ಬೆಂಗಳೂರು: ರೈತರ ಸರಣಿ ಅತ್ಮಹತ್ಯೆಗಳ ತೀವ್ರ ಕಳವಳ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ರಾಜ್ಯ ಸರಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಹಾಗೂ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಪಡಿಸಿದರು.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು; ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಚೆಲ್ಲಾಟ, ರೈತರಿಗೆ ಮರಣ ಸಂಕಟ ಒಂದೆಡೆ ರೈತರು ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದರೆ, ಈ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಆಟ. ಘಟಬಂಧನ್ ಕಟ್ಟುವುದರಲ್ಲಿ ಇರುವ ಆತುರ, ಅನ್ನದಾನ ಬದುಕು ಕಟ್ಟುವುದರಲ್ಲಿ ಇಲ್ಲ. ಹೀಗಿದೆ ಇವರ ಗ್ಯಾರಂಟಿ ವರಸೆ ಎಂದು ಲೇವಡಿ ಮಾಡಿದ್ದಾರೆ.
ಗ್ಯಾರಂಟಿ ಹಾಗೂ ಭಾಗ್ಯಗಳಿಂದ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಮಾಡುತ್ತೇವೆಂದು ಬೂಸಿಬಿಟ್ಟ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಎರಡು ತಿಂಗಳು ಕಳೆಯುವ ಮುನ್ನವೇ ರಾಜ್ಯದಲ್ಲಿ ರೈತರ ಮರಣಮೃದಂಗ ಶುರುವಾಗಿದೆ. ಸುಭೀಕ್ಷೆಯ ನಾಡು ಕರ್ನಾಟಕದಲ್ಲಿ ಅನ್ನದಾತರು ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದರೆ ಇವರು ತಲೆ ತಗ್ಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆ ಒಂದರಲ್ಲಿಯೇ 18 ಮಂದಿ ಅನ್ನದಾತರು ಸಾವಿಗೆ ಶರಣಾಗಿರುವುದು, ಇನ್ನಿತರೆ ಜಿಲ್ಲೆಗಳಲ್ಲಿ ಅದೇ ಸರಣಿ ಶುರುವಾಗಿದೆ. ಇದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ರೈತರ ಬದುಕಿಗೆ ಗ್ಯಾರಂಟಿ ಕೊಡದ ಈ ಸರಕಾರಕ್ಕೆ ನಾಚಿಕೆ ಆಗಬೇಕು ಎಂದು ಅವರು ಕಿಡಿ ಕಾರಿದ್ದಾರೆ.
ಗ್ಯಾರಂಟಿ ಕೊಟ್ಟೆವು ಎಂದು ಬೀಗಿದ ಈ ಸರಕಾರ, ಆ ಗ್ಯಾರಂಟಿಗಳಲ್ಲಿ ಅನ್ನದಾತನ ಪಾಲೇನು ಎಂದು ಹೇಳಬೇಕಿತ್ತು. ರಾಜ್ಯಪಾಲರ ಭಾಷಣ ಅಥವಾ ಬಜೆಟ್ ನಲ್ಲಿ ಒಂದು ಪದವನ್ನಾದರೂ ಉಲ್ಲೇಖಿಸಬೇಕಿತ್ತು. ಬಡವರ ಬದುಕಿಗೆ ಗ್ಯಾರಂಟಿ ಕೊಡುತ್ತೇವೆ ಎಂದವರು ಮಾಡಿದ್ದೇನು? ಬಜೆಟ್ ನಲ್ಲಿ ಕೃಷಿ ಅನುದಾನಕ್ಕೆ ಖೋತಾ ಹಾಕಿದ್ದು!
ಇವರಾ ರೈತರ ಉದ್ಧಾರಕರು? ಛೇ! ನಾಚಿಕೆಗೇಡು ಎಂದಿದ್ದಾರೆ ಅವರು.
ನಾನು ಮುಖ್ಯಮಂತ್ರಿ ಆಗಿದ್ದಾಗ, ಆ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆಗಳು ಆಗಿದ್ದವು. ನನ್ನ ಸರಕಾರ ಬಂದ ಕೂಡಲೇ ರೈತರ ಸಾಲ ಮನ್ನಾ ಮಾಡಿ ಅವರ ಜೀವ ಉಳಿಸುವ ಕೆಲಸ ಮಾಡಿದೆ. ಅದನ್ನೇ ಕಾಂಗ್ರೆಸ್ ಸರಕಾರ ಮಾಡಲಿ. ಕೃಷಿ ಅನುದಾನಕ್ಕೆ ಕತ್ತರಿ ಹಾಕುವ ಬದಲು ರೈತರಿಗೆ ಆರ್ಥಿಕ ನಿರಾಳತೆ ನೀಡಲಿ ಎಂದು ಒತ್ತಾಯ ಮಾಡಿದ್ದಾರೆ.
ಅನ್ನದಾತ ಬಂಧುಗಳಲ್ಲಿ ನನ್ನ ಹೃದಯಪೂರ್ವಕ ಮನವಿ.. ದಯಮಾಡಿ ಯಾರೂ ಆತುರದ ನಿರ್ಧಾರ ಕೈಗೊಳ್ಳುವುದು ಬೇಡ. ಒಂದು ಜೀವಹಾನಿ ಆ ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸುತ್ತದೆ. ಸರಕಾರದ ಜತೆ ಹೋರಾಡಿ ಸಮಸ್ಯೆಗೆ ಪರಿಹಾರ ಹುಡುಕೋಣ. ನಿಮ್ಮ ಜತೆ ನಾನಿದ್ದೇನೆ. ದಯವಿಟ್ಟು ಯಾರೂ ಜೀವಕ್ಕೆ ಕುತ್ತು ತಂದುಕೊಳ್ಳುವುದು ಬೇಡ. ಸರಕಾರ ತಕ್ಷಣ ಇತ್ತ ಗಮನ ಹರಿಸಬೇಕು ಎಂದು ಆಗ್ರಹ ಮಾಡಿದ್ದಾರೆ.