ಬೆಂಗಳೂರು: ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಅವರಿಗೆ ನಾಲ್ಕು ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ.
ಎಂ.ಬಿ. ಪಾಟೀಲ್ ಹೊರತುಪಡಿಸಿದರೆ ಉಳಿದ ಲಿಂಗಾಯತ ಸಚಿವರಿಗೆ ಸಣ್ಣ, ಸಣ್ಣ ಖಾತೆಗಳನ್ನು ನೀಡಿ, ಲಿಂಗಾಯತರನ್ನು ಕಡೆಗಣಿಸಲಾಗಿದೆ ಎಂಬ ಆರೋಪದ ನಡುವೆಯೇ ದರ್ಶನಾಪುರ ಅವರಿಗೆ ನಾಲ್ಕು ನಿಗಮ ಮಂಡಳಿಗೆ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
1994, 2004, 2008, 2018, 2023 ರಲ್ಲಿ ಒಟ್ಟು ಐದು ಬಾರಿ ಶಾಸಕರಾಗಿರುವ ದರ್ಶನಾಪುರ ಅವರು, 1994ರಲ್ಲಿ ಇಂಧನ ಸಚಿವ, 2006ರಲ್ಲಿ ಕೃಷಿ ಮಾರುಕಟ್ಟೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಅನುಭವ ಹಾಗೂ ಹಿರಿತನಕ್ಕೆ ಗೌರವಿಸಿ ಅವರಿಗೆ ಇನ್ನಷ್ಟು ಅಧಿಕಾರ ವಹಿಸಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.