ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದೆ. ಈ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಇಂದು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ರಿಲೀಸ್ ಮಾಡಿದೆ. ಯಾವ್ಯಾವ ಕ್ಷೇತ್ರಗಳಲ್ಲಿ ಆಕಾಂಕ್ಷಿ ಪಟ್ಟಿ ದೊಡ್ಡದಿದೆಯೋ ಆ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಎಐಸಿಸಿ ಇನ್ನೂ ನಿಗೂಢವಾಗಿಯೇ ಇರಿಸಿದೆ.
ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯಗೆ 2ನೆ ಕ್ಷೇತ್ರ ಸಿಗಬಹುದೇ..? ಎಂಬ ಗುಮಾನಿ ಇತ್ತು. ಆದರೆ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್ ಕೋಲಾರ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿಲ್ಲ. ಇನ್ನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ವೈ.ಎಸ್ವಿ ದತ್ತಾಗೆ ಎಐಸಿಸಿ ಶಾಕ್ ನೀಡಿದೆ. ಕಡೂರು ಕ್ಷೇತ್ರದಿಂದ ಆನಂದ್ಗೆ ಟಿಕೆಟ್ ನೀಡುವ ಮೂಲಕ ವೈಎಸ್ವಿ ದತ್ತಾ ಕನಸಿಗೆ ಕಾಂಗ್ರೆಸ್ ನೀರೆರೆಚಿದೆ.
ಇನ್ನು ವಿನಯ್ ಕುಲಕರ್ಣಿ ಈ ಬಾರಿ ಶಿಗ್ಗಾವಿಯಿಂದ ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಧಾರವಾಡದಿಂದ ವಿನಯ್ ಕುಲಕರ್ಣಿಗೆ ಟಿಕೆಟ್ ನೀಡಲಾಗಿದೆ. ಬಾದಾಮಿಯಲ್ಲಿ ಭೀಮಸೇನ ಬಿ ಚಿಮ್ಮನಕಟ್ಟಿಗೆ ಟಿಕೆಟ್ ನೀಡಲಾಗಿದೆ. ಇನ್ನುಳಿದಂತೆ ಮಂಡ್ಯಗೆ ರವಿಕುಮಾರ್, ಬೇಲೂರಿನಿಂದ ಶಿವರಾಮ್,ತೀರ್ಥಹಳ್ಳಿಯಿಂದ ಕಿಮ್ಮನೆ ರತ್ನಾಕರ, ಕಲಘಟಗಿ ಸಂತೋಷ್ ಲಾಡ್, ಅಫಜಲಪುರದಲ್ಲಿ ಹಾಲಿ ಶಾಸಕ ಎಂ.ವೈ ಪಾಟೀಲ್ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದರೂ ಸಹ ಅವರಿಗೆ ಟಿಕೆಟ್ ನೀಡಲಾಗಿದೆ. ಪುತ್ರನಿಗೆ ಟಿಕೆಟ್ ನೀಡುವಂತೆ ಎಂ.ವೈ ಪಾಟೀಲ್ ಪಕ್ಷದ ಎದುರು ಬೇಡಿಕೆ ಇಟ್ಟಿದ್ದರು. ಆದರೆ ಎಂವೈ ಪಾಟೀಲ್ ಮಾತಿಗೆ ಬೆಲೆ ನೀಡದ ಎಐಸಿಸಿ ಅವರಿಗೆ ಮರಳಿ ಟಿಕೆಟ್ ನೀಡಿದೆ.
ಇನ್ನುಳಿದಂತೆ ಕಿತ್ತೂರಿನಿಂದ ಕಿತ್ತೂರಿನಿಂದ ಬಾಬಾ ಸಾಹೇಬ್, ಶಿರಸಿಯಲ್ಲಿ ಭೀಮಾ ನಾಯ್ಕ್, ಮುಧೋಳದಿಂದ ರಾಮಪ್ಪ ಸೇರಿದಂತೆ ಒಟ್ಟು 42 ಕ್ಷೇತ್ರಗಳಿಗೆ ಇಂದು ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಯಾವ್ಯಾವ ಕ್ಷೇತ್ರಗಳು ಬಂಡಾಯದ ಬೇಗೆಯನ್ನು ಹೊಂದಿವೆಯೋ ಅಂತಹ ಕಗ್ಗಂಟಿನ ಕ್ಷೇತ್ರಗಳನ್ನು ಎಐಸಿಸಿ ಇನ್ನೂ ತನ್ನ ಬಳಿಯೇ ಇಟ್ಟುಕೊಂಡಿದ್ದು ಮೂರನೇ ಪಟ್ಟಿಯಲ್ಲಿ ಕಗ್ಗಂಟಿನ ಕ್ಷೇತ್ರಗಳ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆಯಿದೆ.