ರಾಜ್ಯದಲ್ಲಿ SDPI ನಿಷೇಧ ಮಾಡಬೇಕು ಎನ್ನುವುದು ಬಿಜೆಪಿ ಪಕ್ಷದ ಪುರಾತನ ಆಗ್ರಹ. ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ಕಾವಲ ಭೈರಸಂದ್ರ ಗಲಭೆ ಬಳಿಕ ಇದೀಗ ಸಮಯ ಕೂಡಿ ಬಂದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾಗಿರುವ ಬಹುತೇಕರು SDPI ನಿಷೇಧ ಮಾಡಬೇಕು, ಮಾಡುತ್ತೇವೆ ಎನ್ನುವ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಸ್ವತಃ ಸಿದ್ದರಾಮಯ್ಯ ಕೂಡ SDPI ನಿಷೇಧ ಮಾಡಲು ಸಾಕ್ಷ್ಯವಿದ್ದರೆ ಮಾಡಲಿ, ನಾವೇನು ಬೇಡ ಎನ್ನುವುದಿಲ್ಲ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಆದರೆ ಬಿಜೆಪಿ ಸರ್ಕಾರ ಮಾತ್ರ ಇನ್ನೂ ಕೂಡ ಸಾಕಷ್ಟು ಸಾಕ್ಷ್ಯ ಸಂಗ್ರಹ ಮಾಡುವ ಕೆಲಸದಲ್ಲೇ ನಿರತವಾಗಿದೆ.
ಗುರುವಾರ 20/08/2020 ರಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಬಹುತೇಕ ಸಚಿವರು SDPI ನಿಷೇಧ ಮಾಡಬೇಕು ಎನ್ನುವ ವಿಚಾರಕ್ಕೆ ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಿಷೇಧ ಮಾಡಬೇಕು ಎನ್ನುವ ಜೊತೆಗೆ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದವರಿಂದಲೆ ರಿಕವರಿ ಕೂಡ ಮಾಡಬೇಕು ಎನ್ನುವ ತೀರ್ಮಾನ ಮಾಡಲಾಯಿತು. ಇದನ್ನು ಎಲ್ಲಾ ಸದಸ್ಯರು ಸ್ವಾಗತ ಮಾಡಿದ್ದಾರೆ ಎಂದಿದ್ದಾರೆ. ಆದರೆ ಸಿಎಂ ಬಿ.ಎಸ್ ಯಡಿಯೂರಪ್ಪ ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸಿ ಅಂತಿಮ ನಿರ್ಧಾರ ಮಾಡಲಿದ್ದಾರೆ ಎಂದಿದ್ದಾರೆ.

SDPI ನಿಷೇಧಕ್ಕೆ ಹೊಸ ಕಾನೂನು ಜಾರಿ..?
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿರುವ ಕಾನೂನು ಸಚಿವ ಮಾಧುಸ್ವಾಮಿ, SDPI ಹಾಗೂ PFI ನಿಷೇಧ ಮಾಡುವ ಬಗ್ಗೆ ಗೃಹ ಇಲಾಖೆ ಮತ್ತು ಕಾನೂನು ಇಲಾಖೆ ದಾಖಲೆ ಕಲೆ ಹಾಕುತ್ತಿದ್ದು, ಆ ಬಳಿಕ ನಿಷೇಧ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಹೊಸ ಕಾಯಿದೆ ತಂದರೆ ನಿಷೇಧ ಮಾಡಬಹುದಾ..? ಎನ್ನುವ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಅಷ್ಟೆ, ಈ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ ಎಂದಿದ್ದಾರೆ. ಆದರೆ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಸಂಬಂಧಿಸಿದ ಕಾಯ್ದೆ ಪ್ರಕಾರ ನಿಷೇಧ ಮಾಡಬಹುದಾ..? ಎಂದು ಕೂಡ ಚರ್ಚೆ ಮಾಡಿದ್ದೇವೆ ಅಂತಾನೂ ತಿಳಿಸಿದ್ದಾರೆ ಕಾನೂನು ಸಚಿವ ಮಾಧುಸ್ವಾಮಿ.
ಇನ್ನೂ ಮುಂದುವರಿದು ನಿಷೇಧ ಮಾಡಲು ಕಾನೂನಿನಲ್ಲಿ ತಿದ್ದುಪಡಿಗೆ ಅವಕಾಶ ಇದೆಯಾ ಎಂದು ಪರಿಶೀಲಿಸುತ್ತೇವೆ. ಆದರೆ ಯಾವುದೇ ನಿರ್ದಿಷ್ಟ ನಿರ್ಧಾರ ಕೈಗೊಂಡಿಲ್ಲ. ಅಪರಾಧ ಚಟುವಟಿಕೆಗಳಲ್ಲಿ ಶಾಮೀಲಾಗಿರುವುದು ಸಾಬೀತಾರೆ ನಿಷೇಧ ಮಾಡಲು ಹಿಂಜರಿಯಲ್ಲ ಎಂದು ಕಟುವಾಗಿ ಹೇಳಿದ್ದಾರೆ. ಇನ್ನೂ SDPI ಬಗ್ಗೆ ಇದುವರೆಗೂ ಪೊಲೀಸ್ ಇಲಾಖೆಗೆ ಪರಿಣಾಮಕಾರಿ ಸಾಕ್ಷ್ಯಗಳು ದೊರೆತಿಲ್ಲ. ಆ ಸಾಕ್ಷ್ಯಗಳನ್ನು ಕಲೆಹಾಕಿ ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ಕೊಡಲಾಗಿದೆ. ಅದೂ ಅಲ್ಲದೆ SDPI ರಾಜಕೀಯ ಪಕ್ಷವಾಗಿದೆ. ಹಾಗಾಗಿ ನಿಷೇಧಕ್ಕೆ ಯಾವೆಲ್ಲಾ ಕಾನೂನು ಅವಕಾಶಗಳಿವೆ ಅಂತ ಪರಿಶೀಲಿಸಲಾಗುತ್ತಿದೆ ಎನ್ನುವ ಮಾತುಗಳನ್ನು ಹೇಳಿದ್ದಾರೆ.

ಫಲ ಕೊಡುವ ವೃಕ್ಷವನ್ನು ಯಾರು ಕಡಿಯುತ್ತಾರೆ..?
ಹೌದು, SDPI ಎನ್ನುವ ರಾಜಕೀಯ ಪಕ್ಷ, ಬಿಜೆಪಿ ಪಾಲಿಗೆ ಫಲ ಕೊಡುವ ವೃಕ್ಷವಾಗಿದೆ. ಅದೇ ಕಾರಣದಿಂದ ಬಿಜೆಪಿ ಪಕ್ಷ ಇಕ್ಕಟ್ಟಿಗೆ ಸಿಲುಕಿರುವಾಗಲೂ ನಿಷೇಧ ಮಾಡಲು ಹಿಂದೆ ಮುಂದೆ ನೋಡುತ್ತಿದೆ. ಫಲ ಕೊಡುವ ವೃಕ್ಷವನ್ನು ಕತ್ತರಿಸಿದರೆ ಅದರಿಂದ ಆಗುವ ಲಾಭ ನಷ್ಟದ ಬಗ್ಗೆ ಲೆಕ್ಕಾಚಾರ ಮಾಡಲಾಗುತ್ತಿದೆ. ಸುಖಾಸುಮ್ಮನೆ SDPI ನಿಷೇಧ ಮಾಡುವ ಮೂಲಕ ತಮಗೆ ಆಗುತ್ತಿರುವ ಅನುಕೂಲವನ್ನೇ ತಾವೇ ಯಾಕೆ ಕೆಡಿಸಿಕೊಳ್ಳಬೇಕು ಎನ್ನುವ ಲೆಕ್ಕಾಚಾರ ಭಾರತೀಯ ಜನತಾ ಪಾರ್ಟಿಯೊಳಗೆ ಇದೆ.
SDPI ನಿಂದ ಬಿಜೆಪಿಗೆ ಏನು ಲಾಭ..?
ಚುನಾವಣಾ ಅಖಾಡಲ್ಲಿ ಕಾಂಗ್ರೆಸ್ ಜೊತೆಗೆ SDPI ಸ್ಪರ್ಧೆ ಮಾಡಿದರೆ ಮುಸ್ಲಿಂ ಸಮುದಾಯದ ಮತಗಳು ವಿಭಜನೆ ಆಗುವುದು ಖಂಡಿತ. ಎಷ್ಟು ಪ್ರಮಾಣದ ಮತಗಳನ್ನು SDPI ಅಭ್ಯರ್ಥಿ ಪಡೆದುಕೊಂಡರೂ ಅದು ಭಾರತೀಯ ಜನತಾ ಪಾರ್ಟಿಗೆ ಅನುಕೂಲ ಎನ್ನುವುದು ರಾಜಕೀಯ ಲೆಕ್ಕಾಚಾರ. ಇದೇ ಕಾರಣಕ್ಕೆ SDPI ನಿಷೇಧ ಮಾಡುವ ತಾಕತ್ತು ನಿಮ್ಮ ಸರ್ಕಾರಕ್ಕೆ ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಸವಾಲು ಹಾಕಿದ್ದರು. ಸರ್ಕಾರ ಮಾತ್ರ ಬಹಿರಂಗವಾಗಿ ನಿಷೇಧ ನಿಷೇಧ ಎಂದು ಹೋದಲ್ಲಿ ಬಂದಲ್ಲಿ ಪ್ರಸ್ತಾಪಿಸುತ್ತಿದೆ. ಆದರೆ ನಿಷೇಧ ಮಾಡಲು ಕಾನೂನು ತೊಡಕಿನ ಬಗ್ಗೆ ಹೇಳಿಕೊಂಡು ಕಾಲಹರಣ ಮಾಡುತ್ತಿದೆ.. SDPI ನಿಷೇಧ ಮಾಡಲು ಸರ್ಕಾರಕ್ಕೆ ಒಲವಿದೆಯೋ ಇಲ್ಲವೋ ಎಂದು ಬಿಜೆಪಿ ಕಾರ್ಯಕರ್ತರಿಗೇ ಅನುಮಾನ ಬಂದಿದೆ.