ಶಿವಮೊಗ್ಗ: ಹಿರಿಯ ಸಾಹಿತಿ ಡಾ. ನಾ ಡಿಸೋಜ ನಿಧನ ಹೊಂದಿದ್ದಾರೆ. 87 ವರ್ಷದ ಹಿರಿಯ ಸಾಹಿತಿ ಡಾ. ನಾ.ಡಿಸೋಜ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಸಂಜೆ 7.50ರ ಹೊತ್ತಿಗೆ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಅವರು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು.
ಇಂದು ಮಧ್ಯಾಹ್ನದ ಬಳಿಕ ಸಾಗರದ ಸ್ವಗೃಹದಲ್ಲಿ ಡಾ. ನಾ. ಡಿಸೋಜ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಪುತ್ರ ನವೀನ್ ಡಿಸೋಜ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ನಾಳೆ ಹಲವು ಗಣ್ಯರು ಪಾರ್ಥಿವ ದರ್ಶನ ಪಡೆಯಲಿದ್ದಾರೆ.
ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸಂತಾಪ ಸೂಚಿಸಿದ್ದಾರೆ. ಫೇಸ್ ಬುಕ್‌ನಲ್ಲಿ ಫೋಸ್ಟ್ ಹಾಕಿ ಸಂತಾಪ ಸೂಚಿಸಿದ್ದಾರೆ. ಹಿರಿಯ ಸಾಹಿತಿ ನಾ.ಡಿಸೋಜ ಅವರದು ಬದುಕು ಬೇರೆಯಲ್ಲ, ಬರಹ ಬೇರೆಯಲ್ಲ ಎರಡೂ ಒಂದೇ. ಬರೆದಂತೆ ಬದುಕಿದವರು, ಬದುಕಿದಂತೆ ಬರೆದವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನಾ.ಡಿಸೋಜ ಅವರ ಕೊಡುಗೆ ಅನನ್ಯವಾದದ್ದು. ಶ್ರೀಯುತರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದಿದ್ದಾರೆ. ಅವರ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸಲ್ಲಿಸಿದ್ದಾರೆ.