ಬೆಂಗಳೂರು: ಡ್ರಗ್ಸ್ ದಂಧೆಯ ಕರಾಳ ಮುಖವನ್ನು ನಟ ದುನಿಯಾ ವಿಜಯ್ ಬೆಳಕಿಗೆ ತಂದಿದ್ದು, ಬೆಂಗಳೂರಿನ ವಿವಿಧೆಡೆ ಮೆಡಿಕಲ್ ಅಂಗಡಿಯಲ್ಲಿ ನೋವು ನಿವಾರಕ ಮಾತ್ರೆ, ಮಾದಕ ವಸ್ತುವಿಗೆ ಸಂಬಂಧಿಸಿದ ಮಾತ್ರೆ ಮಾರಾಟ ಮಾಡುತ್ತಿರುವ ಜಾಲವನ್ನು ಬಯಲಿಗೆ ಎಳೆದಿದ್ದಾರೆ.ಇದೀಗ ದುನಿಯಾ ವಿಜಯ್ ಮಾಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.
ವಿಜಯ್ ತಮ್ಮ ಸ್ನೇಹಿತರ ಜತೆಗೆ ಕಾರಿನಲ್ಲಿ ತೆರಳಿ ಮೆಡಿಕಲ್ ಸ್ಟೋರ್‌ವೊಂದಕ್ಕೆ ತಮ್ಮ ಜತೆಗಿದ್ದ ಬಾಲಕನನ್ನು ಕಳುಹಿಸಿ ಡ್ರಗ್ಸ್‌ಗೆ ಸಂಬಂಧಿಸಿದ (ಟೈಡಲ್) ಮಾತ್ರೆಯನ್ನು ಕೇಳುವಂತೆ ಸೂಚಿಸಿದ್ದರು. ಅದರಂತೆ ಮೆಡಿಕಲ್‌ನಲ್ಲಿದ್ದ ಮಹಿಳೆಯೊಬ್ಬರು ಆತನಿಗೆ ಮಾತ್ರೆಯೊಂದನ್ನು ನೀಡುತ್ತಾರೆ. ಇದನ್ನು ಮಾದಕ ವ್ಯಸನಿಗಳು ತೆಗೆದುಕೊಳ್ಳುವುದಾಗಿ ವೀಡಿಯೋದಲ್ಲಿ ದುನಿಯಾ ವಿಜಯ್ ವಿವರಿಸುತ್ತಾರೆ. 2 ಮೆಡಿಕಲ್‌ಗಳಲ್ಲಿ ಡೈಡಲ್ ಮಾತ್ರೆಯನ್ನು ವೈದ್ಯರ ಚೀಟಿ ಇಲ್ಲದೆಯೇ ನೀಡಲಾಗಿದೆ. ಈ ವೀಡಿಯೋ ವೈರಲ್ ಆಗಿದೆ.
ಏನಿದು ಟೈಡಾಲ್ ಟ್ಯಾಬ್ಲೆಟ್?:ಟೈಡಾಲ್ ಟ್ಯಾಬ್ಲೆಟ್ ಶಸ್ತ್ರ ಚಿಕಿತ್ಸೆ ವೇಳೆ ವೈದ್ಯರು ರೋಗಿಗಳಿಗೆ ನಿಯಮಿತವಾಗಿ ನೀಡಲಿದ್ದಾರೆ. ಆದರೆ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಇದನ್ನು ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.
ಟೈಡಲ್ ಮಾತ್ರೆ ಮಾರಾಟ :ಬೆಂಗಳೂರು ಸೇರಿದಂತೆ ವಿವಿಧ ಕಡೆಯಲ್ಲಿ ಟೈಡಲ್ (ಟಾಪಾಲು) ಮಾತ್ರೆ ವ್ಯಾಪಕವಾಗಿ ಮಾರಾಟವಾಗುತ್ತಿದ್ದು, ಇದು ಯುವಜನತೆಯನ್ನು ಹಲವು ರೋಗಗಳಿಗೆ ನೂಕುತ್ತಿದೆ ಎಂದು ಚಿತ್ರನಟ ದುನಿಯಾ ವಿಜಯ್ ತಿಳಿಸಿದ್ದಾರೆ. ಅಲ್ಲದೆ, ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದ್ದಾರೆ.
ಭೀಮಾ ಬಿಡುಗಡೆ ಬೆನ್ನಲ್ಲೇ ಸ್ಟಿಂಗ್ ಆಪರೇಷನ್ :ಡ್ರಗ್ಸ್ ಕರಾಳ ದಂಧೆಯ ಕುರಿತ ಕಥಾ ಹಂದರವುಳ್ಳ ಭೀಮಾ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೆ ದುನಿಯಾ ವಿಜಯ್ ಬೆಂಗಳೂರಿನ ವಿವಿಧೆಡೆ ಸುತ್ತಾಡಿ ಸ್ಟಿಂಗ್ ಆಪರೇಷನ್ ನಡೆಸಿ ಯಾರಿಗೆ ಬೇಕಾದರೂ ಡ್ರಗ್ಸ್ ಸುಲಭವಾಗಿ ಸಿಗಲಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನೋವು ನಿವಾರಕ ಮಾತ್ರೆಗಳನ್ನೂ ಕೆಲವರು ಡ್ರಗ್ಸ್ ರೂಪದಲ್ಲಿ ತೆಗೆದುಕೊಳ್ಳುವ ಅಂಶಗಳನ್ನು ತಿಳಿಸಿದ್ದಾರೆ.