ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ಗಂಭೀರ ಅಪರಾಧ ಪ್ರಕರಣ ಎದುರಿಸುತ್ತಿರುವ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದಾರೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಸಂಪರ್ಕಿಸದೆ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಗುರುವಾರ ಸೆಂಥಿಲ್ ಬಾಲಾಜಿ ಅವರನ್ನು ರಾಜ್ಯ ಸಂಪುಟದಿಂದ ವಜಾಗೊಳಿಸಿದ್ದು, ಸಚಿವರನ್ನ ಜಾರಿ ನಿರ್ದೇಶನಾಲಯ (ಇಡಿ) ಜೂನ್ 14 ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಬಂಧಿಸಿತ್ತು.
ರಾಜ್ಯಪಾಲರ ಈ ವಿವಾದಾತ್ಮಕ ನಡೆಯನ್ನು ಡಿಎಂಕೆ ಸರ್ಕಾರ ತೀವ್ರವಾಗಿ ಖಂಡಿಸಿದೆ. ಉದ್ಯೋಗಕ್ಕಾಗಿ ನಗದು ಹಗರಣ ಸೇರಿದಂತೆ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲಿನಲ್ಲಿರುವ ಮತ್ತು ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಬಾಲಾಜಿ ಅವರನ್ನು ಸ್ಟಾಲಿನ್ ಅವರು ಖಾತೆಯಿಲ್ಲದೆ ಸಚಿವರಾಗಿ ಉಳಿಸಿಕೊಂಡಿದ್ದರು. ಆದರೆ ಇದೀಗ ರಾಜ್ಯಪಾಲ ರವಿ ಅವರ ಏಕಪಕ್ಷೀಯ ಕ್ರಮದಿಂದ ಈ ನಿರ್ಧಾರವನ್ನು ರದ್ದುಗೊಳಿಸಲಾಗಿದೆ.

ಸೆಂಥಿಲ್ ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸುವ ರಾಜ್ಯಪಾಲರ ನಿರ್ಧಾರದ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪ್ರತಿಕ್ರಿಯಿಸಿ, ಯಾವುದೇ ಸಚಿವರನ್ನು ಸಂಪುಟದಿಂದ ತೆಗೆದುಹಾಕುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಈ ತೀರ್ಪಿನ ವಿರುದ್ಧ ಸುಪ್ರಿಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ಚೆನ್ನೈನಲ್ಲಿರುವ ಸೆಂಥಿಲ್ ಅವರ ಮನೆ, ಕಚೇರಿ ಹಾಗೂ ಸಹೋದರ ಅಶೋಕ್ ಕುಮಾರ್ ಅವರ ಮನೆಯ ಮೇಲೆ ಇಡಿ ಶೋಧ ಕಾರ್ಯಾಚರಣೆ ನಡೆಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಈ ಹುಡುಕಾಟ ನಡೆದಿತ್ತು. 2006 ರಲ್ಲಿ, ವಿ ಸೆಂಥಿಲ್ ಬಾಲಾಜಿ ಮೊದಲ ಬಾರಿಗೆ ಶಾಸಕರಾದರು. ಆಗ ಅವರು ಎಐಡಿಎಂಕೆ ಸದಸ್ಯರಾಗಿದ್ದರು. 2011ರಲ್ಲಿ ಕರೂರ್ ಕ್ಷೇತ್ರದಿಂದ ಎರಡನೇ ಬಾರಿಗೆ ಗೆದ್ದಿದ್ದರು. ನಂತರ 2011 ರಿಂದ 2016 ರವರೆಗೆ ಇದ್ದ ಜಯಲಲಿತಾ ಸರ್ಕಾರದಲ್ಲಿ ಸಾರಿಗೆ ಸಚಿವರನ್ನಾಗಿದ್ದರು. ಅದೇ ಸಮಯದಲ್ಲಿ ಉದ್ಯೋಗದ ಬದಲಿಗೆ ನಗದು ಪಡೆದ ಹಗರಣ ನಡೆದಿದೆ ಎನ್ನಲಾಗಿದೆ.

ಆರೋಪದ ನಂತರ 2015ರಲ್ಲಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು. 2016ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಬಾರಿಗೆ ಶಾಸಕರಾದರು. ಆದರೆ, ಜಯಲಲಿತಾ ನಿಧನದ ನಂತರ ಪಕ್ಷದಲ್ಲಿ ಒಡಕು ಉಂಟಾಗಿತ್ತು. ಗುಂಪುಗಾರಿಕೆಯಲ್ಲಿ ಸೆಂಥಿಲ್ ಸದಸ್ಯತ್ವ ಕಳೆದುಕೊಳ್ಳಬೇಕಾಯಿತು. 2018ರಲ್ಲಿ ಡಿಎಂಕೆ ಟಿಕೆಟ್ನಲ್ಲಿ ಉಪಚುನಾವಣೆಯಲ್ಲಿ ಗೆದ್ದು ಮತ್ತೆ ಶಾಸಕರಾದ್ದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ವಿ ಸೆಂಥಿಲ್ ಬಾಲಾಜಿಗೆ ಹಲವು ಪ್ರಮುಖ ಇಲಾಖೆಗಳ ಜವಾಬ್ದಾರಿ ನೀಡಿದ್ದರು.