ತುಮಕೂರು: 6 ದಶಕಗಳ ರಾಜಕಾರಣಕ್ಕೆ ಹಿರಿಯ ರಾಜಕಾರಣಿ ವಿದಾಯ ಹೇಳಿದ್ದಾರೆ.
ಹಿರಿಯ ರಾಜಕಾರಣಿ, ಸಂಸದ ಜಿ.ಎಸ್.ಬಸವರಾಜು (GS Basavaraju) ತಮ್ಮ ಆರು ದಶಕಗಳ ಸುದೀರ್ಘ ರಾಜಕೀಯ (Politics) ಇತಿಹಾಸಕ್ಕೆ ವಿದಾಯ ಹೇಳಿದ್ದಾರೆ.
ಹಲವು ಏಳುಬೀಳು ಕಂಡ ಈ ಹಿರಿಯ ರಾಜಕಾರಣಿ ಈಗ ರಾಜಕೀಯದಿಂದ ದೂರಾಗಿದ್ದಾರೆ. 86 ವರ್ಷದ ಬಸವರಾಜು ತಮ್ಮ ಜನ್ಮದಿನದಂದೇ (ಮೇ 4) ಅಧಿಕೃತವಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಕಾಂಗ್ರೆಸ್ ಮೂಲಕ ರಾಜಕೀಯ ಜೀವನ ರೂಪಿಸಿಕೊಂಡು ಬಿಜೆಪಿಯಲ್ಲಿ ತಮ್ಮ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ.

ತಾಲೂಕು ಬೋರ್ಡ್ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಬಸವರಾಜು ಸಂಸತ್‌ವರೆಗೂ ಪ್ರವೇಶ ಮಾಡಿದರು. ಆರಂಭದ ದಿನಗಳಲ್ಲಿ ತಾಲೂಕು ಬೋರ್ಡ್ ಅಧ್ಯಕ್ಷರಾಗಿ, ಎಪಿಎಂಸಿ ಅಧ್ಯಕ್ಷರಾಗಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ರಾಜಕೀಯ ವೃತ್ತಿ ಆರಂಭಿಸಿದ್ದರು. ಸತತ 21 ವರ್ಷ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ದಾಖಲೆ ನಿರ್ಮಿಸಿದ್ದರು. ಲೋಕಸಭೆಗೆ ಎಂಟು ಬಾರಿ ಸ್ಪರ್ಧಿಸಿ, ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ, ವಿಧಾನಸಭೆ ಪ್ರವೇಶಿಸುವ ಇವರು ಕನಸು ನನಸಾಗಿರಲಿಲ್ಲ.