜೆನೆಟಿಕ್ ಎಂಜಿನಿಯರಿಂಗ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಕಳೆದ 3 ವರ್ಷಗಳಿಂದ ಸತತವಾಗಿ ಭಾರತದ ನಾವೀನ್ಯತೆ ಸೂಚ್ಯಂಕ ಶ್ರೇಣಿಯಲ್ಲಿ ಮುಂಚೂಣಿಯಲ್ಲಿದೆ ಎಂದು ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದರೊಂದಿಗೆ ಕರ್ನಾಟಕ ರಾಜ್ಯವು ಭಾರತೀಯ ತಂತ್ರಜ್ಞಾನ ಉದ್ಯಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ, ಏರೋಸ್ಪೇಸ್ ಮತ್ತು ಉದಯೋನ್ಮುಖ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಅಗ್ರ ಸ್ಥಾನದಲ್ಲಿದೆ ಎಂದೂ ಸಚಿವರು ತಿಳಿಸಿದ್ದಾರೆ.
ಕಳೆದ ಎರಡು ದಶಕಗಳಲ್ಲಿ ಕರ್ನಾಟಕ ತಂತ್ರಜ್ಞಾನ ಮತ್ತು ನಾವೀನ್ಯತೆ ಆಧಾರಿತ ಸ್ಟಾರ್ಟ್‌ಅಪ್‌ಗಳಿಗೆ ಜಾಗತಿಕ ಹಾಟ್‌ಸ್ಪಾಟ್ ಆಗಿ ಯಶಸ್ವಿಯಾಗಿ ರೂಪಾಂತರಗೊಂಡಿದೆ, ಮಾಹಿತಿ ತಂತ್ರಜ್ಞಾನ, ಉದ್ಯಮಶೀಲ ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯದಲ್ಲಿನ ಹೂಡಿಕೆಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ ಎಂದು ಹೇಳಿರುವ ಸಚಿವರು 15000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಎಂಟರ್‌ಪ್ರೈಸ್ ಟೆಕ್, ಹೆಲ್ತ್-ಟೆಕ್, ಎಡ್ಯೂ-ಟೆಕ್, ಟ್ರಾನ್ಸ್‌ಪೋರ್ಟ್ ಟೆಕ್, ಲಾಜಿಸ್ಟಿಕ್ಸ್, ರಿಯಲ್ ಎಸ್ಟೇಟ್ ಟೆಕ್, ಟ್ರಾವೆಲ್ ಟೆಕ್, ಇ-ಕಾಮರ್ಸ್, ಫುಡ್ ಟೆಕ್, ಫಿನ್‌ಟೆಕ್, ಡೀಪ್ ಟೆಕ್, ಸ್ಪೇಸ್ ಟೆಕ್, ಸುಸ್ಥಿರತೆ ಮುಂತಾದ ಕ್ಷೇತ್ರಗಳಲ್ಲಿ ನಿರತವಾಗಿವೆ; ಸಾಹಸೋದ್ಯಮ ಬಂಡವಾಳ ನೆಟ್‌ವರ್ಕ್, ಸ್ಟಾರ್ಟಪ್ ಪರಿಸರ ವ್ಯವಸ್ಥೆಯ ಮತ್ತಷ್ಟು ರಚನೆ ಮತ್ತು ಟೆಕ್ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ರಾಜ್ಯವು ಉತ್ತಮ ಭೂಮಿಕೆಯಾಗಿದ್ದು, ಸ್ಟಾರ್ಟ್‌ಅಪ್‌ಗಳ ಉತ್ತೇಜನಕ್ಕಾಗಿ ಹೈಟೆಕ್ ಸೌಲಭ್ಯಗಳೊಂದಿಗೆ ಅತ್ಯಾಧುನಿಕ ಇನ್‌ಕ್ಯುಬೇಶನ್ ಸೆಂಟರ್ ʼಇನ್ನೋವರ್ಸ್ʼ ಸ್ಥಾಪಿಸಲು ಯೋಜಿಸಲಾಗಿದೆ.
ʼಇನ್ನೋವರ್ಸ್ʼ ಇನ್ಕ್ಯುಬೇಶನ್ ಕೇಂದ್ರವು ಮೂಲಮಾದರಿಯ ಪರಿಹಾರಗಳ ಅಭಿವೃದ್ಧಿ, ಮಾರುಕಟ್ಟೆ ಸಿದ್ಧತೆ, ಸ್ಕೇಲೆಬಲ್ ಉತ್ಪನ್ನಗಳ ಅಭಿವೃದ್ಧಿ, ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಪೂರಕವಾದ ಪರಿಸರ ವ್ಯವಸ್ಥೆ ಒದಗಿಸಲು ಅನುಕೂಲ ಮಾಡಿಕೊಡುತ್ತದೆ.
ಕೇಂದ್ರವು ಹೈಟೆಕ್ ಮೂಲಸೌಕರ್ಯಗಳಾದ ಪ್ಲಗ್ ಮತ್ತು ಪ್ಲೇ ಸೌಲಭ್ಯಗಳು, ಸಭೆ, ಕಾನ್ಫರೆನ್ಸ್ ಕೊಠಡಿಗಳು, ಕಚೇರಿ ಸ್ಥಳ ಮತ್ತು ಹಂಚಿಕೆಯ ಸೇವೆಗಳು, ಹೈಸ್ಪೀಡ್ ಇಂಟರ್ನೆಟ್ ಪ್ರವೇಶ ಮುಂತಾದವುಗಳನ್ನು ಒದಗಿಸುತ್ತದೆ. ಮಾರ್ಗದರ್ಶನ, ತರಬೇತಿ ಮುಂತಾದ ಸ್ಟಾರ್ಟ್‌ಅಪ್‌ಗಳಿಗೆ ಅವಶ್ಯವಾದ ವಿಶ್ವ ದರ್ಜೆಯ ಸೇವೆಗಳನ್ನು ಕೇಂದ್ರ ನೀಡುತ್ತದೆ. ಮೂಲ ಹಣಕಾಸು ನೆರವು, ಕಾನೂನು ಸೇವೆಗಳು, ಅಕೌಂಟೆನ್ಸಿ ಸೇವೆಗಳು, ತಾಂತ್ರಿಕ ನೆರವು, ನೆಟ್‌ವರ್ಕಿಂಗ್ ಚಟುವಟಿಕೆಗಳು, ಮಾರ್ಕೆಟಿಂಗ್ ನೆರವು, ಲ್ಯಾಬ್‌ಗಳಿಗೆ ಪ್ರವೇಶ, ಉತ್ಪಾದನಾ ಸೌಲಭ್ಯಗಳು, ಔಟ್‌ರೀಚ್ ಮತ್ತು ಹೂಡಿಕೆದಾರರ ಸಂಪರ್ಕ, ವಾಣಿಜ್ಯೋದ್ಯಮಿ ಟೂಲ್ ಕಿಟ್ ಮುಂತಾದ ಸೌಲಭ್ಯಗಳನ್ನು ಕೇಂದ್ರ ಒದಗಿಸುತ್ತದೆ.
ಪ್ರಸ್ತಾವಿತ ಇನ್‌ಕ್ಯುಬೇಶನ್ ಸೆಂಟರ್ ರಾಜ್ಯದಲ್ಲಿ ಯುವಜನರಲ್ಲಿ ಉದ್ಯಮಶೀಲತೆ ಮತ್ತು ಹೊಸ ಉತ್ಸಾಹವನ್ನು ಮೂಡಿಸಲಿದೆಯಲ್ಲದೆ, ಕರ್ನಾಟಕವನ್ನು ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ಚಾಂಪಿಯನ್ ರಾಜ್ಯವನ್ನಾಗಿ ಮಾಡಲಿದೆ ಎಂದು ತಿಳಿಸಿರುವ ಸಚಿವರು ಭವಿಷ್ಯದಲ್ಲಿ 25,000ಕ್ಕೂ ಹೆಚ್ಚು ನೂತನ ಸ್ಟಾರ್ಟ್ ಅಪ್‌ಗಳನ್ನು ಆರಂಭಿಸುವ ದೂರದೃಷ್ಟಿಯನ್ನು ಇರಿಸಿಕೊಂಡು ಆರಂಭಿಸಲಾಗುತ್ತಿದೆ ಎಂದು ಹೇಳಿದ್ದಾರೆ.